ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ, ಬ್ರಹ್ಮಾವರ ಇವರುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 07/07/2023 ರಂದು ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ವನಮಹೋತ್ಸವವನ್ನು ಕೃಷಿ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಶಾಂತ್ ಶೆಟ್ಟಿ, ಉಪನ್ಯಾಸಕರು, ಎಸ್.ಎಮ್.ಎಸ್ ಪದವಿ ಕಾಲೇಜು, ಬ್ರಹ್ಮಾವರ ಇವರು ರಾಷ್ಟ್ರೀಯ ಸೇವಾ ಯೋಜನೆಯ ಇತಿಹಾಸ,ಉದ್ದೇಶಗಳ ಬಗ್ಗೆ ತಿಳಿಸುತ್ತಾ ರಾಷ್ಟ್ರೀಯ ಸೇವಾ ಯೋಜನೆಯಿಂದ ವ್ಯಕ್ತಿಯ ಜೀವನದ ಉನ್ನತೀಕರಣ ಸಾಧ್ಯ ಮತ್ತು ಸೇವಾ ಮನೋಭಾವದಿಂದ ಜೀವನದ ಪರಿಕಲ್ಪನೆ, ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯಗಳನ್ನು ರೂಪಿಸಿ ದೇಶದ ಪ್ರಜೆಗಳಲ್ಲಿ ಮಾನವೀಯ ಮೌಲ್ಯಗಳ ಕುರಿತಾದ ಜಾಗೃತಿಯನ್ನು ಮೂಡಿಸಿ ದೇಶವನ್ನು ಮಾನವೀಯತೆಯ ದೇಶವನ್ನಾಗಿಸಲು ಸಹಕಾರಿಯಾಗಿದೆ ಎಂದರು.

ಡಾ.ಜಯಪ್ರಕಾಶ್.ಆರ್, ಸಹಾಯಕ ಕುಲಸಚಿವರು, ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ, ಬ್ರಹ್ಮಾವರ ಇವರು ಮಾತನಾಡಿ ವನಮಹೋತ್ಸವದ ಇತಿಹಾಸ, ಉದ್ದೇಶಗಳ ಕುರಿತಾಗಿ ವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷಣ ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಬದುಕು ನೆಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅತ್ಯಗತ್ಯವಾಗಿದ್ದು ಅದಕ್ಕಾಗಿ ನಾವು ಗಿಡ-ಮರಗಳನ್ನು ಹೆಚ್ಚು ಹೆಚ್ಚಾಗಿ ನೆಟ್ಟು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ರೀತಿಯ ಅರಣ್ಯೀಕರಣವನ್ನು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸತತವಾಗಿ ಹಮ್ಮಿಕೊಂಡರೆ ದಿನೇ ದಿನೇ ಹೆಚ್ಚುತ್ತಿರುವ ತಾಪಮಾನವನ್ನು ತಗ್ಗಿಸಿ ವಾತಾವರಣವನ್ನು ತಂಪಾಗಿಡಲು ಸಹಕಾರಿಯಾಗುತ್ತದಲ್ಲದೆ ವನ್ಯ ಪ್ರಾಣಿಗಳ ಹಾವಳಿಯನ್ನು ತಗ್ಗಿಸಬಹುದಾಗಿದೆ ಎಂದರು.
ಕಾರ್ಯಕ್ರಮವನ್ನು ಡಾ.ಕೆ.ವಿ.ಸುಧೀರ್ ಕಾಮತ್, ಪ್ರಾಂಶುಪಾಲರು, ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ, ಬ್ರಹ್ಮಾವರ ಇವರು ಪ್ರಾಸ್ತಾವಿಕ ನುಡಿಯನ್ನು ನುಡಿದು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು, ಡಾ.ಬಿ.ಧನಂಜಯ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ಇವರು ವನಮಹೋತ್ಸವದಲ್ಲಿ ನೆಡಲಾಗುವ ಗಿಡಗಳ ಮಹತ್ವವನ್ನು ವಿವರಿಸಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಡಾ.ಜಿ.ಬಿ. ಸಂತೋಷ್ ಗೌಡ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ.ವಿನೋದ್.ವಿ.ಆರ್, ಡಾ.ಜಯಪ್ರಕಾಶ್. ಎಸ್.ಎಮ್ ಮತ್ತು ಡಾ.ಶ್ರೀದೇವಿ.ಎ.ಜಕ್ಕೇರಾಳ್ ಉಪಸ್ಥಿತರಿದ್ದರು. ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರದ ಎಲ್ಲಾ ವಿಜ್ಞಾನಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಗೂ ಡಿಪ್ಲೋಮಾ ಕೃಷಿ ಮಹಾವಿದ್ಯಾಲಯ, ಬ್ರಹ್ಮಾವರದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
















Leave a Reply