
ಕೋಟ: ಕೇಂದ್ರ ಸರಕಾರದ ಶಿಕ್ಷಣ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಖರಗ್‍ಪುರ ಪಶ್ಚಿಮ ಬಂಗಾಳದ ವಿದ್ಯಾ ಸಂಸ್ಥೆಗೆ 2023-24ನೇ ಸಾಲಿನ ಬಾಹ್ಯಾಕಾಶ ಸಂಶೋಧನಾ ಶಿಕ್ಷಣದ ವಿಭಾಗದ ಇಂಜಿನಿಯರ್ ಪದವಿ ಶಿಕ್ಷಣ ಪಡೆಯಲು ಉಡುಪಿ ಜಿಲ್ಲೆಯಿಂದ ಪ್ರಣಮ್ಯ ಜಿ. ಹೆಚ್. ಆಯ್ಕೆಯಾಗಿರುತ್ತಾಳೆ.
ಇವರು ತೆಕ್ಕಟ್ಟೆ ಶಿಕ್ಷಕ ದಂಪತಿಗಳಾದ ಹೆರಿಯ ಮತ್ತು ಗುಲಾಭಿ ಇವರ ಸುಪುತ್ರಿಯಾಗಿರುತ್ತಾರೆ. ಯಶಸ್ವೀ ಕಲಾವೃಂದ ಕೊಮೆ-ತೆಕ್ಕಟ್ಟೆ ಸಂಸ್ಥೆಯಲ್ಲಿ ಯಕ್ಷಗಾನ ಕಲಾವಿದರಾಗಿದ್ದು, ನೃತ್ಯ, ಗಾಯನ, ಚಿತ್ರಕಲೆ, ನಿರೂಪಣೆ, ಉಪನ್ಯಾಸ, ಚರ್ಚಾ ವಿಭಾಗದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ಶಾಲಾ, ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ ಕಾರ್ಯಕ್ರಮ ನೀಡುತ್ತಾ ಗುರುತಿಸಿಕೊಂಡಿದ್ದಾರೆ. ಅಂತರ್ ಕಾಲೇಜು ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾಗಿ, ಯುವ ಸಂವಾದ ಕಾರ್ಯಕ್ರಮದಲ್ಲಿ ಬಹುಮಾನವನ್ನು ಮುಡಿಗೇರಿಸಿಕೊಂಡ ಪ್ರತಿಭಾ ಸಂಪನ್ನೆ ಪ್ರಣಮ್ಯ. ಪಠ್ಯೇತರ ಚಟುವಟಿಕೆಯನ್ನು ಹವ್ಯಾಸಿಯಾಗಿ ಬೆಳೆಸಿಕೊಂಡ ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವಿಶ್ವ ವಿನಾಯಕ ನ್ಯಾಶನಲ್ ಇಂಗ್ಲೀಷ್ ಮೀಡಿಯಂ ಶಾಲೆ ತೆಕ್ಕಟ್ಟೆಯಲ್ಲಿ ಪೂರೈಸಿಕೊಂಡು ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (LLN) 2021ರಲ್ಲಿ ಉತ್ತೀರ್ಣರಾಗಿರುತ್ತಾಳೆ.
ಪದವಿ ಪೂರ್ವ ಶಿಕ್ಷಣವನ್ನು ವೆಂಕಟರಮಣ ಶಿಕ್ಷಣ ಸಂಸ್ಥೆ ಕುಂದಾಪುರದಲ್ಲಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದಿರುತ್ತಾಳೆ. ತಂದೆ-ತಾಯಿ ಪ್ರೋತ್ಸಾಹ, ಗುರು-ಹಿರಿಯರ ಮಾರ್ಗದರ್ಶನದಿಂದ ಜೆ.ಇ.ಇ. ಮೈನ್ಸ್ ಪರೀಕ್ಷೆಯನ್ನು ಬರೆದು 2ನೇ ಹಂತಕ್ಕೆ ಆಯ್ಕೆಯಾಗಿ ಜೆ.ಇ.ಇ. ಅಡ್ವಾನ್ಸ್ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾಗಿರುತ್ತಾಳೆ. ಇವಳ ಶಿಕ್ಷಣ ಸಾಧನೆಗೆ ವೇದಾಂತು ಶಿಕ್ಷಣ ಸಂಸ್ಥೆಯು ಆನ್-ಲೈನ್ ಶಿಕ್ಷಣ ತರಬೇತಿ ಮತ್ತು ಅಧ್ಯಯನದ ಮೆಟೀರಿಯಲ್ಸ್ ನೀಡಿ ಅನುಕೂಲ ಮಾಡಿಕೊಟ್ಟಿದೆ. ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ 2023-24ನೇ ಸಾಲಿನಲ್ಲಿ ಬಿ.ಟೆಕ್. ಇಂಜಿನಿಯರ್ ಪದವಿ ಶಿಕ್ಷಣವನ್ನು ಪಡೆಯಲು ಬಾಹ್ಯಾಕಾಶ ತಂತ್ರಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.
ಬಾಲ್ಯದಿಂದಲೂ ಐ.ಐ.ಟಿ ವಿದ್ಯಾಸಂಸ್ಥೆಯ ಬಾಹ್ಯಾಕಾಶದಲ್ಲಿ ಅಧ್ಯಯನ ನಡೆಸಬೇಕೆಂಬ ಹಂಬಲದ ಕನಸ್ಸಿಗೆ ಅವಕಾಶ ದೊರೆತಂತಾಗಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಖರಗ್‍ಪುರ ಪಶ್ಚಿಮ ಬಂಗಾಳ ಇಲ್ಲಿ ನಾಲ್ಕು ವರ್ಷದ ಬಿ.ಟೆಕ್ ಪದವಿ ಮತ್ತು ಎರಡು ವರ್ಷ ಎಂಟೆಕ್ ಪದವಿ ಶಿಕ್ಷಣ ಪಡೆಯಲಿದ್ದಾರೆ. ಇವರ ಶಿಕ್ಷಣ ಸಾಧನೆ ಹಲವಾರು ವಿದ್ಯಾರ್ಥಿಗಳಿಗೆ ಆದರ್ಶವಾಗಲಿದೆ ಹಾಗೂ ಭವಿಷ್ಯದಲ್ಲಿ ಉತ್ತುಂಗದ ಕೀರ್ತಿಯನ್ನು ಪಡೆಯಲಿ ಎಂಬ ಶುಭದ ಹಾರೈಕೆ ಊರಿನ ವಿದ್ಯಾಭಿಮಾನಿಗಳಿಂದ ವ್ಯಕ್ತವಾಗಿದೆ.
Leave a Reply