Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನರೇಂದ್ರ ಕುಮಾರ್ ಕೋಟ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಕೋಟ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಅಧ್ಯಾಪಕ ನರೇಂದ್ರ ಕುಮಾರ್ ಕೋಟ ಅವರಿಗೆ ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಸಾಹಿತ್ಯಿಕ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರಲ್ಲಿ ಸದಾ ಹೊಸತನದ ತುಡಿತ, ಮುಖದಲ್ಲಿ ನಗು, ಸೌಮ್ಯ ಸ್ವಭಾವ, ಸಾಹಿತಿಯಾಗಿ, ಮಕ್ಕಳಿಗೆ ಗುರುವಾಗಿ, ಹಲವಾರು ಯುವ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿ, ಹಿರಿಯರಿಗೆ ಆಪ್ತರಲ್ಲಿ ಒಬ್ಬರಾಗಿದ್ದಾರೆ, ಪಾದರಸದಂತೆ ದಿನ ನಿತ್ಯ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ಒಂದಿಷ್ಟು ಪ್ರೇರಣೆಯ ಮಾತುಗಳನ್ನಾಡಿ, ಸ್ಥಳೀಯ ಸಂಘ ಸಂಸ್ಥೆಗಳಿಗೆ ದಾರಿ ದೀಪವಾಗಿ ಸೃಜನಶೀಲ ವ್ಯಕ್ತಿತ್ವಕ್ಕೆ ಕೈಗನ್ನಡಿಯಂತಿರುವ ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು ಹಲವಾರು ವರ್ಷಗಳಿಂದ ಅಧ್ಯಾಪನ ವೃತ್ತಿಯಲ್ಲಿ ಹೊಸತನವನ್ನು ಅಳವಡಿಸಿಕೊಂಡು ಗಮನ ಸೆಳೆದವರು. 

ಶಾಲಾ ಅವಧಿಯಲ್ಲಿ ಬೋಧನೆಯೊಂದಿಗೆ ಪಠ್ಯೇತರ ಶಿಕ್ಷಣವನ್ನು ಬೋಧಿಸಿ ಮಕ್ಕಳ ಬೌದ್ಧಿಕ ವಿಕಸನದ ದಾರಿ ದೀಪವಾಗಿದ್ದಾರೆ. ಮಕ್ಕಳಿಗಾಗಿ ಬೇಸಿಗೆ ಶಿಬಿರಗಳ ಆಯೋಜನೆ, ಯೂಟ್ಯೂಬ್‌ ಚಾನೆಲ್‌ ಮೂಲಕ ಪರೀಕ್ಷೆ ಸಿದ್ಧತೆ, ಬದಿಕಿನ ಸವಾಲುಗಳು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷೆ ಸಿದ್ಧತೆಗಾಗಿ ಶೈಕ್ಷಣಿಕ ಮಾಲಿಕೆ ಹೀಗೆ ಮಕ್ಕಳ ಮನೋವಿಕಸನಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಎಲ್ಲರ ಮೆಚ್ಚಿನ ಶಿಕ್ಷಕರೆಂದೆನಿಸಿಕೊಂಡಿದ್ದಾರೆ.

ಭಾರತ ಸರ್ಕಾರದ ದ.ಕ ಜಿಲ್ಲಾ ಯುವ ಪುರಸ್ಕಾರ, ರಾಜ್ಯ ಮಟ್ಟದ ಕಾವ್ಯ ಶ್ರೀ ಪುರಸ್ಕಾರ, ದಿ.ರಾಜೇಂದ್ರ ಶೆಟ್ಟಿ ಸ್ಮಾರಕ ಪುರಸ್ಕಾರ,  ರಾಷ್ಟ್ರಮಟ್ಟದ ರವಿರೊಹೇಡ್‌ಕರ್ ಪುರಸ್ಕಾರ, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ರಾಜ್ಯ ಮಟ್ಟದ ಕಾರಂತ ಸದ್ಭಾವನ ಪುರಸ್ಕಾರ,  ರಾಷ್ಟ್ರಮಟ್ಟದ ಆರ್ಯಭಟ ಪುರಸ್ಕಾರ, ರಾಷ್ಟ್ರಮಟ್ಟದ ರವೀಂದ್ರ ನಾಥ್ ಟ್ಯಾಗೋರ್ ರಾಷ್ಟ್ರೀಯ ಪುರಸ್ಕಾರ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಲಭಿಸಿದೆ.

ಇವರ ಸಾಹಿತ್ಯ ಕೃಷಿಯಲ್ಲಿ ಈಗಾಗಲೇ ೨೮ ಪುಸ್ತಕಗಳು ಹೊರಹೊಮ್ಮಿದ್ದು ಇನ್ನೂ ೧೪ಕ್ಕೂ ಹೆಚ್ಚು  ಪುಸ್ತಕಗಳು ಪ್ರಕಟಣೆಯ ಅಂತಿಮ ಹಂತದಲ್ಲಿದೆ. ೨೦೦ ಕ್ಕೂ ಮಿಕ್ಕಿದ ಕವನಗಳು, ೨೩ ಕಥೆಗಳು, ೧೫೦ ಲೇಖನಗಳು, ೧೬ ವಿಶೇಷ ಅಂಕಣ ಪ್ರಕಟಗೊಂಡಿದ್ದು, ದಿನ ಪತ್ರಿಕೆ, ವಾರ ಪತ್ರಿಕೆಯಲ್ಲಿ ಇವರ ಲೇಖನ ಕವನಗಳು ರಾರಾಜಿಸುತ್ತಿರುತ್ತದೆ. ಅಲ್ಲದೇ ಕಾರಂತರ ವಿಷಯಾಧರಿತ ಸುಗಂಧಿ ಚಲನಚಿತ್ರ ನಿರ್ಮಾಣ ಮಾಡಿ ಅದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಹಲವಾರು ಕಿರುಚಿತ್ರಗಳು ಕೂಡಾ ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರದು. ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ  ಪ್ರಶಸ್ತಿ ಪ್ರತಿಷ್ಟಾನದ ಕಾರ್ಯದರ್ಶಿಯಾಗಿ ಕಾರಂತ ಥೀಂ ಪಾರ್ಕ್‌ನ್ನು ಸದಾ ಚಟುವಟಿಕೆಯಲ್ಲಿ ಇರುವಂತೆ ಮಾಡಿರುವ ಹೆಮ್ಮೆ ಇವರದ್ದು.

Leave a Reply

Your email address will not be published. Required fields are marked *