
ಕೋಟ: ಜಿಲ್ಲಾಡಳಿತ ಹಾಗೂ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ಡಾ.ಅರುಣ್.ಕೆ , ಲಾರಿ ಮಾಲಕರು ಕಾನೂನು ಬದ್ಧವಾಗಿ ಮಣ್ಣು ಇನ್ನಿತರ ಕಟ್ಟಡ ಸಲಕರಣೆ ಸಾಗಿಸಬೇಕು ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬ ಆದೇಶದ ಹಿನ್ನಲ್ಲೆಯಲ್ಲಿ ಕಳೆದೊಂದು ವಾರದಿಂದ ಲಾರಿ ಮಾಲಕರು ತಮ್ಮ ವಾಹನಗಳನ್ನು ರೋಡಿಗಳಿಸದೆ ಪ್ರತಿಭಟನೆ ಕಡೆ ಮುಖ ಮಾಡುವಂತ್ತಾಗಿದೆ.

ಮಂಗಳವಾರ ಕೋಟ ವಲಯದ ವತಿಯಿಂದ ಕೋಟ ಮೂರ್‍ಕೈ ಬಳಿ ಸಭೆ ಸೇರಿ ಜಿಲ್ಲಾ ಪೋಲೀಸ್ ಇಲಾಖೆ ವಿರುದ್ಧ ಬೃಹತ್ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿತು.
ಕೋಟ ಮೂರ್‍ಕೈಯಿಂದ ಕೋಟ ಆರಕ್ಷಕ ಠಾಣೆಯವರೆಗೆ ಪಾದಯಾತ್ರೆ ಹಮ್ಮಿಕೊಂಡು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ನಿಲುವಿಗೆ ಆಕ್ಷೇಕ ವ್ಯಕ್ತಪಡಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಾರಿ ಮಾಲಕರ ಸಂಘದ ಪ್ರಮುಖರಾದ ಭೋಜ ಪೂಜಾರಿ ಯಥಾಸ್ಥಿತಿ ಯಾವುದೇ ಸಮಸ್ಯೆಗಳಿಲ್ಲದೆ ವ್ಯವಹರಿಸಿಕೊಂಡು ಬರುತ್ತಿರುವ ಲಾರಿ ಮಾಲಕ ಹಾಗೂ ಚಾಲಕರಿಗೆ ಈ ಆದೇಶ ಸಂಕಷ್ಟವನ್ನು ತಂದಿರಿಸಿದೆ. ಅಲ್ಲದೆ ಇದರಿಂದ ಕೂಲಿಕಾರ್ಮಿಕರ ಹೊಟ್ಟೆಯ ಮೇಲೆ ಬರೆ ಎಳೆದಂತ್ತಾಗಿದೆ ಕೆಲಸ ಕಾರ್ಯಗಳಿಲ್ಲದೆ ಕಾರ್ಮಿಕರು ಅಂತತ್ರರಾಗಿದ್ದಾರೆ. ಮತ್ತೊಂದೆಡೆ ಮನೆ ಇನ್ನಿತರ ಕಟ್ಟಡ ಕಟ್ಟುವವರಿಗೂ ಕಲ್ಲು ಮಣ್ಣು ಇನ್ನಿತರ ಕಟ್ಟಡ ಸಾಮಾಗ್ರಿಗಳಿಲ್ಲದೆ ಅಯೋಮಯ ಸ್ಥಿತಿ ಸೃಷ್ಠಿಯಾಗಿದೆ.

ಕಾನೂನು ಮಾಡಿ ಆದರೆ ಈ ಕರಾವಳಿ ಭಾಗದಲ್ಲಿ ತುಂಡು ಭೂಮಿಗಳೆ ಇರುವುದು ಇಲ್ಲಿ ಮಣ್ಣು ಇನ್ನಿತರ ಕಟ್ಟಡ ಸಾಮಾಗ್ರಿ ಸಾಗಿಸಲು ಕಾನೂನು ಬದ್ಧವಾಗಿ ವ್ಯವಹರಿಸಲು ಸಾಧ್ಯವಿಲ್ಲ ಈ ಕೂಡಲೆ ಪೋಲಿಸ್ ವರಿಷ್ಠಾಧಿಕಾರಿಗಳ ಆದೇಶವನ್ನು ಮರುಪರಿಶೀಲಿಸಬೇಕು ಹಿಂದಿನಂತೆ ಯಥಾಸ್ಥಿತಿ ಸಾಗಣೆಗೆ ಅವಕಾಶ ಕಲ್ಪಿಸಬೇಕು ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.
ಕೋಟ ಮೂರ್‍ಕೈ ಬಳಿ ಬಿಡುಬಿಟ್ಟ ಸಂಘಟನೆ
ಕೋಟ ಹೈಸ್ಕೂಲ್ ಮೂರ್‍ಕೈ ಬಳಿ ಲಾರಿ ಮಾಲಕ ಚಾಲಕ ಸಂಘ ಕೋಟ ವಲಯ ನೂರಾರು ಪ್ರತಿಭಟನಾಕಾರರು ಅಲ್ಲೆ ಠಿಕಾಣಿ ಹೂಡಿದ್ದು ಸಮಸ್ಯೆ ಬಗೆಹರಿಯುವ ವರೆಗೂ ಇಲ್ಲಿಂದ ಕದಲುವುದಿಲ್ಲ ಎಸ್ ಪಿ ಸಾಹೇಬರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಸಬೇಕು ನಮ್ಮ ಜೀವನದ ಜೊತೆ ಚಲ್ಲಾಟ ಆಡದಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ವೃತ್ತ ನೀರೀಕ್ಷಕರು.
ಈ ವಿಚಾರ ತಿಳಿಯುತ್ತಿದ್ದಂತೆ ಕೋಟ ಠಾಣೆಯ ಅಧಿಕಾರಿಗಳು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಪ್ರಯತ್ನಿಸಿದರು ಆದರೆ ಪ್ರತಿಭಟನಾಕಾರರು ತಮ್ಮ ಪಾದಯಾತ್ರೆಯನ್ನು ಮುಂದುವರೆಸಿ ಕೋಟ ಠಾಣೆಯತ್ತ ಧಾಮಿಸಿದರು. ಕೋಟ ಠಾಣೆಗೆ ಆಗಮಿಸಿದ ಬ್ರಹ್ಮಾವರ ವೃತ್ತ ನೀರೀಕ್ಷಕ ದಿವಾಕರ್ ಪಿ.ಎಂ ಲಾರಿ ಚಾಲಕ ಮಾಲಕರ ಸಮಸ್ಯೆಯನ್ನು ಆಲಿಸಿ ಮನವಿ ಸ್ವೀಕರಿಸಿದರು.
ವರಿಷ್ಠಾಧಿಕಾರಿಗಳು ಕಾನೂನು ಬದದ್ಧವಾಗಿ ಆದೇಶ ಮಾಡಿದ್ದಾರೆ ಇದರಲ್ಲಿ ಯಾವುದೇ ಉದ್ದೇಶಪೂರಕ ಕಾನೂನುಗಳನ್ನು ಜಾರಿಗೊಳಿಸಿಲ್ಲ ಇದ್ದ ವ್ಯವಸ್ಥೆಯನ್ನು ಸಮರ್ಪಕವಶಾಗಿ ಅನುಷ್ಠಾನಗೊಳಿಸಲು ಆದೇಶಿಸಿದ್ದಾರೆ ಪ್ರಸ್ತುತ ಸಮಸ್ಯೆಯನ್ನು ಎಸ್ ಪಿಯವರ ಗಮನಕ್ಕೆ ತರಲಾಗುವುದು ಎಂದರು. ಬ್ರಹ್ಮಾವರ ಠಾಣೆಯ ಠಾಣಾಧಿಕಾರಿ ರಾಜಶೇಖರ, ಕೋಟ ಆರಕ್ಷಕ ಅಧಿಕಾರಿ ಸುಧಾ ಪ್ರಭು, ಎಎಸ್‍ಐ ಜಯಪ್ರಕಾಶ್, ಗಣೇಶ್ ಪೈ, ಪ್ರತಿಭಟನಾಕಾರರಾದ ಸುಧೀರ್ ಮಲ್ಯಾಡಿ, ಮಹಾಬಲ ಪೂಜಾರಿ, ಜನಾರ್ದನ ಪೂಜಾರಿ, ವಿನೋದ್ ದೇವಡಿಗ, ಗಣೇಶ್ ಪೂಜಾರಿ, ವಿಜಯ್ ಮಹಾಕಾಳಿ, ರೆಹಮತ್ ಆಲಿ ಮತ್ತಿತರರು ಇದ್ದರು.
Leave a Reply