Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸುಜಯೀಂದ್ರ ಹಂದೆಯವರಿಗೆ ಕೈಲಾಸ ಕಲಾಕ್ಷೇತ್ರದ ಅಭಿಮಾನದ ಅಭಿವಂದನೆ

ಕೋಟ: ವೃತ್ತಿಯಲ್ಲಿ ಉಪನ್ಯಾಸಕರಾಗಿ, ಪ್ರವೃತ್ತಿಯಲ್ಲಿ ಅಪ್ಪಟ ಪಾರಂಪರಿಕ ಕಲಾವಿದರಾಗಿ, ಯಕ್ಷ ಗುರುಗಳಾಗಿ, ನಿರ್ದೇಶಕರಾಗಿ, ಭಾಗವತರಾಗಿ, ಗಮಕ ಗಾಯಕರಾಗಿ, ಸಂಘಟಕರಾಗಿ, ಸಾಹಿತಿಯಾಗಿ, ನಟನಾಗಿ, ವಾಗ್ಮಿಯಾಗಿ ಅನುಪಮ ಸಾಧನೆಗೈದ ಏಕವೇವಾದ್ವಿತಿಯ ಪ್ರತಿಭೆಯ ಸುಜಯೀಂದ್ರ ಹಂದೆಯವರ ಶೈಕ್ಷಣಿಕ ಮತ್ತು ಕಲಾವಲಯದ ಕೈಂಕರ್ಯ ನಿರಂತರವಾಗಿ ಸಾಗುತ್ತಿರಲಿ ಎಂದು ಹಾರೈಸುತ್ತ, ಧಾರವಾಡದಲ್ಲಿ ಡಾ. ರಾಧಾಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಸುಸಂದರ್ಭದಲ್ಲಿ ಅಭಿಮಾನದ ಸನ್ಮಾನವನ್ನು ಯಶಸ್ವೀ ಕಲಾವೃಂದ ನೆರವೇರಿಸಿಕೊಂಡಿದೆ.

ತೆಕ್ಕಟ್ಟೆ ಹಯಗ್ರೀವದಲ್ಲಿ ಸೆಪ್ಟೆಂಬರ್ 24ರಂದು ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಆಯೋಜಿಸಿದ ನಿರ್ದಿಗಂತ ತಂಡದ ನಾಟಕ ‘ಗಾಯಗಳು’ ಪ್ರದರ್ಶನದ ಸಂದರ್ಭದಲ್ಲಿ ಯಕ್ಷಗಾನದ ಪದ್ಯ ಸ್ತುತಿಯೊಂದಿಗೆ ಅಭಿಮಾನದ ಅಭಿವಂದನೆಯನ್ನು ಸಲ್ಲಿಸಿಕೊಂಡಿದೆ.

ಯುದ್ಧ ಹಾಗೂ ಕೋಮು ದ್ವೇಶದ ಹಲವಾರು ಘಟನೆಗಳನ್ನು ಇರಿಸಿಕೊಂಡ ರಂಗರೂಪ ಕವನ ನಿರ್ಮಾಣ ಆಗಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಸಾರುವ ನಾಟಕ ಗಾಯಗಳು. ಸಮಾಜದಲ್ಲಿ ಆಗಿರುವ ಹಲವಾರು ಗಾಯಗಳನ್ನು ಸರಿಪಡಿಸಿ, ಮುಂದಿನ ಪೀಳಿಗೆಗೆ ನೀಡಬೇಕಾದಂತಹ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಈ ಸಂಸ್ಥೆ ಸಾಗಿ ಅಲ್ಲಲ್ಲಿ ಶ್ರಮಿಸುವ ಕಾಯಕ ಶ್ಲಾಘನೀಯ ಎಂದು ರಂಗ ನಿರ್ದೇಶಕ ಡಾ. ಸದಾನಂದ ಬೈಂದೂರು ಮುಖ್ಯ ಅತಿಥಿಯಾಗಿ ಮಾತನ್ನಾಡಿದರು.

ರಂಗಭೂಮಿ ನಾಟಕ ಒಂದು ಕಡೆ ಅಳಿವಿನಂಚಿನಲ್ಲಿದೆಯಾದರೂ ಇನ್ನೊಂದು ಕಡೆ ಹೊಸ ಹುಡುಕಾಟದ ತುಡುಕು ಕಾಣಬಹುದು. ಮಕ್ಕಳಲ್ಲಿ ರಂಗಭೂಮಿಯ ಅಭಿರುಚಿಯನ್ನು ಬೆಳೆಸಿದರೆ ರಂಗಭೂಮಿ ಹೆಚ್ಚು ಕಾಲ ಉಳಿಯುವುದಕ್ಕೆ ಸಾಧ್ಯ ಎಂದು ಕಿರುತೆರೆ ಹಾಗೂ ಚಲನ ಚಿತ್ರ ನಟ ಪುನೀತ್ ಶೆಟ್ಟಿ ಕೋಟ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕøತ ಕೋಟ ಸುದರ್ಶನ ಉರಾಳ, ಭಾಗವತ ಹರೀಶ್ ಕಾವಡಿ, ಕಲಾವಿದ ಗಣೇಶ್ ಕೊಮೆ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಮಾ| ರಾಹುಲ್ ಮೆಂಡನ್, ಕು| ಪಂಚಮಿ ವೈದ್ಯ ಉಪಸ್ಥಿತರಿದ್ದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಕು| ಹರ್ಷಿತ ರಂಗಗೀತೆಯನ್ನು ಹಾಡಿದರು. ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಣೆ ಗೈದರು. ಬಳಿಕ ನಿರ್ದಿಗಂತ ತಂಡದ, ಡಾ. ಶ್ರೀಪಾದ ಭಟ್ ನಿರ್ದೇಶನದ ನಾಟಕ ‘ಗಾಯಗಳು ರಂಗದಲ್ಲಿ ಪ್ರಸ್ತುತಿಗೊಂಡಿತು.

ಧಾರವಾಡದಲ್ಲಿ ಡಾ. ರಾಧಾಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಯಕ್ಷ ಚಿಂತಕ ಹೆಚ್ ಸುಜಯೀಂದ್ರ ಹಂದೆ ಇವರಿಗೆ ಅಭಿಮಾನದ ಸನ್ಮಾನವನ್ನು ಯಶಸ್ವೀ ಕಲಾವೃಂದ ನೆರವೇರಿಸಿಕೊಂಡಿತು.

Leave a Reply

Your email address will not be published. Required fields are marked *