ಕಾರ್ಕಳ ತಾಲೂಕಿನ ಮಂಜರಪಲ್ಕೆ ಪ್ರದೇಶದ ಪಕಲದ ಚರ್ಚಿನ ಮುಂಭಾಗದಲ್ಲಿರುವ ಬೃಹದಾಕಾರದ ಬಂಡೆಗಲ್ಲಿನ ಮೇಲೆ ಜವಾಹರಲಾಲ್ ನೆಹರುರವರ ಉಲ್ಲೇಖವಿರುವ ಶಾಸನವಿದ್ದು ಇದನ್ನು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿ ದಿಶಾಂತ್ ದೇವಾಡಿಗ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ. 20ನೇ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವು 10 ಸಾಲುಗಳನ್ನು ಒಳಗೊಂಡಿದ್ದು, ಬಂಡೆಗಲ್ಲಿನ ಮೇಲೆ ಕೊರೆಯಲಾಗಿದೆ.
1937ರಲ್ಲಿ ನೆಹರೂರವರು ಕಾರ್ಕಳದಲ್ಲಿ ನಡೆದ ಸಮಾವೇಶದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದು ಆ ಮಾತುಗಳನ್ನು ಇಲ್ಲಿಯ ಜನತೆಗೆ ತಿಳಿಸಲು ಅಥವಾ ನೆಹರೂರವರೇ ಈ ಪ್ರದೇಶಕ್ಕೆ (ಮಂಜರಪಲ್ಕೆ) ಭೇಟಿ ನೀಡಿದ ಸಂಧರ್ಭದಲ್ಲಿ ಅವರ ಹೇಳಿರುವಂತಹ ಮಾತುಗಳು ಶಾಶ್ವತವಾಗಿ ಉಳಿಯಲು ಮತ್ತು ಅವರ ಭೇಟಿಯ ನೆನಪಿಗಾಗಿ ಈ ಶಾಸನವನ್ನು ಬಂಡೆಯ ಮೇಲೆ ಕೊರೆದಿರಬಹುದೆಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಸನ ಉಲ್ಲೇಖಿಸುವ ಅವರ ಮಾತುಗಳೆಂದರೆ
1. ನಾವು ಹೇಗೋ ನಮ್ಮಸಮಾವೇಶ ಹಾಗೆ ನಮ್ಮ ಚಿಂತ
2. ನೆಗಳು ನಮ್ಮ ನಡವಳಿಕೆಗಳು ಇವೆ ಅದ
3. ನ್ನು ರೂಪಿಸುವ ಶಕ್ತಿಗಳು ಭಾರತಾಂಬೆಯ
4. ಪುಣ್ಯ ಗರ್ಭದಲ್ಲಿ ಜನಿಸಿದ ನಾವೆಲ್ಲರೂ ಆಕೆಯ
5. ಅಕ್ಕರೆಯ ಮಕ್ಕಳು ಇಂದಿನ ಅಂದ ಚಂದದ ಕಂದ
6. ಗಳೇ ನಾಳಿನ ಭಾರತದ ತಂದೆ ತಾಯಿಗಳು. ನಾವು
7. ದೊಡ್ಡವರಾದರೆ ನಮ್ಮ ನಾಡು ದೊಡ್ಡದಾಗುತ್ತದೆ
8. ಹಾಗಲ್ಲದೆ ನಾವು ಸಣ್ಣತನದ ಸಂಕುಚಿತ
9. ಮನೋಭಾವನ ಭಾವದವರಾದರೆ ನಮ್ಮ ಭಾರತವು
10. ಕನಿಷ್ಟ ರಾಷ್ಟ್ರವೆನಿಸುತ್ತದೆ. – ಜವಾಹರಲಾಲ್ ನೆಹರು
ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ವಿಶಾಲ್ ರೈ.ಕೆ ಮತ್ತು ಜೀವನ್ ಸಹಕಾರ ನೀಡಿರುತ್ತಾರೆ.