ಕೋಟ: ಹೂವಿನಕೋಲು ರಂಗಪ್ರಕಾರವು ಮಕ್ಕಳಲ್ಲಿ ಪುರಾಣ ಜಾÐನವನ್ನೂ, ಭಾಷಾ ಸ್ಪಷ್ಟತೆಯನ್ನೂ ಹೆಚ್ಚಿಸುವುದರೊಂದಿಗೆ ಯಕ್ಷಗಾನ ರಂಗ ಪ್ರವೇಶಿಕೆಯ ಪೂರ್ವರಂಗವಾಗಿಯೂ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಸಾಹಿತಿ,ರಂಗಕರ್ಮಿ ನಿವೃತ್ತ ಉಪನ್ಯಾಸಕ ಉಪೇಂದ್ರ ಸೋಮಯಾಜಿ ನುಡಿದರು.
ಬುಧವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಸರಂಗ ಕೋಟ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಹೂವಿನಕೋಲು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾದ ನಿರ್ದೇಶಕ,ಪ್ರಸಾದನ ಕಲಾವಿದ ಗೋವಿಂದ ಉರಾಳ ಮಾತನಾಡಿ ನವರಾತ್ರಿ ಸಂದರ್ಭದಲ್ಲಿ ಹಿರಿಯ ಭಾಗವತರ ನಿರ್ದೇಶನದಲ್ಲಿ ಮಕ್ಕಳಿಂದಲೇ ಮನೆಮನೆಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಈ ಕಲೆ ನಶಿಸಿಹೋಗಬಾರದು, ಪಠ್ಯದೊಂದಿಗೆ ಪಠ್ಯೇತರ ಚಟುವಟಿಯಾಗಿ ನಿರಂತರವಾಗಿ ನಡೆಯುತ್ತಿರಬೇಕು ಎಂದರು.
ಕನ್ನಡ ಸಾಹಿತ್ಯಪರಿಷತ್ತಿನ ಬ್ರಹ್ಮಾವರದ ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಸುಧಾ ಮಣೂರುರವರ ನಿರ್ದೇಶನದಲ್ಲಿ ರಸರಂಗದ ಬಾಲಕ ಬಾಲಕಿಯರು ರಾಮಾಯಣದ ಆಖ್ಯಾನದ ಒಂದು ಭಾಗವನ್ನು ಪ್ರಸ್ತುತಪಡಿಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪುಷ್ಪಲತ ಹೊಳ್ಳ,ಶಾಲೆಯ ಎಸ್.ಡಿ.ಎಮ್.ಸಿ ಯ ಮುಖ್ಯಸ್ಥೆ ಮಹಾಲಕ್ಷ್ಮೀ ಸೋಮಯಾಜಿ,ಅಧ್ಯಾಪಕ ವೃಂದ, ಎಸ.ಡಿ.ಎಮ್.ಸಿ. ಸದಸ್ಯರು ಉಪಸ್ಥಿತರಿದ್ದರು. ರಸರಂಗದ ಅಧ್ಯಕ್ಷೆ ಸುಧಾ ಮಣೂರು ಕಾರ್ಯಕ್ರಮ ನಿರೂಪಿಸಿದರು.ಸದಸ್ಯೆ ಪಾರ್ವತಿ ಮಯ್ಯ ವಂದಿಸಿದರು.
ರಸರಂಗ ಕೋಟ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಹೂವಿನಕೋಲು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಸಾಹಿತಿ,ರಂಗಕರ್ಮಿ ನಿವೃತ್ತ ಉಪನ್ಯಾಸಕ ಉಪೇಂದ್ರ ಸೋಮಯಾಜಿ ಉದ್ಘಾಟಿಸಿದರು.