Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸ್ವಾತಂತ್ರೋತ್ಸವ ಮತ್ತು ಮಕ್ಕಳು

ಸ್ವಾತಂತ್ರೋತ್ಸವ ಎಂದ ಕೂಡಲೇ ಸರಕಾರಿ ಶಾಲೆಯ ಮಕ್ಕಳಿಗೆ ಹಬ್ಬ, ಬೆಳಿಗ್ಗೆ ಶಾಲೆಯಲ್ಲಿ ಜಾಥಾ, ಧ್ವಜಾರೋಹಣ, ಸಿಹಿ ತಿಂಡಿ ವಿತರಣೆ,ಸಾಂಸ್ಕೃತಿಕ ಕಾರ್ಯಕ್ರಮಗಳು,ಮಧ್ಯಾಹ್ನದ ಊಟ ದೊಂದಿಗೆ ಮಕ್ಕಳು ಮನೆಗೆ ಹೋಗುವುದರೊಂದಿಗೆ ಔಪಚಾರಿಕವಾಗಿ ಸ್ವಾತಂತ್ರೋತ್ಸವದ ಸಮಾಪನೆ ಆಗಿ ಬಿಡುತ್ತದೆ.

ಇದು ಸಾಮಾನ್ಯವಾಗಿ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಇರುವಲ್ಲಿ ನಡೆಯುತ್ತಿರುವ  ಪರಿಪಾಠ

ಆದರೆ, ಹೆಚ್ಚಿನ ಕಡೆ ಇಲಾಖೆಯ ಕಡ್ಡಾಯವಾದ ದ್ವಜರೋಹಣ ವನ್ನು ಮಾಡಿಸಿ ಮಕ್ಕಳಿಗೆ ಸಿಹಿತಿಂಡಿ ವಿತರಿಸಿ, 4 ಫೋಟೋ ತೆಗೆದು ದಾಖಲೆ ಸಿದ್ಧಪಡಿಸಿ ಮಕ್ಕಳಿಗಿಂತ ಮುಂಚೆಯೇ ಮನೆ ಸೇರಿಕೊಳ್ಳುವ ಶಿಕ್ಷಕರಿಗೇನು ಕೊರತೆಯಂತೂ ನಮ್ಮಲ್ಲಿ ಇಲ್ಲ.

ಇದು ಮಾಮೂಲಿಯಾಗಿ ಶಾಲೆಗಳಲ್ಲಿ ನಡೆಯುವ ಆಗಸ್ಟ್ 15 ರ ಸ್ವಾತಂತ್ರೋತ್ಸವದ ದಿನಚರಿ

ಆದರೆ ಈ ಸ್ವಾತಂತ್ರ್ಯ ಎನ್ನುವುದು ಈ ಆಗಸ್ಟ್ 15ಕ್ಕೆ ಮಾತ್ರ ಸೀಮಿತವೇ ಎನ್ನುವ ಪ್ರಶ್ನೆ ಎತ್ತುವವರು ಹಾಗೂ ಮಕ್ಕಳ ಸ್ವಾತಂತ್ರ್ಯ ದ ಬಗ್ಗೆ ಮಾತನಾಡುವವರ ಸಂಖ್ಯೆ ಈಗ ತುಂಬಾ ಕಡಿಮೆ.

ಮಕ್ಕಳ ಸ್ವಾತಂತ್ರ್ಯ ಎಂದಾಕ್ಷಣ ನಮ್ಮ ಮನಸ್ಸಿಗೆ ಬರಬೇಕಾದ ವಿಚಾರ ಮಕ್ಕಳ ಹಕ್ಕುಗಳು, ಅದರಲ್ಲೂ ಕಡ್ಡಾಯ ಶಿಕ್ಷಣದ ಹಕ್ಕು ,
ಶಿಕ್ಷಣ ಎನ್ನುವುದು ಖಾಸಗೀಕರಣ ಆಗಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬಡಮಕ್ಕಳಿಗೆ ಶಿಕ್ಷಣವು  ಮರೀಚಿಕೆ ಆಗದೆ ಇರಲು ಸರಕಾರಿ ಶಾಲೆಗಳು ಕಾರಣವಾಗಿವೆ.ಆದರೆ ಈ ಶಾಲೆಗಳಾದರೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ನಲುಗುತ್ತಿರುವುದು ಕಾಣುತ್ತಿವೆ.ಅದರಲ್ಲೂ ಶಿಕ್ಷಕರ ಕೊರತೆ ಸುಸ್ಥಿತಿಯಲ್ಲಿ ಇಲ್ಲದ ಕಟ್ಟಡ, ಮಕ್ಕಳಿಗೆ ಅತ್ಯವಶ್ಯ ಬೇಕಾದ ಸ್ವಚ್ಛ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ಕೊರತೆ,ಇಂತಹ ಕೊರತೆಗಳ ಮದ್ಯೆಯೇ ಸರಕಾರಿ ಶಾಲೆಗಳೆಂಬ ಹೆಮ್ಮರವು ಬಡ ಗ್ರಾಮೀಣ ಮಕ್ಕಳ ಶಿಕ್ಷಣದ ದಾಹವನ್ನು ಸ್ವಲ್ಪ ಮಟ್ಟಿಗೆ ನೀಗಿಸುತ್ತಾ ಬಂದಿವೆ.

ಈ ಸ್ವಲ್ಪ ಮಟ್ಟದ ಶಿಕ್ಷಣವು ಮಕ್ಕಳಿಗೆ ಈ ಸಮಾಜದಲ್ಲಿ ಮುಂದಕ್ಕೆ ಬರಲು ಸ್ವಾತಂತ್ರ್ಯವನ್ನು ನೀಡುತ್ತಿದೆಯೇ ?
ಖಾಸಗಿ ಶಾಲೆಗಳಲ್ಲಿ ಹಣ ಕೊಟ್ಟು ಶಿಕ್ಷಣವನ್ನು ಪಡೆದು ಕೊಂಡು ಬಂದಿರುವ ಮಕ್ಕಳೊಂದಿಗೆ ಪೈಪೋಟಿ ಮಾಡುವಷ್ಟು ನಮ್ಮ ಮಕ್ಕಳು  ಶಕ್ತರಾಗುವರೇ?

ನಮ್ಮಲ್ಲಿರುವ ಶಾಲೆಗಳ ಕೊರತೆಗಳು ನೀಗದೆ ಹಾಗೂ ಅಲ್ಲಿರುವ ಶಿಕ್ಷಕರು ಮನಸ್ಸು ಮಾಡದೆ, ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕದೆ ಆಗಸ್ಟ್ 15ರ ಸ್ವಾತಂತ್ರ್ಯದ ಆಚರಣೆಯು ಮಕ್ಕಳಿಗೆ ಪೂರಕವಾಗಬಹುದೇ?

ಒಂದು ಕಡ್ಡಾಯವಾದ ಹಾಗೂ ಮಹತ್ವವಾದ  ಆಚರಣೆಯು  ಕೂಡ ಮಕ್ಕಳಿಗೆ ಸಂತೋಷವನ್ನು ಕೊಡುವ ರೀತಿಯಲ್ಲಿ ಅಯೋಜಿಸದೆ ಕೇವಲ ಧ್ವಜಾರೋಹಣಕ್ಕೆ ಸೀಮಿತವಾಗಿ ಆಚರಿಸುವ ಹಾಗೂ ದಾಖಲೆ ನಿರ್ವಹಣೆಗಾಗಿ ಮಾತ್ರ ಬರುವ ಶಿಕ್ಷಕರಿಂದ ನಮ್ಮ ಮಕ್ಕಳಿಗೆ ಸರಿಯಾದ ರೀತಿಯ ಶಿಕ್ಷಣ ಸಿಗುವ ಸಾಧ್ಯತೆ ಇದೆಯೇ ?

ಯಾವುದೇ ರೀತಿಯ ಸ್ವಾತಂತ್ರ್ಯ ನಮ್ಮ ಪೀಳಿಗೆಯ ಬೆಳವಣಿಗೆಗೆ ಪೂರಕವಾಗಿ ಹಾಗೂ ಅವರ ಮನಸ್ಸಿನಲ್ಲಿ ಅಚ್ಚೋತ್ತುವ ರೀತಿಯಲ್ಲಿ ಆಗಬೇಕಿದೆ. ಮಕ್ಕಳಿಗೆ ಮುಕ್ತವಾಗಿ ಅಲೋಚಿಸಲು ,ಚಿಂತಿಸಲು ತಮ್ಮ ಸಮಯವನ್ನು ಸದುಪಯೋಗ ಪಡಿಸಲು ಬೇಕಾದ ಮಾರ್ಗದರ್ಶನವನ್ನು ಕೊಡುವವರ ಸಂಖ್ಯೆ ಜಾಸ್ತಿ ಆಗಬೇಕಿದೆ.

ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ 1000 ಗಂಟೆಯ ಪಾಠವನ್ನು   ಮುಗಿಸುವ ಉದ್ದೇಶದಿಂದ ,ಮಕ್ಕಳಿಗೆ ತಮ್ಮ ಹವ್ಯಾಸಗಳಿಗೆ,ಚಟುವಟಿಕೆಗಳಿಗಾಗಿ ಇರುವಂತಹ ಸಮಯವನ್ನು ಕೂಡ ಬಲಿ ಪಡೆದುಕೊಂಡು ವರ್ಷಕ್ಕೆ ಒಂದು ಆಚರಣೆಯನ್ನು ಮಾಡುವ ಅವಶ್ಯಕತೆ ಖಂಡಿತ ಇರುವುದಿಲ್ಲ.
ಅದು ಬಿಟ್ಟು ಶಾಲೆಯಲ್ಲಿರುವ ಶಿಕ್ಷಕರಿಗೆ ಪಾಠವೊಂದನ್ನು ಬಿಟ್ಟು ಬೇರೆ ಎಲ್ಲಾ ಕೆಲಸ ಕಾರ್ಯಗಳಿಂದ ಮುಕ್ತಿ ಕೊಡಬೇಕಿದೆ. ಅದೇ ರೀತಿ ಒಳ್ಳೆಯ ಶಿಕ್ಷಕರ ಮುಖವಾಡ ಧರಿಸಿ ಊರೂರು ಸುತ್ತುವ ಶಿಕ್ಷಕರಿಂದ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿಸುವ ಧೈರ್ಯ ಇಲಾಖೆಯ ಅಧಿಕಾರಿಗಳು ತೋರಿಸಬೇಕು.

ಮಕ್ಕಳಿಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಮಾಜದಲ್ಲಿ ಮುಂದಕ್ಕೆ ಬರಲು ಬೇಕಾದ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಸ್ವಾತಂತ್ರ್ಯ ಎನ್ನುವ ಪದಕ್ಕೆ ಅರ್ಥ ಬರಬಹುದೇ ವಿನಃ ಒಂದು ದಿನದ ಆಚರಣೆಯಿಂದ ಖಂಡಿತ ಸಾಧ್ಯವಿಲ್ಲ

ಇನ್ನಾದರೂ ಸರಕಾರ, ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಬಿಟ್ಟು ಬೇರೆ ವಿಷಯದ  ಬಗ್ಗೆ ಚಿಂತಿಸದೆ, ಅದಕ್ಕಾಗಿ ದ್ವನಿ ಎತ್ತುವಂತಾಗಲಿ. ಮಕ್ಕಳಿಗೆ ಸಮಾಜದಲ್ಲಿ ಬದುಕಿ ಬಾಳಲು, ನಮ್ಮ ದೇಶಕ್ಕೆ ಶಕ್ತಿ ತುಂಬಲು ಶಿಕ್ಷಣ ಎನ್ನುವ ಅಸ್ತ್ರ ದೊಂದಿಗೆ ಸ್ವಾತಂತ್ರ್ಯವನ್ನು ಕೊಡೋಣ

ಎಲ್ಲರಿಗೂ 78ನೇ ಸ್ವಾತಂತ್ರೋತ್ಸವದ ಶುಭಾಶಯಗಳು
ಮೊಯ್ದಿನ್ ಕುಟ್ಟಿ
ಎಸ್ಡಿಎಂಸಿ

Leave a Reply

Your email address will not be published. Required fields are marked *