ಕೋಟ:ಬುದ್ದಿಮಾಂದ್ಯ ಮಹಿಳೆಯನ್ನು ಆಕೆಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರ ನಿರ್ಮಾಣ ಹಂತದ ಕಟ್ಟಡದ ಒಳಗೆ ಎಳೆದೊಯ್ದು ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆ ಮತ್ತು ತಾಲೂಕು ಕುಕ್ಕುಂಜೆ ಗ್ರಾಮದ ನಿವಾಸಿ ಭಾಸ್ಕರ ಆಚಾರ್ಯ ಎಂಬುವವರನ್ನು ಖುಲಾಸೆಗೊಳಿಸಿ ಮಾನ್ಯ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶಿಸಿದೆ.
ಸಂತ್ರಸ್ತೆಯ ನಿರ್ಮಾಣ ಹಂತದ ಕಟ್ಟಡದ ಮರದ ಕೆಲಸಕ್ಕೆ ಬಂದಿದ್ದ ವೇಳೆ ಆರೋಪಿಯು ಬುದ್ದಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದನು. ಸಂತ್ರಸ್ತೆಯು ಗರ್ಭಿಣಿಯಾದ್ದರಿಂದ ಮನೆಯವರಿಗೆ ಈ ವಿಚಾರವು ತಿಳಿದು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದರು. ಪ್ರಕರಣದ ವಿಚಾರಣೆಯು ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕುಂದಾಪುರ ಇಲ್ಲಿ ವಿಚಾರಣೆ ನಡೆದು ನಂತರ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಲ್ಲಿಗೆ ಪ್ರಕರಣದ ವಿಚಾರಣೆಯು ವರ್ಗಾವಣೆಗೊಂಡಿತು. ವಾದ- ವಿವಾದವನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿದೆ. ಆರೋಪಿ ಪರ ಕುಂದಾಪುರದ ನ್ಯಾಯವಾದಿ ಶ್ಯಾಮಸುಂದರ ನ್ಯಾರಿರವರು ವಾದಿಸಿದ್ದರು.