
ಉಡುಪಿ: ನಗರ ದಿನೇ ದಿನೇ ಬೆಳೆಯುತ್ತಿದ್ದು ಎಲ್ಲೆಂದರಲ್ಲಿ ಬ್ರಹತ್ ವಸತಿ ಸಂಕೀರ್ಣ ಗಳು, ವಾಣಿಜ್ಯ ಕಟ್ಟಡಗಳು ನಿರ್ಮಾಣ ವಾಗುತ್ತಿವೆ.ಉಡುಪಿ ನಗರದಲ್ಲಿ ವಾಸಿಸುವವರ ಜನಸಂಖ್ಯೆಯೂ ದಿನ ನಿತ್ಯ ಹೆಚ್ಚುತ್ತಿದೆ. ಇತರ ಜಿಲ್ಲೆ, ರಾಜ್ಯಗಳಿಂದ ಉಡುಪಿಗೆ ದುಡಿಯಲು ಬರುವ ಕೂಲಿ ಕಾರ್ಮಿಕರ ಸಂಖ್ಯೆಯೂ ಮಿತಿ ಮೀರಿದೆ.
ಈ ಜನಸಂಖ್ಯೆಯ ಹೆಚ್ಚಳ, ನಗರದ ಬೆಳವಣಿಗೆಯಾಗಿದ್ದರೂ ಕೂಡ ನಗರದಲ್ಲಿ ಇದೀಗಿನ ಬೇಡಿಕೆಗೆ ಬೇಕಾದಷ್ಟು ರಿಕ್ಷಾ ನಿಲ್ದಾಣಗಳು ಇಲ್ಲವಾಗಿವೆ. ಇರುವ ರಿಕ್ಷಾ ನಿಲ್ದಾಣಗಳಲ್ಲಿ ಕೆಲವು ಚಾಲಕರು ಕರೆದಲ್ಲಿಗೆ ಬಾರದೆ ಇರುವುದು, ಬೇರೆ ರಿಕ್ಷಾದಲ್ಲಿ ತೆರಳುವೆ ಎಂದರೆ ನಿಲ್ದಾಣದಲ್ಲಿ ಹೊರತುಪಡಿಸಿ ಇತರ ಸಂಚಾರಿ ರಿಕ್ಷಾಗಳನ್ನು ನಿಲ್ಲಿಸದಂತೆ ಆ ರಿಕ್ಷಾ ಚಾಲಕರನ್ನು ಗದರಿಸುವುದು ಇಂತಹ ಘಟನೆಗಳು ರಿಕ್ಷಾ ನಿಲ್ದಾಣಗಳಲ್ಲಿ ನಡೆಯುತ್ತಿದೆ, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಯಾಗುತ್ತಿದೆ.
ನಿರುದ್ಯೋಗಿಗಳು ಸ್ವಂತ ಉದ್ಯೋಗ ಮಾಡೋಣ ಎಂದು ಸಾಲ ಮಾಡಿ ರಿಕ್ಷಾ ಖರೀದಿಸಿ ರಿಕ್ಷಾ ಬಾಡಿಗೆ ಮಾಡಲು ಹೊರಟರೆ ಈಗ ಇರುವ ರಿಕ್ಷಾ ನಿಲ್ದಾಣಗಳಲ್ಲಿ ಹೊಸ ಚಾಲಕರುಗಳಿಗೆ ನಿಲ್ಲಲು ಅವಕಾಶವನ್ನು ನೀಡಲಾಗುತ್ತಿಲ್ಲ ಎನ್ನಲಾಗಿದೆ.
ಹೊಸ ರಿಕ್ಷಾ ಚಾಲಕರು ನಿಲ್ದಾಣಗಳಲ್ಲಿ ರಿಕ್ಷಾ ನಿಲ್ಲಿಸಿದಲ್ಲಿ ಅವರನ್ನು ಗದರಿಸಿ,ಹೊಡೆದು ,ಬಡಿದು ಓಡಿಸುವುದು, ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸುವುದು ಇಂತಹ ಅಮಾನವೀಯ ಘಟನೆಗಳು ದಿನನಿತ್ಯ ನಗರದ ರಿಕ್ಷಾ ನಿಲ್ದಾಣಗಳಲ್ಲಿ ನಡೆಯುತ್ತಿದೆ.
ಆಟೋ ಮಾಫಿಯಾ?
————————–
ಸಾರ್ವಜನಿಕ ಆಟೋ ನಿಲ್ದಾಣಗಳನ್ನು ತಮ್ಮ ಹಿರಿಯರ ಆಸ್ತಿ ಎಂಬಂತೆ ರಿಕ್ಷಾ ನಿಲ್ದಾಣಗಳಲ್ಲಿ ದುಡಿಯುವ ರಿಕ್ಷಾ ಚಾಲಕರುಗಳು ವರ್ತಿಸುತ್ತಿದ್ದಾರೆ. ಹೊಸ ರಿಕ್ಷಾ ಚಾಲಕರು ಬರದಂತೆ ರಿಕ್ಷಾ ನಿಲ್ದಾಣಗಳಲ್ಲಿ ರಿಕ್ಷಾಗಳನ್ನು ಅಡ್ಡ ನಿಲ್ಲಿಸುವುದು, ಖಾಲಿ ಇದ್ದ ರಿಕ್ಷಾ ನಿಲ್ದಾಣಗಳಲ್ಲಿ ಹೊಸ ರಿಕ್ಷಾ ಚಾಲಕ ಬಂದು ನಿಂತರೂ ಅವನನ್ನು ಗದರಿಸಿ ಬೆದರಿಸುವುದು ಯಾಕೆ ?ಎಂದು ಪ್ರಶ್ನಿಸಿದರೆ ಹಲ್ಲೆ ಮಾಡುವುದು ಇದೆಲ್ಲ ರಿಕ್ಷಾ ನಿಲ್ದಾಣಗಳಲ್ಲಿ ನಡೆಯುವ ದೌರ್ಜನ್ಯ ಗಳಾಗಿವೆ. ಹಳೆಯ ರಿಕ್ಷಾ ನಿಲ್ದಾಣಗಳಲ್ಲಿ ಐವತ್ತು ಸಾವಿರದ ವರೆಗೆ ಅಕ್ರಮವಾಗಿ ಹಣ ಪಡೆದು ತಮಗೆ ಬೇಕಾದವರಿಗೆ ರಿಕ್ಷಾ ನಿಲ್ಲಿಸಲು ಅವಕಾಶವನ್ನು ನೀಡುತ್ತಾರೆ ಎನ್ನುವ ಆರೋಪವೂ ಇದೆ.
ಹೊಸ ನಿಲ್ದಾಣಗಳೇ ಪರಿಹಾರ
—————————–
ನಗರದಲ್ಲಿ ನಡೆಯುತ್ತಿರುವ ಈ ರಿಕ್ಷಾ ಪಾರ್ಕಿಂಗ್ ಸಮಸ್ಯೆಗೆ ಸೂಕ್ತ ಪರಿಹಾರವೆಂದರೆ ನಗರಸಭೆ ಹಾಗೂ ಪೊಲೀಸ್ ಇಲಾಖೆ ನೂತನ ರಿಕ್ಷಾ ನಿಲ್ದಾಣಗಳಿಗೆ ಹೆಚ್ಚಿನ ಅವಕಾಶ ನೀಡುವುದು. ಜನ ವಸತಿ, ವ್ಯವಹಾರಗಳಿರುವ ಪ್ರತಿ ರಸ್ತೆಗಳಲ್ಲೂ ಎರಡರಿಂದ ಮೂರು ರಿಕ್ಷಾಗಳಿಗೆ ನಿಲ್ಲಲು ಅವಕಾಶವನ್ನು ಕಲ್ಪಿಸಿಕೊಟ್ಟು ಈ ಸಮಸ್ಯೆಗೆ ಪರಿಹಾರ ಕಲ್ಪಿಸ ಬಹುದಾಗಿದೆ.
ಈ ಮೂಲಕ ರಿಕ್ಷಾ ನಿಲ್ದಾಣಗಳ ಕೆಲವೊಂದು ರಿಕ್ಷಾ ಚಾಲಕರ ಮಾಫಿಯಾ ಕ್ಕೂ ನಿಯಂತ್ರಣ ಹೇರ ಬಹುದು, ಹಾಗೂ ನಿರುದ್ಯೋಗಿಗಳಾಗಿ ರಿಕ್ಷಾ ಚಾಲಕರಾಗಿ ದುಡಿಯಲು ಬಯಸುವ ಯುವ ಜನರಿಗೆ ದುಡಿಯಲು ಅವಕಾಶ ಕಲ್ಪಿಸಿದಂ ತಾಗುವುದು. ಉಡುಪಿ ನಗರಸಭೆ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಕೂಡಲೇ ಗಮನ ಹರಿಸಿ ನೂತನ ರಿಕ್ಷಾ ನಿಲ್ದಾಣಗಳಿಗೆ ಅನುಮತಿಯನ್ನು ನೀಡುವ ಮೂಲಕ ಸಾರ್ವಜನಿಕ ಸಮಸ್ಯೆ ಪರಿಹರಿಸಬೇಕಾಗಿದೆ.
Leave a Reply