Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿಐಎಸ್ಎಲ್ ಕಾರ್ಖಾನೆ : ಹೆಚ್ ಡಿ ಕುಮಾರಸ್ವಾಮಿ, ಬಿ ವೈ ರಾಘವೇಂದ್ರ ವಿರುದ್ದ ಮಧು ಬಂಗಾರಪ್ಪ ಟೀಕಾಪ್ರಹಾರ

ಶಿವಮೊಗ್ಗ , ಜ. 22:- ಭದ್ರಾವತಿ ವಿಶೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ (ವಿಐಎಸ್ಎಲ್) ಪುನಾರಾರಂಭಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಲಭ್ಯವಾಗದಿರುವ ವಿಚಾರದ ಕುರಿತಂತೆ, ಕೇಂದ್ರ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರಸ್ವಾಮಿ ಹಾಗೂ ಲೋಕಸಭಾ ಸದಸ್ಯ  ಬಿ ವೈ ರಾಘವೇಂದ್ರ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟೀಕಾಪ್ರಹಾರ ನಡೆಸಿದ್ದಾರೆ.

ಜ. 22 ರಂದು ಕುವೆಂಪು ವಿವಿ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವೈಜಾಗ್ ಸ್ಟೀಲ್ ಕಾರ್ಖಾನೆಗೆ ಸಾವಿರಾರು ಕೋಟಿ ರೂ. ಅನುದಾನ ಕೇಂದ್ರದಿಂದ ಲಭ್ಯವಾಗಿರುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ರಾಜ್ಯದಿಂದ ಆಯ್ಕೆಯಾಗಿದ್ದೀರಿ. ರಾಜ್ಯಕ್ಕೆ ಏನು ಕೊಟ್ಟಿದ್ದೀರಾ? ವಿಶ್ವೇಶ್ವರಯ್ಯ ಅವರ ಹೆಸರಿರುವ ಕಾರ್ಖಾನೆ ಉಳಿಸುವ ಜವಾಬ್ದಾರಿ ಎಲ್ಲಿ ಹೋಯಿತು.

ಎರಡೂ ಬಾರಿ ಮುಖ್ಯಮಂತ್ರಿಯಾಗಿದ್ದೀರಿ, ರಾಜ್ಯದವರೇ ಆದ ನೀವು ಆ ಕಾರ್ಯ ಮಾಡುತ್ತಿಲ್ಲವೇಕೆ? ಬೇರೆ ಕಾರ್ಖಾನೆಗಳಿಗೆ ಕೋಟ್ಯಾಂತರ ರೂ. ಅನುದಾನ ನೀಡಲಾಗಿದೆ. ಇದರಂತಹ ತಪ್ಪು ನಿರ್ಧಾರ ಯಾವುದೂ ಇಲ್ಲವಾಗಿದೆ’ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎಂಪಿ ಬಿ ವೈ ರಾಘವೇಂದ್ರ ಅವರು ಎಲ್ಲಿ ಹೋಗಿದ್ದಾರೆ. ಅವರನ್ನು ಹಿಡಿದುಕೊಂಡು ಬನ್ನಿ. ಚುನಾವಣೆ ಸಂದರ್ಭದಲ್ಲಿ ಪುಗ್ಸಟ್ಟೆ ಭಾಷಣ ಮಾಡಿದ್ದರು. ಕಾರ್ಖಾನೆ ಉಳಿಸುವುದಾಗಿ ಹಸಿ ಸುಳ್ಳು ಹೇಳಿದ್ದರು. ಈಗ ಎಲ್ಲಿ ಹೋದರು’ ಎಂದು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ವಿಐಎಸ್ಎಲ್ ಕಾರ್ಖಾನೆ ಕುರಿತಂತೆ, ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಹೇಳುತ್ತಿರುವುದು ಸರಿಯಲ್ಲ. ಹಾಗಾದರೆ ನೀವು ಯಾವ ರಾಜ್ಯದವರು, ಎಲ್ಲಿಯವರು ಎಂದು ಕೇಳಬೇಕಾಗುತ್ತದೆ’ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.


ಕೇಂದ್ರಕ್ಕೆ ಅತೀ ಹೆಚ್ಚು ತೆರಿಗೆ ಸಂದಾಯವಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಆದರೆ ಕೇಂದ್ರದಿಂದ ಲಭ್ಯವಾಗುತ್ತಿರುವ ಅನುದಾನ ಅತ್ಯಲ್ಪವಾಗಿದೆ. ಇದು ಕಣ್ಣಿಗೆ ಕಾಣಿಸುತ್ತಿಲ್ಲವೇ? ನಮ್ಮ ರಾಜ್ಯದ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ಕೊಡುತ್ತಿದ್ದೀರಾ? ಎಷ್ಟರಮಟ್ಟಿಗೆ ಇದು ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡದಿದ್ದರೂ, ರಾಜ್ಯ ಸರ್ಕಾರ ನಾಗರೀಕರಿಗೆ ನೀಡಿದ್ದ ಭರವಸೆಯಂತೆ ಮನೆಮನೆಗೆ ಗ್ಯಾರಂಟಿ ಯೋಜನೆಯ ಸೌಲಭ್ಯ ತಲುಪಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಕೊಡುವಲ್ಲಿ ಮೋಸ ಮಾಡಿದೆ ಎಂದು ಟೀಕಿಸಿದರು.


ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್ ನೀಡಿರುವುದು ತಮಗೆ ಅತೀವ ಸಂತಸ ಉಂಟು ಮಾಡಿದೆ. ಈ ಸಂತಸದ ಕ್ಷಣ ನೋಡುವ ಉದ್ದೇಶದಿಂದ ತಾವು ಘಟಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದೆನೆ ಎಂದು ಇದೇ ವೇಳೆ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

✍🏻 *ಓಂಕಾರ ಎಸ್. ವಿ. ತಾಳಗುಪ್ಪ*

Leave a Reply

Your email address will not be published. Required fields are marked *