News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಗತ್ತಿನ ಎಲ್ಲ ಕಲೆಗಳ ಮೂಲ  ಅಸ್ತಿತ್ವವೆ ನಮ್ಮ ಬೇರಾಗಿರುವ  ಜಾನಪದ~ ಮಂಡ್ಯ ರಮೇಶ್

ಉಡುಪಿ, ಜ.31: ಜಗತ್ತಿನ ಎಲ್ಲ ಕಲೆಗಳ ಮೂಲ ಅಸ್ತಿತ್ವ ಜಾನಪದದಲ್ಲಿದೆ. ರಾಮಾಯಣ, ಮಹಾಭಾರತಗಳು ಬದುಕಿನ ರೂಪಕಗಳು ಎಂದು ರಂಗ ನಿರ್ದೇಶಕ ಹಾಗೂ ಚಿತ್ರನಟ ಮಂಡ್ಯ ರಮೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕುಂಜಿಬೆಟ್ಟು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಸಂಸ್ಕೃತಿ ಉತ್ಸವದ ಎರಡನೇ ದಿನವಾದ ಶುಕ್ರವಾರ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರ ಸ್ವೀಕರಿಸಿ‌ ಮಾತನಾಡಿದರು.


ರಂಗ ಕಲಾವಿದನಾಗುವುದು ಸುಲಭದ ಮಾತಲ್ಲ. ಅದು ಸಾಹಸದ ಕೆಲಸ. ಗಾಂಧಿಯನ್ನು ಬದಲಾಯಿಸಿರುವುದೂ ಇದೇ ರಂಗಭೂಮಿ ಎಂದರು. ಮನುಷ್ಯತ್ವ ವೃದ್ಧಿಗೆ ಸಹಕಾರಿ: ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ನಾಟಕ, ಕಲೆ, ಸಂಗೀತ ಮನುಷ್ಯತ್ವ ಸಂಬಂಧ ಬೆಳೆಸಲು ಸಹಾಯ ಮಾಡುತ್ತದೆ. ಮನುಷ್ಯತ್ವದ ನೆಲೆಯಲ್ಲಿ ಸಂಬಂಧ ಗಟ್ಟಿಗೊಳಿಸುವುದು ಇಂದಿನ ಅಗತ್ಯ. ಮಕ್ಕಳು ಹಾಗೂ ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿ, ಬೆಳೆಸಿಕೊಳ್ಳಬೇಕಾದರೆ ಅವರು ಕಲೆಯಲ್ಲಿ ತೊಡಗಿಕೊಳ್ಳಬೇಕು.

ಭಿನ್ನ ದಾರಿಯಲ್ಲಿ ಸಾಗುತ್ತಿರುವ ಯುವಜನತೆಯನ್ನು ಸರಿಯಾದ ದಾರಿಯಲ್ಲಿ ಮನ್ನಡೆಸಿಕೊಂಡು ಹೋಗಬೇಕಾದರೆ ಈ ರೀತಿಯ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳಬೇಕು ಎಂದರು. ಮುಖ್ಯ ಅಭ್ಯಾಗತರಾಗಿದ್ದ ಕಾರ್ಕಳ ಯಕ್ಷರಂಗಾಯಣ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಎಂ.ಹರಿಶ್ಚಂದ್ರ ಮಾತನಾಡಿದರು. ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅಭಿನಂದನ ಮಾತುಗಳನ್ನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ಉಪಾಧ್ಯಕ್ಷ ವಿಘ್ನೇಶ್ವರ ಅಡಿಗ, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ, ಸುಗುಣ ಸುವರ್ಣ ಉಪಸ್ಥಿತರಿದ್ದರು.

ಪಂಚಮಿ ಪುರಸ್ಕಾರ ಸಂಚಾಲಕ ಜನಾರ್ದನ ಕೊಡವೂರು ಸ್ವಾಗತಿಸಿ, ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ವಂದಿಸಿದರು. ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಡ್ಯ ರಮೇಶ್ ನಿರ್ದೇಶನ ‘ಚೋರ ಚರಣದಾಸ’ ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *