
ಮೈಸೂರಿನ ‘ಮುಡಾ’ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್ಟಿಐ ಕಾರ್ಯಕರ್ತ ಗಂಗರಾಜು ಫೋಟೋಗಳಿಗೆ ವಾಮಾಚಾರ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ರಾಮಸೇನೆ ಸ್ಥಾಪಕ ಪ್ರಸಾದ್ ಅತ್ತಾವರ ಮತ್ತು ಆತನ ಪತ್ನಿ ಸುಮಾ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್ ಹೇಳಿದ್ದಾರೆ.
ಪ್ರಸಾದ್ ಅತ್ತಾವರ ವಾಮಾಚಾರ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿರುವ ಪೊಲೀಸ್ ಆಯುಕ್ತರು, ತನಿಖೆಗೆ ಸಂಬಂಧಿಸಿದಂತೆ ಪ್ರಸಾದ್ ಅತ್ತಾವರ ಮತ್ತು ಆತನ ಪತ್ನಿಗೆ ಎರಡು ಬಾರಿ ನೋಟಿಸ್ ನೀಡಲಾಗಿದೆ. ಆದರೆ ಅವರಿಬ್ಬರೂ ತನಿಖೆಗೆ ಸಹಕರಿಸುತ್ತಿಲ್ಲ. ಮತ್ತೊಮ್ಮೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ತನಗೆ ಹೃದಯ ಕಾಯಿಲೆ ಇದೆ ಎಂದು ಹೇಳಿ ಪ್ರಸಾದ್ ಅತ್ತಾವರ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿರುವಾಗ ವಿಚಾರಣೆ ನಡೆಸಲಾಗಿತ್ತು. ಬಳಿಕ ಆತ ಜಾಮೀನು ಪಡೆದುಕೊಂಡು ಬೇರೆ ಕಡೆ ತಿರುಗಾಡುತ್ತಿದ್ದಾನೆ ಎಂದರು.
ಪ್ರಸಾದ್ ಅತ್ತಾವರ ಬಳಸಿರುವ ಸೊತ್ತುಗಳ ವಿಧಿವಿಜ್ಞಾನ ವಿಶ್ಲೇಷಣೆ ಮಾಡಲಾಗುತ್ತಿದೆ. ಉಡುಪಿಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿರುವ ಪ್ರಸಾದ್ ಅತ್ತಾವರ ಪತ್ನಿ ಸುಮಾ ಅವರಿಗೂ ನೋಟಿಸ್ ನೀಡಲಾಗಿದೆ. ಆದರೆ ಅವರು ಕರ್ತವ್ಯಕ್ಕೆ ರಜೆ ಹಾಕಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬಿಜೈಯ ಯುನಿಸೆಕ್ಸ್ ಸೆಲೂನ್ ಒಂದರಲ್ಲಿ ಜ.23ರಂದು ನಡೆದ ದಾಂಧಲೆ ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಮೊಬೈಲ್ ಫೋನ್ ಪರಿಶೀಲನೆ ವೇಳೆ ದೇವಸ್ಥಾನವೊಂದರಲ್ಲಿ ಐದು ಕುರಿಗಳನ್ನು ಬಲಿ ಕೊಟ್ಟು ಅದರ ರಕ್ತವನ್ನು ಸ್ನೇಹಮಯಿ ಕೃಷ್ಣ ಮತ್ತು ಇತರ ಕೆಲವರ ಫೋಟೋಗಳಿಗೆ ಹಾಗೂ ಅವರ ಹೆಸರಿನ ಚೀಟಿಗೆ ಹಚ್ಚಿ ಪೂಜೆ ಮಾಡುತ್ತಿರುವ ವೀಡಿಯೋ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
Leave a Reply