
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿನ ಇಬ್ಬರು ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯ 2023-24 ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಗಳಲ್ಲಿ ರ್ಯಾಂಕ್ ಪಡೆದು ದಾಖಲೆ ನಿರ್ಮಿಸಿರುತ್ತಾರೆ. ಕಲಾ ವಿಭಾಗದಲ್ಲಿ ಕುಮಾರಿ ಅಕ್ಷತಾ ಶೆಟ್ಟಿ, ಎರಡನೇ ರ್‌ಯಾಂಕ್ ಪಡೆದು ದಾಖಲೆ ನಿರ್ಮಿಸಿದರೆ ನಿರ್ವಹಣಾ ವಿಭಾಗದಲ್ಲಿ ಕುಮಾರಿ ಸ್ನೇಹ ದಾಸ್ 6ನೇ ರ್ಯಾಂಕ್ ಪಡೆದಿರುತ್ತಾರೆ.
ಹಾಲಾಡಿ ಸಮೀಪದ ಕಕ್ಕುಂಜೆಯ ಶ್ರೀ ಕರುಣಾಕರ್ ಶೆಟ್ಟಿ ಮತ್ತು ಶ್ರೀಮತಿ ಮುಕಾಂಬಿಕ ಶೆಟ್ಟಿ ದಂಪತಿಗಳ ಪುತ್ರಿ ಕುಮಾರಿ ಅಕ್ಷತಾ ಶೆಟ್ಟಿ ತನ್ನ ಸತತವಾದ ಪ್ರಯತ್ನ ಶ್ರಮಗಳಿಂದ ಈ ಶೈಕ್ಷಣಿಕ ಸಾಧನೆಯನ್ನು ಮಾಡಿರುತ್ತಾರೆ. ಕುಟುಂಬ ನಿರ್ವಹಣೆಗೆ ತಾಯಿ ಗೇರು ಬೀಜ ಸುಲಿಯುವ ಕೆಲಸ ಮಾಡುತ್ತಾರೆ. ಸಾಯಿಬ್ರಕಟ್ಟೆಯ ರಿಕ್ಷಾ ಚಾಲಕ ಶ್ರೀ ಮಂಜುನಾಥ್ ದಾಸ್ ಮತ್ತು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವತ್ಸಲಾ ದಾಸ್ ಅವರ ಪುತ್ರಿ ಕುಮಾರಿ ಸ್ನೇಹದಾಸ್ ಬಿಬಿಎ ಪದವಿಯಲ್ಲಿ 6ನೇ ರ್‌ಾಂಕ್ ಪಡೆದು ಕಾಲೇಜಿಗೆ ಮತ್ತು ಊರಿಗೆ ಗೌರವವನ್ನು ತಂದಿರುತ್ತಾರೆ.
20 ವರ್ಷಗಳ ನಂತರ ಪದವಿಯಲ್ಲಿ ಎರಡು ರ್‌ಯಾಂಕ್ ಪಡೆದು ಗ್ರಾಮೀಣ ಭಾಗದ ಉನ್ನತ ಶಿಕ್ಷಣ ಕೇಂದ್ರವಾಗಿ ಕಾಲೇಜು ಹೊರಹೊಮ್ಮಿದೆ. ಕಳೆದ ಸಾಲಿನಲ್ಲಿ ನ್ಯಾಕ್ ಮಾನ್ಯತೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕಾಲೇಜು ಸಾಧನೆಯ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ.
ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿರುತ್ತಾರೆ. ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವೃಂದ, ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕ ರಕ್ಷಕ ಸಂಘ ಮತ್ತು ಸಾರ್ವಜನಿಕರು ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.
Leave a Reply