Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಾ.೨೧ ರಿಂದ ಏ.೪ ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ-೧ ಪಾರದರ್ಶಕ ಪರೀಕ್ಷೆಗೆ ಕ್ರಮ : ಡಿಸಿ ಜಾನಕಿ ಕೆ.ಎಮ್

ವರದಿ : ಅಶ್ವಿನಿ ಅಂಗಡಿ

ಬಾಗಲಕೋಟೆ : ಜಿಲ್ಲೆಯಲ್ಲಿ ಮಾರ್ಚ ೨೧ ರಿಂದ ಏಪ್ರಿಲ್ ೪ ರವರೆಗೆ ೨೦೨೫ ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ  ಜರುಗಲಿದ್ದು, ಪರೀಕ್ಷಾ ಸಮಯದಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಅಕ್ರಮಗಳಿಗೆ ಅವಕಾಶ ನೀಡದೇ ಪಾರದರ್ಶಕ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಮ್ ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಶನಿವಾರದಂದು ಜರುಗಿದ ಎಸ್ ಎಸ್ ಎಲ್ ಸಿ ಪರೀಕ್ಷೆ-೧ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಜಿಲ್ಲೆಯ ೯೪ ಪರೀಕ್ಷಾ ಕೇಂದ್ರಗಳಲ್ಲಿ ೩೩೨೦೯ ಅಭ್ಯರ್ಥಿಗಳು  ಪರೀಕ್ಷೆ ಬರೆಯಲಿದ್ದು, ಪರೀಕ್ಷಾ ಕಾರ್ಯಕ್ಕೆ ೯೪ ಮುಖ್ಯ ಅಧಿಕ್ಷಕರು, ೪೭ ಉಪ ಅಧಿಕ್ಷಕರು, ೯೪ ಅಭಿರಕ್ಷಕರು, ೩೧ ಪರೀಕ್ಷಾ ಕೇಂದ್ರದ ವಿಕ್ಷಕರು, ೨೧ ವೆಬ್ ಕಾಸ್ಟಿಂಗ್ ಸಿಬ್ಬಂದಿ, ೯೪ ಮೊಬೈಲ್ ಸ್ವಾಧಿನಾಧಿಕಾರಿ, ೯೪ ಸ್ಥಾನಿಕ ಜಾಗೃತ ದಳದವರು, ೩೬ ಮಾರ್ಗಾಧಿಕಾರಿಗಳು ಮತ್ತು ೧೪೦೦ ಕ್ಕೂ ಅಧಿಕ ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಿ,  ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಾಗಲಿ, ಅವ್ಯವಹಾರಗಳಾಗಲಿ ನಡೆಯದಂತೆ ಎಲ್ಲಾ ಪರೀಕ್ಷಾ ಕೇಂದ್ರದಿಂದ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಲಂ ೧೪೪ ಜಾರಿಗೊಳಿಸುವದರ ಮೂಲಕ ಶಿಸ್ತು ಬದ್ದವಾಗಿ ಪರೀಕ್ಷೆಗಳನ್ನು ಜರುಗಿಸಲಾಗುವುದು ಎಂದು ಹೇಳಿದರು.

ಎಲ್ಲಾ ೯೪ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಅಲ್ಲಿನ ಕಟ್ಟಡದ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ ಸೇರಿ ಇನ್ನಿತರ ಮೂಲಭೂತ ಸೌಲಭ್ಯಗಳ ವ್ಯವಸ್ಥೆ, ಮಕ್ಕಳ ಸುರಕ್ಷತೆ, ಆಸನದ ವ್ಯವಸ್ಥೆ ಮಾಡಿದ ಬಗ್ಗೆ ಖಾತರಿ ಪಡಿಸಿಕೊಂಡು ಎಲ್ಲಾ ಮಕ್ಕಳು ಗಾಳಿ ಬೆಳಕಿರುವ ಕೊಠಡಿಗಳಲ್ಲಿ ಕುಳಿತು ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಮಾಡಬೇಕು,  ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಹೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಪೂರೈಸುವ ಕಾರ್ಯ ಮಾಡಬೇಕೆಂದು ತಿಳಿಸಿದರು.

ಹಾಲ್ ಟಿಕೆಟ್ ನೆಪವೊಡ್ಡಿ ವಿದ್ಯಾರ್ಥಿಗಳಿಗೆ ತೊಂದರೆ ಮಾಡದೇ ಸಂಬಂಧಪಟ್ಟವರನ್ನು ವಿಚಾರಿಸಿ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯಲು ಬಿಡಬೇಕು, ನಮ್ಮ ನಿಮ್ಮೆಲ್ಲರಿಗಿಂತ ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲು, ಒತ್ತಡ, ನಿರೀಕ್ಷೆಗಳಿವೆ. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂದು ಶಿಕ್ಷಕರಿಗೆ ತಿಳಿಸಿದರು.

ಅಲ್ಲದೇ ಈ ಬಾರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಆದೇಶದಂತೆ ಗೈರು ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್ಲೆೈನ್ ಮೂಲಕ ತಿಳಿಸಬೇಕು.  ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿ,  ಸಿಬ್ಬಂದಿ ಅಷ್ಟೇ ಅಲ್ಲದೇ ಇತರ ಇಲಾಖಾ ಅಧಿಕಾರಿಗಳ ಜವಾಬ್ದಾರಿ ಕೂಡ ಇದ್ದು ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದರು.   

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್, ಡಿಡಿಪಿಐ ಎಂ ವಿವೇಕಾನಂದ , ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ್ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *