ಮಾರ್ಚ್ 20ರಿಂದ ಆರಂಭವಾಗುತ್ತಿರುವ ಸರಕಾರಿ ಪ್ರಾಥಮಿಕ ಶಾಲಾ ಅಂತಿಮ ಪರೀಕ್ಷೆಯನ್ನು ಬರೆಯಲು, ಇಬ್ಬರು ವಿದ್ಯಾರ್ಥಿಗಳಿಗೆ ಪೋಲಿಸ್ ರಕ್ಷಣೆಯ ಆದೇಶ ನೀಡಿದ ಹೈಕೋರ್ಟ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಅಪರೂಪದ ಪ್ರಕರಣ ನಡೆದಿದೆ.
*ಏನಿದು ಪ್ರಕರಣ?*
ಅತ್ತಿಬೆಲೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಅವ್ಯವಸ್ಥೆ, ಅಲ್ಲಿನ ಕೊಳಕು ಪರಿಸರ, ದುರ್ನಾತ ಖಂಡಿಸಿ ಆ ಶಾಲಾ ವಿಧ್ಯಾರ್ಥಿಗಳ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ, ಮಕ್ಕಳ ರಕ್ಷಣಾ ಆಯೋಗ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಮೊಯ್ದಿನ್ ಕುಟ್ಟಿ ಇವರಿಗೆ ಮನವಿಯೊಂದನ್ನು ಈ ಹಿಂದೆ ಸಲ್ಲಿಸಿದ್ದರು.
ಈ ನಡುವೆ ಇದೇ ಶಾಲೆಯ ಅಧ್ಯಾಪಕರೊಬ್ಬರಿಂದ ಏಳನೇ ತರಗತಿಯ ಆರು ಮಂದಿ ವಿದ್ಯಾರ್ಥಿನಿಯರಿಗೆ ಸತತ ಲೈಂಗಿಕ ಕಿರುಕುಳ ನಡೆಯುತ್ತಿರುವುದು ಕೂಡಾ ಬೆಳಕಿಗೆ ಬಂದ ಹಿನ್ನಲೆಯಲ್ಲಿ, ಬೆಂಗಳೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ ದೂರಿನನ್ವಯ, ಶಾಲಾ ಅಧ್ಯಾಪಕರೊಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿತ್ತು.
ಈ ನಡುವೆ ಜಾಮೀನಿಂದ ಹೊರಬಂದ ಆ ಆರೋಪಿ ಅಧ್ಯಾಪಕರು, ಶಾಲಾ ಕಾಂಪೌಂಡ್ ನ ಕ್ವಾರ್ಟರ್ಸ್ ನಲ್ಲೇ ವಾಸ ಮುಂದುವರೆಸಿದ್ದು, ನಂತರ ದೂರು ನೀಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೋಷಕರ ವಿರುದ್ಧವೇ ಶಾಲಾ ಇತರ ಅದ್ಯಾಪಕ ಸಿಬ್ಬಂದಿಗಳು “ಶಾಲೆ ಆವರಣಕ್ಕೆ ಪೋಷಕರು ಬಂದು ತೊಂದರೆ ಕೊಡುತ್ತಾರೆ” ಎಂದು ಅತ್ತಿಬೆಲೆ ಪೋಲೀಸ್ ಠಾಣೆಯಲ್ಲಿ ಪ್ರತಿದೂರು ಸಲ್ಲಿಸಿದ್ದಾರೆ ಎಂದು ಹೇಳಿಕೊಂಡು ಅತ್ತಿಬೆಲೆ ಪೋಲೀಸರು ಮಕ್ಕಳ ಪೋಷಕರಿಂದ, “ಶಾಲಾ ಆವರಣಕ್ಕೆ ಇನ್ನು ಮುಂದೆ ಬರುವುದಿಲ್ಲ” ಎಂಬುದಾಗಿ ಫೆಬ್ರವರಿ 10ರಂದು ಮುಚ್ಚಳಿಕೆ ಪತ್ರ ಬರೆಯಿಸಿ ಕೊಂಡಿದ್ದರು.
ಆ ನಂತರ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸತತ ಕಿರುಕುಳ, ಮಾನಸಿಕ ಹಿಂಸೆ ಮುಂದುವರಿದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಭಯಭೀತರಾಗಿ ಕಳೆದ ಮೂರು ವಾರಗಳಿಂದ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು.
ಈ ನಡುವೆ ಮಾರ್ಚ್ 20ರಿಂದ ಅಂತಿಮ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ಪೋಷಕರು ಆತಂಕ ಗೊಂಡಿದ್ದು , ಪರೀಕ್ಷೆ ಬರೆಯಲು ಇಬ್ಬರು ವಿದ್ಯಾರ್ಥಿಗಳು ರಾಜ್ಯ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಕೊಂಬಾರಿನ ರಾಮಕೃಷ್ಣ ಹೊಳ್ಳಾರನ್ನು ಸಂಪರ್ಕಿಸಿದ್ದರು.
ಇವರು ನೀಡಿದ ಸಲಹೆಯಂತೆ ಹೈಕೋರ್ಟ್ನಲ್ಲಿರುವ ಹಿರಿಯ ನ್ಯಾಯವಾದಿ ಕೊಂಬಾರಿನವರೇ ಆದ ಶ್ರೀ ಕೆ ಎನ್ ಪ್ರವೀಣ್ ಕುಮಾರ್ ಇವರನ್ನು ಸಂಪರ್ಕಿಸಿ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಇಬ್ಬರು ವಿದ್ಯಾರ್ಥಿಗಳು ರಿಟ್ ಅರ್ಜಿಯೊಂದನ್ನು ನಿನ್ನೆ ಸಲ್ಲಿಸಿದ್ದರು.
ಇಂದು ವಿದ್ಯಾರ್ಥಿಗಳ ಪರ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟು, ಮಕ್ಕಳ ಪರ ಪ್ರವೀಣ್ ಕಟ್ಟೆಯವರ ವಾದವನ್ನು ಆಲಿಸಿ, ಪ್ರಕರಣ ತೀವ್ರತೆ ಮನಗಂಡು ಆ ವಿದ್ಯಾರ್ಥಿಗಳಿಗೆ ಮಾರ್ಚ್ 20ರಿಂದ 25 ರವರೆಗೆ ಅಂತಿಮ ಪರೀಕ್ಷೆ ಬರೆಯಲು ಸೂಕ್ತ ಪೋಲೀಸ್ ರಕ್ಷಣೆ ನೀಡುವಂತೆ ಹಾಗೂ ಪೋಷಕರನ್ನು ಶಾಲಾ ಆವರಣಕ್ಕೆ ನಿರ್ಭಂಧ ಹೇರದಂತೆ ಅತ್ತಿಬೆಲೆ ಪೋಲೀಸರಿಗೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಿ, ರಾಜ್ಯ ಸರಕಾರಕ್ಕೆ ಈ ಬಗ್ಗೆ ತುರ್ತು ನೋಟೀಸ್ ಹೊರಡಿಸಿ ಪ್ರಕರಣವನ್ನು ಎಪ್ರಿಲ್ 8ಕ್ಕೆ ಮುಂದೂಡಿ ಮುಂದಿನ ವಿಚಾರಣೆ ನಡೆಸಲು ತೀರ್ಮಾನಿಸಿದೆ.
