
ಕೋಟ: ರಾಜ್ಯದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಕೋಟ ಆರಕ್ಷಕ ಠಾಣೆಗೆ ಶನಿವಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕೋಟ ಪೋಲಿಸ್ ಠಾಣೆಯಲ್ಲಿರುವ ಕಡತಗಳನ್ನು ಪರಿಶೀಲಿಸಿದರಲ್ಲದೆ ಸುಮಾರು ಮುಕಾಲು ಗಂಟೆ ಪೋಲಿಸರು ಇಲಾಖೆಯಾಧಿಕಾರಿಗಳೊಂದಿಗೆ ಚರ್ಚಿಸಿದರು.
ದಲಿತ ಸಭೆಗಳ ಬಗ್ಗೆ ಮಾಹಿತಿ
ಇದೇ ವೇಳೆ ದಲಿತ ಸಮುದಾಯಗಳ ಸಭೆ ಮತ್ತು ಅವರೊಂದಿಗಿನ ಸಮನ್ವಯಗಳ ಕುರಿತು ಕೋಟ ಆರಕ್ಷಕ ಠಾಣಾಧಿಕಾರಿ ರಾಘವೇಂದ್ರ ಬಳಿ ಚರ್ಚಿಸಿದರು.
ಪ್ರಕರಣದ ಕುರಿತು ಮಾಹಿತಿ
ಕೋಟ ಆರಕ್ಷಕ ಠಾಣೆಯಲ್ಲಿ ದಾಖಲಾದ ಪ್ರಕರಣಗಳ ಮಾಹಿತಿ ಪಡೆದ ಅವರು ಕೇಸು ದಾಖಲಿಸಿದರನ್ನು ಸಂಪರ್ಕಿಸಿ ಅವರೊಂದಿಗೂ ಫೋನ್ ಮೂಲಕ ಚರ್ಚಿಸಿದರು. ಅಪಘಾತ, ಕ್ರೂರ ಪ್ರಕರಣಗಳು, ಅಧಿಕೃತ ರಕ್ಷಣಾ ಆಯುಧಗಳ ಪರವಾನಿಗೆ, ಹೊಂದಿರುವವರ ಕುರಿತು ಮಾಹಿತಿ ಪಡೆದರು.

ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಸಿವಿಲ್ ವ್ಯಾಜ್ಯಗಳ ಕುರಿತು ಠಾಣಾ ಉಪನಿರೀಕ್ಷಕ ರಾಘವೇಂದ್ರ ಸಿ. ಬಳಿ ಗೃಹ ಸಚಿವರು ಪ್ರಶ್ನಿಸಿ ಗಮನ ಸೆಳೆದರು. ಅಪಘಾತವನ್ನು ಘೋರ ಪಾತಕ ಕೃತ್ಯಗಳಲ್ಲಿ ಪರಿಗಣಿಸುತ್ತೀರಾ ಎಂದು ಕೇಳಿದ ಪ್ರಶ್ನೆ ಗೆ, ಉಡುಪಿ ಜಿಲ್ಲಾ ಎಸ್.ಪಿ ಹರಿರಾಂ ಶಂಕರ್ ಉತ್ತರ ನೀಡಿ, ಘೋರ, ಭೀಕರ, ಬೇಕಾಬಿಟ್ಟಿ ಚಾಲನೆಯಿಂದ ಆದ ಜೀವ ಹಾನಿ ಪ್ರಕರಣಗಳು ಅಂತಹ ದಾರುಣ ಪ್ರಕರಣಗಳಲ್ಲಿ ಬರುತ್ತವೆ ಎಂದರು.
ಸಾಮಾಜಿಕ ಕಾರ್ಯಕರ್ತರು ಸಚಿವರಿಗೆ, ಪೋಲೀಸ್ ವಾಹನ ಕೊರತೆ ಕುರಿತು ಗಮನ ಸೆಳೆದರಲ್ಲದೆ ಹೆಚ್ಚುತ್ತಿರುವ ಸಿವಿಲ್ ವ್ಯಾಜ್ಯಗಳು, ಪಿಡಿಓ ನಿರ್ಲಕ್ಷದಿಂದ ಆಗುತ್ತಿದ್ದು, ಸಮಯಕ್ಕೆ ಸರಿಯಾದ ಸ್ಪಂದನ ಇದ್ದಲ್ಲಿ ಪ್ರಕರಣ ಠಾಣೆ ಮೆಟ್ಟಿಲು ಹತ್ತುವುದಿಲ್ಲ, ಹೆದ್ದಾರಿ ಬ್ಯಾರಿಕೇಡ್ ಆವಾಂತರ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಮಾಲೋಚಿಸಿ ಸುಗಮ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಎಲ್ಲಾ ಜಾತಿ, ಸಮುದಾಯದ ಸಣ್ಣ, ದೊಡ್ಡ ಪ್ರಾರ್ಥನಾ ಮಂದಿರಗಳಿಗೆ ರಾತ್ರಿ ಬೆಳಕಿನ ಸೌಲಭ್ಯ ಹಾಗೂ ಸಿಸಿಟಿವಿ ಅಳವಡಿಸುವಂತೆಯೂ, ಅದರ ಮಾಹಿತಿ ಪ್ರತಿದಿನ ಠಾಣಾ ವ್ಯಾಪ್ತಿಯಲ್ಲಿ ಬರುವಂತೆಯೂ ಸಲಹೆ ನೀಡಲಾಯಿತು.
ಪೊಲೀಸ್ ಕಾನ್ ಸ್ಟೇಬಲ್ ಆಸಕ್ತ ಅಭ್ಯರ್ಥಿಗಳ ವಯೋಮಿತಿ ೩೩ ವರ್ಷಕ್ಕೆ ಏರಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅನ್ಯ ರಾಜ್ಯಗಳಲ್ಲಿನ ವಿವರ ಪಡೆದು ಮುಂದೆ ಈ ಬಗ್ಗೆ ಕ್ರಮ ಕೈ ಗೊಳ್ಳಲಾಗುವುದು ಎಂದು ಹೇಳಿದರು.ಅಲ್ಲದೇ ಎರಡು, ಮೂರು ತಿಂಗಳಿoದ ಕೋಟ ಠಾಣೆಗೆ ವಾಹನ ಇಲ್ಲದೆ ಇರುವುದು, ಟೋಲ್ ಸಮಸ್ಯೆ, ಸಮುದ್ರ ಕಿನಾರೆಯಲ್ಲಿನ ಬಂದೋ ಬಸ್ತ್, ಎಸ್ಸಿ ಎಸ್ಟಿ ಸಮಸ್ಯೆ ನಿರ್ಮೂಲನೆ, ಕಂದಾಯ ಇಲಾಖೆಯ ವ್ಯಾಜ್ಯಗಳು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಕೊರತೆ ಬಗ್ಗೆ ಕೇಳಿದ ಪ್ರೆಶ್ನೆಗೆ ಆದಷ್ಟು ಬೇಗ ನೇಮಕಾತಿ ಪಕ್ರಿಯೆ ನಡೆಯಲಿದೆ ಎಂದರು. ಈ ಮೊದಲು ಠಾಣೆಯಲ್ಲಿ ಗೃಹಸಚಿವರಿಗೆ ವಿಶೇ಼ಷ ಪೋಲಿಸ್ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಪೋಲೀಸ್ ಅಧಿಕಾರಿಗಳಾದ ಐಜಿ ಅಮಿತ್ ಸಿಂಗ್, ಜಿಲ್ಲಾ ಎಸ್ಪಿ ಹರಿರಾಂ ಶಂಕರ್, ಎಎಸ್ಪಿ ಪರಮೇಶ್ವರ್, ಉಡುಪಿ ಡಿಎಸ್ಪಿ ಡಿ.ಟಿ ಪ್ರಭು, ಕುಂದಾಪುರ ಡಿಎಸ್ಪಿ ಎಚ್.ಡಿ ಕುಲಕರ್ಣಿ, ಬ್ರಹ್ಮಾವರ ಠಾಣೆಯ ವೃತ ನಿರೀಕ್ಷಕರು ಗೋಪಿಕೃಷ್ಣ, ಕೋಟ ಉಪನಿರೀಕ್ಷಕ ರಾಘವೇಂದ್ರ ಸಿ. ಕೋಟ ಎಸ್ಐ ಸುಧಾ ಪ್ರಭು ಮತ್ತು ಸಿಬ್ಬಂದಿಗಳು ಹಾಗೂ ಕಾಂಗ್ರೆಸ್ ಜಿಲ್ಲಾ ಮಾಜಿ ಅಧ್ಯಕ್ಷ ಅಬ್ದುಲ್ ಗಫೂರ್, ಮುನಿಯಾಲು ಉದಯ ಕುಮಾರ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಗೋಪಾಲ ಪೂಜಾರಿ, ರಾಜು ಪೂಜಾರಿ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Leave a Reply