Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪ್ರತ್ಯೇಕ ಪೊಕ್ಸ್ ಪ್ರಕರಣ – ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ, ದಂಡ

ಉಡುಪಿ, ಜೂ.18: ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೊಕ್ಸ್‌ ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಹೊನ್ನಾವರದ ಸುಬ್ರಹ್ಮಣ್ಯ ಇರಾ ಗೌಡ (36) ಹಾಗೂ ಬೆಳ್ತಂಗಡಿಯ ಆರಿಫ್ (23) ಶಿಕ್ಷೆಗೊಳಗಾದ ಆರೋಪಿಗಳು.

ಒಂದನೇ ಪ್ರಕರಣ: 16 ವರ್ಷ ಪ್ರಾಯದ ಬಾಲಕಿ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ತನ್ನ ಅಜ್ಜನನ್ನು ನೋಡಲು ತನ್ನ ತಾಯಿಯೊಂದಿಗೆ ಬಂದಿದ್ದಳು. ವಾಪಸ್ ಬಸ್ಸಿನಲ್ಲಿ ಹೋಗುವಾಗ ಆರೋಪಿ ಸುಬ್ರಹ್ಮಣ್ಯ ಗೌಡ ಬಾಲಕಿ ಹಾಗೂ ಆಕೆಯ ಚಿಕ್ಕಮ್ಮನಿಗೆ ಲೈಂಗಿಕ ಕಿರುಕುಳ ನೀಡಿದ್ದನು.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಪೊಲೀಸ್ ನಿರೀಕ್ಷಕ ಮಹೇಶ್ ಕಂಬ್ಲಿ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಒಟ್ಟು 25 ಸ್ಪಾಕ್ಷಿಗಳ ಪೈಕಿ 11 ಸ್ಪಾಕ್ಷಿಗಳ ವಿಚಾರಣೆ ಮಾಡಲಾಗಿದ್ದು, ಆರೋಪಿಯ ಮೇಲಿನ ಆರೋಪ ಸಾಬೀ ತಾದ ಹಿನ್ನೆಲೆಯಲ್ಲಿ ಆತನಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆದೇಶಿಸಿದರು.

ದಂಡ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. 5 ಸಾವಿರ ರೂ.ನಲ್ಲಿ
ಒಂದು ಸಾವಿರ ರೂ. ಸರಕಾರಕ್ಕೆ ಮತ್ತು 4 ಸಾವಿರ ರೂ. ನೊಂದ ಬಾಲಕಿಗೆ ಹಾಗೂ ನೊಂದ ಬಾಲಕಿಗೆ ಸರಕಾರದಿಂದ 10000 ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಎರಡನೇ ಪ್ರಕರಣ: ಮನೆ ಬಳಿಯ ಅಂಗಡಿಗೆ ಹಾಲು ತರಲು ತನ್ನ ತಮ್ಮನೊಂದಿಗೆ ತೆರಳಿದ್ದ 10 ವರ್ಷ ಪ್ರಾಯದ ಬಾಲಕಿ ಜೊತೆ ಆರೋಪಿ ಆರಿಫ್ ಎಂಬಾತ ಅಸಭ್ಯವಾಗಿ ವರ್ತಿಸಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಪೊಲೀಸ್ ನಿರೀಕ್ಷಕ ಪ್ರವೀಣ್ ಕುಮಾರ್ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಒಟ್ಟು 29 ಸಾಕ್ಷಿಗಳಲ್ಲಿ 7 ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟಿತು.

ಅದರಂತೆ ಆರೋಪಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತು. ದಂಡ ಪಾವತಿಸಲು ತಪ್ಪಿದಲ್ಲಿ ಒಂದು ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. 5 ಸಾವಿರ ರೂ. ನಲ್ಲಿ ಒಂದು ಸಾವಿರ ರೂ. ಸರಕಾರಕ್ಕೆ ಮತ್ತು 4 ಸಾವಿರ ರೂ. ನೊಂದ ಬಾಲಕಿಗೆ ಹಾಗೂ ನೊಂದ ಬಾಲಕಿಗೆ ಸರಕಾರದಿಂದ 25000 ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *