News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಂಗಳೂರು ಪಾಲಿಕೆಯಲ್ಲಿ ನಕಲಿ ತೆರಿಗೆ ನೋಂದಣಿ ಜಾಲ : ಮಧ್ಯವರ್ತಿಯಿಂದ ಲಕ್ಷಾಂತರ ರೂ. ದೋಖಾ…!!

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕಲಿ ತೆರಿಗೆ ನೋಂದಣಿ ಜಾಲವೊಂದು ಪತ್ತೆ ಆಗಿದ್ದು, ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ ಮಾಡಿರುವಂತಹ ಘಟನೆ ಬೆಳಕಿಗೆ ಬಂದಿದೆ.

ಮಹಾನಗರ ಪಾಲಿಕೆಯಿಂದ ನೀಡುವ ಸರ್ಟಿಫಿಕೇಟ್ನ್ನೇ ವಂಚಕರು ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನಕಲಿ ಮಾಡಿ ವಂಚಿಸಿದ್ದಾರೆ. ಅಷ್ಟೇ ಅಲ್ಲದೆ ಉದ್ದಿಮೆದಾರರಿಂದ ಹಣ ಸಂಗ್ರಹಿಸಿ ಪಾಲಿಕೆಗೆ ಕಟ್ಟದೆ ಕೆಲ ಏಜೆಂಟರು ದೋಖಾ ಮಾಡಿದ್ದಾರೆ. ಸದ್ಯ ಪಾಲಿಕೆಯಿಂದ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಈ ನಕಲಿ ಸರ್ಟಿಫಿಕೇಟ್ ಮೇಲ್ನೋಟಕ್ಕೆ ನೋಡಿದರೆ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಆದರೆ ಕೆಲ‌ ಸರ್ಟಿಫಿಕೇಟ್ನಲ್ಲಿ ಯಾರದ್ದೋ ಕ್ಯೂ ಆರ್ ಕೋಡ್ ಬಳಕೆ ಮಾಡಲಾಗಿದ್ದು, ಸ್ಕ್ಯಾನ್ ಮಾಡಿದಾಗ ಬೇರೆ ಉದ್ದಿಮೆದಾರರ ಪರವಾನಗಿ ಪತ್ರ ಲಭ್ಯವಾಗುತ್ತಿದೆ. ಉದ್ದಿಮೆದಾರರು ಇದೇ ಮೂಲ ಪ್ರತಿ ಎಂದು ನಂಬಿದ್ದಾರೆ.

ಇನ್ನು ಕೆಲ‌ ಸರ್ಟಿಫಿಕೇಟ್ಗಳಲ್ಲಿ ಪರವಾನಗಿ ನವೀಕರಣದ ದಿನಾಂಕಗಳಷ್ಟೇ ಬದಲಾವಣೆ ಮಾಡಲಾಗಿದೆ. ಸುಮಾರು 4,500 ಉದ್ದಿಮೆ ಪರವಾನಗಿಯನ್ನು ನಕಲಿ ಮಾಡಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ನಕಲಿ ಸರ್ಟಿಫಿಕೇಟ್ ನೀಡಿ ವಂಚಿಸಿರುವ ಬಗ್ಗೆ ಅನುಮಾನಗಳು ಮೂಡಿದ್ದು, ಸರ್ಟಿಫಿಕೇಟ್ಗಳ ಪರಿಶೀಲನೆಗೆ ಪಾಲಿಕೆ ಆಯುಕ್ತ ರವೀಂದ್ರ ನಾಯಕ್ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.

ಈ ಕುರಿತಾಗಿ ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ರವೀಂದ್ರ ನಾಯಕ್ ಪ್ರತಿಕ್ರಿಯಿಸಿದ್ದು, ಇಬ್ಬರು ವ್ಯಕ್ತಿಗಳು ಕಚೇರಿಗೆ ಬಂದು ದೂರು ನೀಡಿದ್ದಾರೆ. ಅವರ ಹೆಸರಿನಲ್ಲಿ ಪೃಥ್ವಿರಾಜ್‌ ಶೆಟ್ಟಿ ಎಂಬ ವ್ಯಕ್ತಿ ನಕಲಿ ಸರ್ಟಿಫಿಕೇಟ್ ಸೃಷ್ಟಿಸಿರುವ ಬಗ್ಗೆ ಹೇಳಿದ್ದಾರೆ. ಅವರು ನೀಡಿದ ಹಣ ದುರುಪಯೋಗ ಮಾಡಿ ನಕಲಿ ಸರ್ಟಿಫಿಕೇಟ್ ನೀಡಿದ್ದಾರೆ. ಮೇಲ್ನೋಟಕ್ಕೆ ಪರಿಶೀಲನೆ ಮಾಡಿದಾಗ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ನಕಲಿ ಮಾಡಿರೋದು ಗೊತ್ತಾಗಿದೆ. ಈ ಬಗ್ಗೆ ನಮ್ಮ ವಲಯ ಆಯುಕ್ತರಿಗೆ ದೂರು ದಾಖಲಿಸಲು ಸೂಚಿಸಲಾಗಿದೆ ಎಂದಿದ್ದಾರೆ.

ಹೆಚ್ಚಿನ ಉದ್ದಿಮೆ ಪರವಾನಗಿ ತಿದ್ದುಪಡಿಯಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲು ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ. ಸುಮಾರು ‌4,500 ಉದ್ದಿಮೆ ಪರವಾನಗಿ ನವೀಕರಣ ಆಗಲು ಬಾಕಿ ಇದೆ. ಅದನ್ನ ಪರಿಶೀಲನೆ ಮಾಡಿದರೆ ನಕಲಿ ಆಗಿರುವ ಸಾಧ್ಯತೆ ಗೊತ್ತಾಗುತ್ತೆ. ಉದ್ದಿಮೆದಾರರು ತಮ್ಮ ಪರವಾನಗಿ ಸರ್ಟಿಫಿಕೇಟ್ ಅನ್ನು ಕೂಡಲೇ ಪರಿಶೀಲನೆ ಮಾಡಿ. ಏನೇ ಸಮಸ್ಯೆ ಇದ್ದರೂ ಪಾಲಿಕೆಗೆ ಬಂದು ಅಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *