
ಸಾಮಾನ್ಯವಾಗಿ ಸಾರ್ವಜನಿಕರು ಪ್ರಯಾಣದ ಹಾದಿಯಲ್ಲಿ, ಪ್ಲಾಸ್ಟಿಕ್ ಬಾಟಲ್ ನೀರು ಕುಡಿಯಲು ಬಳಸುವುದು ಹೆಚ್ಚು. ಖಾಲಿ ಬಾಟಲಿಗಳ ವಿಲೇವಾರಿಗೆ ಸುರಕ್ಷಿತ ಸ್ಥಳ ಸಿಗದೆಯೋ, ಪರಿಸರಪ್ರಜ್ಞೆ ಇಲ್ಲದೆಯೋ ಏನೋ..! ಕೆಲವರು ಖಾಲಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದು ಕಂಡುಬರುತ್ತದೆ. ಈ ಪರಿಯ ಕೃತ್ಯಗಳು ಪರಿಸರದ ಸೊಬಗನ್ನು ಕೆಡಿಸುವುದಂತೂ ಸತ್ಯ.
ಎಲ್ಲೆಂದರಲ್ಲಿ ಎಸೆಯಲ್ಪಡುವ ಪ್ಲಾಸ್ಟಿಕ್ ಬಾಟಲ್ ಹಾವಳಿಗೆ ತಡೆಯೊಡ್ಡಲು, ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿ ಇರುವ ಬಸ್ಸು ನಿಲ್ದಾಣದ ಬಳಿ, ಲಯನ್ಸ್ ಕ್ಲಬ್ ಕುಂದಾಪುರವು, ಬಾಟಲ್ ಮಾದರಿಯಲ್ಲಿ ಸ್ಥಾಪಿಸಿರುವ ಬಾಟಲ್ ಸಂಗ್ರಹ ರಚನೆಯು ಗಮನಸೆಳೆದಿದೆ. ಪರಿಸರಪ್ರೇಮ ಮೆರೆದಿರುವ ಲಯನ್ಸ್ ಕ್ಲಬ್ ಕುಂದಾಪುರದ ಸಮಾಜಮುಖಿ ಸೇವೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಬಾಟಲ್ ಮಾದರಿಯಲ್ಲಿ ದೊಡ್ಡಗಾತ್ರದ ಬಾಟಲ್ ಸಂಗ್ರಹಣ ತೊಟ್ಟಿಯನ್ನು ಕಬ್ಬಿಣ ಪಟ್ಟಿಗಳಿಂದ ಪಂಜರದಂತೆ ರಚಿಸಲಾಗಿದೆ. ಸಾರ್ವಜನಿಕರಿಗೆ ಮುಚ್ಚಳ ಇರುವ ಭಾಗದಲ್ಲಿ ಖಾಲಿ ಬಾಟಲು ಹಾಕಲು ರಂಧ್ರ ಇಡಲಾಗಿದೆ. ದಾಸ್ತಾನುಗೊಂಡಾಗ ಹೊರ ತೆಗೆಯಲು ಪ್ರತೇಕ ಬಾಗಿಲು ಈ ಪರಿಕರಕ್ಕಿದೆ. ಈ ಬಾಟಲ್ ಸಂಗ್ರಹಣ ಪರಿಕರದಿಂದ ಪರಿಸರದ ರಕ್ಷಣೆ ಅಲ್ಲದೆ, ಅನುಪಯುಕ್ತ ಬಾಟಲುಗಳು ಮರುಪೂರಣಗೊಳ್ಳಲು ಸಹಕಾರಿಯಾಗಿದೆ ಎನ್ನಬಹುದು.
✍️ ತಾರಾನಾಥ್ ಮೇಸ್ತ ಶಿರೂರು
Leave a Reply