
ಶಂಕರನಾರಾಯಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಹಳ ದೊಡ್ಡ ಇತಿಹಾಸವಿದೆ. 1991ರಲ್ಲಿ ಅಂದಿನ ಶಾಸಕರಾದ ಶ್ರೀ ಜಿ.ಎಸ್ ಆಚಾರ್ ಅವರ ಪರಿಶ್ರಮದ ಫಲವಾಗಿ ಗ್ರಾಮೀಣ ಪ್ರದೇಶವಾದ ಶಂಕರನಾರಾಯಣದಲ್ಲಿ ಕಾಲೇಜು ಸ್ಥಾಪನೆಯಾಯಿತು.
ಇಂದು ಈ ಕಾಲೇಜು ಸಮೃದ್ಧವಾಗಿ ಬೆಳೆದಿದ್ದು ರಾಜ್ಯದ ಸರಕಾರಿ ಕಾಲೇಜುಗಳಲ್ಲಿ ಉನ್ನತ ಶೇಯಾಂಕ ಪಡೆದಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಈ ಕಾಲೇಜಿನಲ್ಲಿ ಅಧ್ಯಯನ ಮಾಡಿದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನಮಾನವನ್ನು ಪಡೆದು ಹೆತ್ತವರಿಗೆ ಮತ್ತು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಪ್ರಮುಖ. ಆಧುನಿಕ ಮಾಧ್ಯಮ ಪ್ರಪಂಚ ಮಕ್ಕಳ ಮನಸ್ಸು ಮತ್ತು ಏಕಾಗ್ರತೆಗೆ ಭಂಗ ತರುವಂತಿದೆ. ಆದ್ದರಿಂದ ಪೋಷಕರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ ಎಂದು ಸಾಮಾಜಿಕ ಹೋರಾಟಗಾರ ಮತ್ತು ಶಂಕರನಾರಾಯಣ ತಾಲೂಕು ರಚನಾ ಸಮಿತಿಯ ಸಂಚಾಲಕ ಶ್ರೀ ಚಿಟ್ಟೆ ರಾಜಗೋಪಾಲ ಹೆಗ್ಡೆ ಹೇಳಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಪೋಷಕರ ಸಂಘದ ಆಶ್ರಯದಲ್ಲಿ ನಡೆದ ಪೋಷಕರ ಸಭೆ ಮತ್ತು ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಶಿಸ್ತು, ಶಿಕ್ಷಣ, ಉತ್ತಮ ನಡತೆಯಿಂದ ವಿದ್ಯಾರ್ಥಿ ವ್ಯಕ್ತಿತ್ವ ಮತ್ತು ಭವಿಷ್ಯವು ರೂಪಗೊಳ್ಳಲು ಸಾಧ್ಯವೆಂದು ಹೇಳಿದರು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ಗಿರೀಶ್ ಶಾನುಭೋಗ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಶ್ರೀ ಸಚಿನ್ ಕಾಲೇಜಿನ ವಿಶೇಷತೆ ಪ್ರಸ್ತುತ ಪಡಿಸಿದರು. ವಿದ್ಯಾರ್ಥಿನಿ ಕು. ಪ್ರಜ್ಞಾ ಪ್ರಾರ್ಥಿಸಿದರು. ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ಡಾ.ವಸಂತ.ಜಿ. ಸ್ವಾಗತಿಸಿದರು. ಡಾ.ಗಂಗಾಧರ ಆರ್.ಎಚ್. ಕಾರ್ಯಕ್ರಮ ನಿರೂಪಿಸಿದರು.
Leave a Reply