Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಹಾ ಮಳೆಗೆ ಕೃಷ್ಣಾ ನದಿ ನೀರಿನ ಮಟ್ಟ ಏರಿಕೆ !

ವರದಿ : ಸಚೀನ ಆರ್ ಜಾಧವ

ಸಾವಳಗಿ: ಕೃಷ್ಣೆ ಮುನಿಸಿಕೊಂಡಿದ್ದು, ತನ್ನೊಡಲನ್ನು ತುಂಬಿಕೊಂಡು ಉಕ್ಕಿ ಹರಿಯುತ್ತಿದ್ದಾಳೆ. ಮಹಾರಾಷ್ಟ್ರದ ಮಹಾಬಳೇಶ್ವರ, ಕೊಂಕಣ ಹಾಗೂ ಸಹ್ಯಾದ್ರಿ ಶ್ರೇಣಿಯ ಘಟ್ಟ ಪ್ರದೇಶದಲ್ಲಿ ಕಳೆದ 4-5 ದಿನಗಳಿಂದ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ಮಹಾರಾಷ್ಟ್ರದ ಕೊಯ್ತಾ ಜಲಾಶಯ ಭರ್ತಿಗೆ ಕೆಲವೇ ಅಡಿ ಬಾಕಿ ಉಳಿದಿರುವುದರಿಂದ ಕೃಷ್ಣಾ ನದಿಗೆ ಪ್ರವಾಹ ಬಂದು ಈಗಾಗಲೇ ಉಗಾರ-ಕುಡಚಿ ಮಾರ್ಗದ ಸೇತುವೆ ಮೇಲೆ ನೀರು ಬಂದು ಸಾರಿಗೆ ಸಂಚಾರ ಸಂಪೂರ್ಣ ಕಡಿತಗೊಂಡಿದೆ.

ಈ ಭಾಗದಲ್ಲಿ ಮೇ ತಿಂಗಳಲ್ಲಿ ಅವಧಿಗೆ ಮುನ್ನ ಮಳೆ ಸುರಿದಿರುವುದರಿಂದ ರೈತಾಪಿ ವರ್ಗದಲ್ಲಿ ಖುಷಿ ಮುಗಿಲ ಮುಟ್ಟಿತ್ತು. ಆದರೆ, ಈಗ ಕಳೆದ ಒಂದು ತಿಂಗಳಿನಿಂದ ಕೇವಲ ತುಂತುರು ಮಳೆ ಬರುತ್ತಿದೆಯಾದರೂ ಕೂಡ ಮಹಾರಾಷ್ಟ್ರದಲ್ಲಿ ಕಳೆದು ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದೆ. ಇದರಿಂದ ಈ ಭಾಗದಲ್ಲಿ ಕೃತಕ ಪ್ರವಾಹ ಬಂದು ನದಿತೀರದ ತಗ್ಗು ಪ್ರದೇಶ ಜಲಾವೃತಗೊಂಡು ಬೆಳೆಗಳಲ್ಲಿ ನೀರು ಹೊಕ್ಕುತ್ತಿದೆ. ಕೄಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದೆ. ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ.

ಹೀಗಾಗಿ ನದಿ ಪಾತ್ರದ ಕಡೆಗೆ ಜನ-ಜಾನುವಾರುಗಳನ್ನು ಕರೆದುಕೊಂಡು ಹೋಗದಂತೆ ಜಾಗೃತಿ ಮೂಡಿಸಲು ನದಿ ಪಾತ್ರಗಳಲ್ಲಿ ತಾಲೂಕು ಆಡಳಿತ ಡಂಗೂರ ಸಾರುತ್ತಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಗುರುವಾರ ನೀರಿನ ಒಳಹರಿವು 126500 ಕ್ಯೂಸೆಕ್ ಆಗಿದ್ದು, ಅದರಂತೆ ಹೊರಹರಿವು 125750 ಕ್ಯೂಸೆಕ್ ನೀರನ್ನು ಸಹ ಹೊರಬಿಡಲಾಗುತ್ತಿದೆ. ಇದರಿಂದ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿಯ ರೈತರ ಶ್ರಮಬಿಂದು ಸಾಗರ ಬ್ಯಾರೇಜ್ ಖ್ಯಾತಿಯ ‘ಶ್ರಮಬಿಂದು ಸಾಗರ’ ಸಂಪೂರ್ಣ ಭರ್ತಿಯಾಗಿ, ಬ್ಯಾರೇಜ್ ಮೇಲೆ ಬಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ.

ಮಹಾರಾಷ್ಟ್ರದ ಜಲಾಶಯಗಳಿಂದ 1 ಲಕ್ಷ ಕ್ಯೂಸೆಕ್‌ ಗೂ ಅಧಿಕ ಪ್ರಮಾಣದ ನೀರು ಬಿಡಲಾಗಿದೆ. ಕಳೆದ ಎರಡ್ಮೂರು ದಿನಗಳ ಹಿಂದೆ ನೀರಿನ ಪ್ರಮಾಣ ಹೆಚ್ಚಿಗೆ ಇತ್ತು ಇಂದು ಕಡಿಮೆ ಆಗಿದ್ದು ಆದರೂ ಪ್ರವಾಹದ ನದಿಪಾತ್ರದ ಗ್ರಾಮಗಳಿಗೆ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಕಾಳಜಿ ಕೇಂದ್ರಗಳನ್ನು ತೆರೆಯಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಹರಿದು ಬರುವ ನದಿ ನೀರು ಕಲ್ಮಶ ವಾಗಿರುತ್ತದೆ. ಆದ್ದರಿಂದ ನದಿ ತೀರದ ಸಾರ್ವಜನಿಕರು ನೀರನ್ನು ಕಾಯಿಸಿ, ಸೋಸಿ ಕುಡಿಯಬೇಕು. ಸಾರ್ವಜನಿಕರು ನದಿ ಪಾತ್ರಕ್ಕೆ ಇಳಿಯಬಾರದು ಎಂದು ನದಿ ತೀರದ ಗ್ರಾಮಗಳಲ್ಲಿ ಸೂಚನೆ ನೀಡಲಾಗಿದೆ.”
ಅನೀಲ ಬಡಿಗೇರ
ತಹಶೀಲ್ದಾ‌ರ, ಜಮಖಂಡಿ

Leave a Reply

Your email address will not be published. Required fields are marked *