
ಆವರ್ಸೆ : “ಸಾಕ್ಷರತಾ ಕಾರ್ಯಕ್ರಮವು ಭಾರತದ ಅಭಿವೃದ್ಧಿಯಲ್ಲಿ ಬಹಳ ಮಹತ್ವದ ಪಾತ್ರ ವಹಿಸಲಿದೆ. ದೇಶದ ಸುಸ್ಥಿರ ಅಭಿವೃದ್ಧಿಗೆ ಸಹಕರಿಯಾಗಲಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯಂತೆ ಜಿಲ್ಲಾ ವಯಸ್ಕರ ಶಿಕ್ಷಣ ಕಚೇರಿಯ ಮೂಲಕ ಶಾಲಾ ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಂಪೂರ್ಣ ಸಾಕ್ಷರತಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಾಕ್ಷರತಾ ಕಾರ್ಯಕ್ರಮದಲ್ಲಿ ಬೋಧಕರು ಬಹಳ ಮಹತ್ವದ ಪಾತ್ರ ವಹಿಸಲಿದ್ದಾರೆ.
ಎಲ್ಲಾ ವಯಸ್ಸಿನ ಅನಕ್ಷರಸ್ಥರನ್ನು ಗುರುತಿಸಿ ಅವರ ಮನವೊಲಿಸಿ ಕಲಿಕೆಗೆ ಅನುವು ಮಾಡಿಕೊಟ್ಟು ಆ ಮೂಲಕ ಗ್ರಾಮವನ್ನು ಸಂಪೂರ್ಣ ಸಾಕ್ಷರತಾ ಗ್ರಾಮವನ್ನಾಗಿ ಪರಿವರ್ತಿಸುವಲ್ಲಿ ಬೋಧಕರೇ ಮುಂಚೂಣಿಯ ಪಾತ್ರ ವಹಿಸಲಿದ್ದಾರೆ.” ಎಂದು ಉಡುಪಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಶ್ರೀ ಯೋಗ ನರಸಿಂಹ ಸ್ವಾಮಿ ಇವರು ತಿಳಿಸಿದರು. ಇವರು ಆಗಸ್ಟ್ 20 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರ್ಸೆ ಇಲ್ಲಿ ನಡೆದ ಆವರ್ಸೆ ಮತ್ತು ನಾಲ್ಕೂರು ಪಂಚಾಯತ್ ವ್ಯಾಪ್ತಿಯ ಸಾಕ್ಷರತಾ ಕಾರ್ಯಕ್ರಮದ ಬೋಧಕರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಎರಡೂ ಪಂಚಾಯತ್ ಗಳಿಂದ ಸುಮಾರು 30 ಅಂಗನವಾಡಿ ಕಾರ್ಯಕರ್ತೆಯರು ಸಾಕ್ಷರತಾ ಕಾರ್ಯಕ್ರಮದ ಬೋಧಕರಾಗಿ ಕರ್ತವ್ಯ ನಿರ್ವಹಿಸಲಿದ್ದು, ಸದರಿಯವರಿಗೆ ಸಾಕ್ಷರತಾ ಕಾರ್ಯಕ್ರಮದ ಕಲಿಕಾ ಕೇಂದ್ರ ನಿರ್ವಹಣೆ, ಕಲಿಕಾ ಪ್ರಕ್ರಿಯೆ ಯ ಚಟುವಟಿಕೆಗಳು, ಓದು ಮತ್ತು ಬರಹದ ಪುಸ್ತಕಗಳ ನಿರ್ವಹಣೆ, ಅನಕ್ಷರಸ್ಥರನ್ನು ಮನವೊಲಿಸಿ ಉತ್ತಮ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡುವುದು ಇತ್ಯಾದಿ ವಿಚಾರಗಳ ಕುರಿತಾಗಿ ಸಂಪನ್ಮೂಲ ವ್ಯಕ್ತಿ ದೂಪದಕಟ್ಟೆ ಸಿ. ಆರ್. ಪಿ. ಶಾಂತಾ ಇವರು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಅನಕ್ಷರಸ್ಥರಿಗೆ ವಿತರಿಸಲು ಓದು ಮತ್ತು ಬರಹದ ಸಾಹಿತ್ಯವನ್ನು ಬೋಧಕರಿಗೆ ಹಸ್ತಾಂತರಿಸಲಾಯಿತು . ಎರಡೂ ಗ್ರಾಮಗಳ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು, ಪಿಡಿಓ ಹಾಗೂ ಅಂಗನವಾಡಿ ಸೂಪರ್ವೈಸರ್ ಗಳು ಉತ್ತಮವಾದ ಸಹಕಾರ ನೀಡಿರುತ್ತಾರೆ. ಬ್ರಹ್ಮಾವರ ಬಿ ಆರ್ ಸಿ ಸಮನ್ವಯಾಧಿಕಾರಿಗಳಾದ ಸುರೇಶ್ ಕುಂದರ್ ಕಾರ್ಯಗಾರಕ್ಕೆ ಶುಭ ಹಾರೈಸಿದರು. ಆವರ್ಸೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ ಹಾಗೂ ಜಿಲ್ಲಾ ಪ್ರೋಗ್ರಾಮರ್ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ತಾಲೂಕು ನೋಡಲ್ ಅಧಿಕಾರಿ ಉದಯ್ ಕೋಟ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳ ನ್ನಾಡಿದರು, ಆವರ್ಸೆ ಕ್ಲಸ್ಟರ್ ಸಿ ಆರ್ ಪಿ ಪ್ರತಿಭಾ ಕಾರ್ಯಕ್ರಮ ನಿರೂಪಣೆಗೈದರು.
Leave a Reply