Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾರಂತರು ತಾವು ನಂಬಿದ ಸತ್ಯವನ್ನು ದಿಟ್ಟತನದಿಂದ ಅನಾವರಣಗೊಳಿಸುತ್ತಿದ್ದರು: ಡಾ. ಗಣನಾಥ ಶೆಟ್ಟಿ, ಎಕ್ಕಾರು.

ಶಿವರಾಮ ಕಾರಂತರು ಬಹುಮುಖ ಪ್ರತಿಭೆ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ತಿಳಿದುಕೊಳ್ಳಬೇಕಾದ ಜ್ಞಾನವನ್ನು ಸೃಷ್ಟಿ ಮಾಡಿದ್ದಾರೆ. ಅವರು ಚಲಿಸುವ ವಿಶ್ವಕೋಶ, ಕಡಲ ತೀರದ ಭಾರ್ಗವ, ಶಿಕ್ಷಣ ತಜ್ಞ, ಅಪ್ರತಿಮ ಕಲಾವಿದ, ಪರಿಸರ ಪ್ರೇಮಿ, ಅತ್ಯದ್ಭುತ ಸಂಸ್ಕೃತಿ ಚಿಂತಕ, ವೈಚಾರಿಕ ಬರಹಗಾರ ಆಗಿದ್ದರು ಎಂದು ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಇದರ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ, ಎಕ್ಕಾರು ಅವರು ಹೇಳಿದರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಾ. ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲೆ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ  ಕೇಂದ್ರ ಶಂಕರನಾರಾಯಣ ಇಲ್ಲಿನ ಕನ್ನಡ ವಿಭಾಗದ ಸಹಯೋಗದಲ್ಲಿ ನಡೆದ ಡಾ. ಶಿವರಾಮ ಕಾರಂತ ನಾಟಕಗಳ ಸ್ವರೂಪ : ಅಧ್ಯಯನ ಶಿಬಿರ-4 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರಂತರ ನಾಟಕಗಳ ಮೂಲಕ ಕಲೆ, ಸಂಸ್ಕೃತಿ, ಶಿಕ್ಷಣ, ವಿಜ್ಞಾನ, ಆಧುನಿಕತೆ, ಪರಿಸರ ಪ್ರೇಮ, ಜೀವನ ಮೌಲ್ಯಗಳು ತಿಳಿಯಬೇಕು. ಕಾರಂತರು ಮಕ್ಕಳಿಗಾಗಿ ಬಾಲ ಪ್ರಪಂಚ ಮತ್ತು ವಿಜ್ಞಾನ ಪ್ರಪಂಚ ಕೃತಿಗಳನ್ನ ರಚಿಸಿದರು. ಕಾರಂತರ  ಕಾದಂಬರಿಗಳಲ್ಲಿ ಮರಳಿ ಮಣ್ಣಿಗೆ ಇಂದಿಗೂ ಮಾಸ್ಟರ್ ಪೀಸ್ ಆಗಿಯೇ ಉಳಿದಿದೆ.

ಅವರ ಸರಸಮ್ಮನ ಸಮಾಧಿ ಕಾದಂಬರಿ ಲೌಕಿಕ ಜೀವನದ ಸತ್ಯ ಏನು ಎಂಬುದನ್ನು ಅನಾವರಣ ಗೊಳಿಸುತ್ತದೆ. ಕಾರಂತರು ಪ್ರತಿದಿನ ಪತ್ರಿಕೆ ಓದುವಾಗ ಪತ್ರಿಕೆಯಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ಅವರಿಗೆ ಪತ್ರ ಬರೆದು ಹೇಳುತಿದ್ದರು. ಅಂತಹ ಕಾರಂತರು ತಮ್ಮ ಜೀವನದಲ್ಲಿ ತಾವು ನಂಬಿಕೊoಡು ಬಂದ, ಕಂಡು ನೋಡಿದ ಸತ್ಯವನ್ನು ದಿಟ್ಟತನದಿಂದ ಅನಾವರಣಗೊಳಿಸುತ್ತಿದ್ದರು ಎಂದು ಹೇಳಿದರು.

ಕಾರ್ಯಕ್ರಮದ ಮೊದಲನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಮಾತನಾಡುತ್ತಾ ನಾಟಕ ಎಂಬ ಕಲಾ ಪ್ರಕಾರಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ನಾಟಕ ಎಂದರೆ ವಿಶ್ವ ಸಾಹಿತ್ಯ ಸೃಷ್ಟಿಯ ಮೊದಲ ರೂಪ, ಅದು ಕಾವ್ಯ ಪ್ರಯೋಗವೇ ಆಗಿತ್ತು ಎಂಬುದನ್ನು ಕವಿರಾಜ ಮಾರ್ಗದಲ್ಲಿ ಬರುವ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್ ಎಂಬ ಮಾತಿನ ಮೂಲಕ ಉಲ್ಲೇಖಿಸಿದರು. ಭರತನ ನಾಟ್ಯ ಶಾಸ್ತ್ರವನ್ನು ಉಲ್ಲೇಖಿಸುತ್ತಾ  ಯಾವುದು ಸಂತೋಷ ಆನಂದವನ್ನು ಕೊಡುತ್ತದೆಯೋ ಅದು ಕಲೆ. ನಾಟಕ ಅದು ಕಲೆಯ ಇನ್ನೊಂದು ರೂಪ. ನಟ, ನಟನೆ, ಆಂಗಿಕ, ರಂಗಭೂಮಿ, ಹಾಡು, ಸಂಗೀತ ಮೊದಲಾದ ಪರಿಕರಗಳಿಂದ ನಿರೂಪಣೆಗೊಳ್ಳುವ ಕಲೆ ನಾಟಕವಾಗಿದೆ ಎಂದರು. ಈಗ ನಾಟಕ ಆನಂದ ಮತ್ತು ಅರಿವಿನ ಕೇಂದ್ರವಾಗಿದ್ದು ಶಿವರಾಮ ಕಾರಂತರ ನಾಟಕಗಳು ಈ ಬಗೆಯಲ್ಲಿ ನಿರ್ಮಾಣವಾದವುಗಳಾಗಿವೆ ಎಂದರು.

ಭಾರತೀಯರಾದವರು ಕಾವ್ಯ ಸಂಪ್ರದಾಯದಲ್ಲಿ ನಾಟಕವನ್ನು ಬರೆಯುತ್ತಿದ್ದರು. ನಂತರ ಬಂದ ಬ್ರಿಟಿಷ್ ಕಂಪನಿ ನಾಟಕ ಪರಂಪರೆ ಭಾರತೀಯ ನಾಟಕ ಪರಂಪರೆ ಮೇಲೆ ನೇರ ಪರಿಣಾಮವನ್ನು ಉಂಟು ಮಾಡಿತು. ನಾಟಕ ಕ್ಷೇತ್ರದಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಂಡು ನಾಟಕವನ್ನು ಬರೆದ ನಾಟಕಕಾರರಲ್ಲಿ ಕಾರಂತರೇ ಮೊದಲಿಗರನಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಶಿವರಾಮ ಕಾರಂತರು ಏಕಾಂತ ನಾಟಕ, ಗೀತ ನಾಟಕ, ಪೌರಾಣಿಕ ನಾಟಕಗಳನ್ನು ಬರೆಯುವ ಮೂಲಕ ಕನ್ನಡಿಗರ ಜ್ಞಾನ ದಿಗಂತವನ್ನು ವಿಸ್ತರಿಸುವ ಪ್ರಯತ್ನ ಮಾಡಿದರು ಎಂದು ತಿಳಿಸಿದರು. ಈ ನಂತರ ಕಾರ್ಯಕ್ರಮದ ಎರಡನೇ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಕೋವಾಡಿ ಡಾ. ಚೇತನ್ ಶೆಟ್ಟಿ ಅವರು ಕಾರಂತರ ನಾಟಕಗಳನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಕಾರಂತರು ವಿಚಾರಗಳ ವಿಶ್ವಕೋಶದಂತಿದ್ದರು.

ಕಾರಂತರ ಬಗ್ಗೆ ಮತ್ತು ಅವರ ಕೃತಿಗಳ ಬಗ್ಗೆ ಆಳವಾದ ಅಧ್ಯಯನವು ಇಂದಿನ ಅಗತ್ಯ ಎಂದು ಹೇಳಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ  ಡಾ. ವಸಂತ್ ಜಿ. ಮತ್ತು ಕಾರ್ಯಕ್ರಮದ ಸಂಯೋಜಕ ಡಾ. ಗಂಗಾಧರ್ ಉಪಸ್ಥಿತರಿದ್ದರು. ಕು.ಅಕ್ಷತಾ ಪ್ರಾರ್ಥಿಸಿದರು. ಶ್ರೀಮತಿ ಪೂರ್ಣಿಮಾ ಸದಸ್ಯ ಕಾರ್ಯದರ್ಶಿ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇವರು ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮಹಲಿಂಗಪ್ಪ ವಂದಿಸಿದರು. ಶ್ರೀ ಸಚಿನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *