
ಸಾವಳಗಿ: ಭೂಸ್ವಾಧೀನ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯ ಜಮಖಂಡಿ ಉಪವಿಭಾಗಾಧಿಕಾರಿಗಳ ಪಿಠೋಪಕರಣ ಜಪ್ತಿ ಮಾಡಲು ಆದೇಶ ಮಾಡಿದೆ. ನ್ಯಾಯಾಲಯದ ಆದೇಶದ ಮೇರೆಗೆ ವಕೀಲ ಎಲ್. ಎನ್. ಸುನಗದ ಅವರು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅವರ ಸರ್ಕಾರಿ ವಾಹನ ಜಪ್ತಿ ಮಾಡಿದ ಘಟನೆ ಸೋಮವಾರ ನಡೆದಿದೆ.
ಘಟನೆ ಹಿನ್ನೆಲೆ: ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಬಾಳಪ್ಪ ಕಪ್ಪಲಗುದ್ದಿ, ದರೆಪ್ಪ ಕಪ್ಪಲಗುದ್ದಿ ಎಂಬುವವರಿಗೆ ಸೇರಿದ 4 ಎಕರೆ 28 ಗುಂಟೆ ಜಮೀನನ್ನು ಕೆರೆ ನಿರ್ಮಾಣಕ್ಕೆಂದು 2005-06ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಘಟನೆ ನಡೆದು ಹಲವು ವರ್ಷ ಕಳೆದರೂ ಈವರೆಗೂ ಸರ್ಕಾರ ಪರಿಹಾರ ನೀಡಿಲ್ಲ. ಆದ್ದರಿಂದ ಬಾಳಪ್ಪ ಮತ್ತು ದರೆಪ್ಪ ಕಪ್ಪಲಗುದ್ದಿ ಎಂಬ ರೈತರು ತಮ್ಮ ಜಮೀನಿಗೆ ಪರಿಹಾರ ದೊರಕಿಸಿಕೊಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಸುಶಾಂತ ಮಹಾವೀರ ಚೌಗಲೆ ಅವರು ಬಡ್ಡಿ ಸಮೇತ 43.33,306 ಪರಿಹಾರ ನೀಡುವಂತೆ ಆದೇಶ ನೀಡಿದ್ದರು.
ಆದರೆ ಇದುವರೆಗೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಉಪವಿಭಾಗಾಧಿರಿ ಕಚೇರಿಯ ಚರಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಆದೇಶ ನೀಡಿತ್ತು. ಉಪವಿಭಾಗಾಧಿಕಾರಿಗಳ ಕಚೇರಿ ಬೀಗ ಹಾಕಿದ್ದರಿಂದ ಎಸಿ ಅವರ ವಾಹನವನ್ನು ಜಪ್ತಿ ಮಾಡಲಾಯಿತು. ವಾಹನದ ಕೀಲಿ ಕೈ ನೀಡದ ಕಾರಣ ವಾಹನವನ್ನು ಜಪ್ತಿ ಮಾಡಿ ಏಳೆದೊಯ್ಯಲಾಗಿದೆ. ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರು ಉಪಸ್ಥಿತದ್ದರು.
Leave a Reply