Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಕಲಿ ಶಾಲಾ ವಿಮಾ ದಂಧೆ ಬಯಲು : ಇಬ್ಬರು ಮಾಜಿ ವಿಮಾ ಏಜೆಂಟ್‌ಗಳು ಅರೆಸ್ಟ್…!!

ಉಡುಪಿ: ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವಾರು ಶಾಲೆಗಳಿಗೆ ನಕಲಿ ವಿಮಾ ಪಾಲಿಸಿಗಳನ್ನು ನೀಡಿರುವುದಾಗಿ ಆರೋಪಿಸಿ ಖಾಸಗಿ ವಿಮಾ ಕಂಪನಿಯ ಇಬ್ಬರು ಮಾಜಿ ಉದ್ಯೋಗಿಗಳು ನಡೆಸಿದ ದೊಡ್ಡ ಪ್ರಮಾಣದ ವಿಮಾ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳನ್ನು ಬ್ರಹ್ಮಾವರದ ನಿವಾಸಿ ರಾಕೇಶ್ ಎಸ್ (33) ಮತ್ತು ಶಿರಸಿಯ ಚರಣ್ ಬಾಬು ಮೇಸ್ತ ಎಂದು ಗುರುತಿಸಲಾಗಿದೆ.

ಉಡುಪಿ ಎಸ್ಪಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಆರೋಪಿಗಳಾದ ರಾಕೇಶ್ ಎಸ್ ಮತ್ತು ಚರಣ್ ಬಾಬು ಮೇಸ್ತ ಈ ಹಿಂದೆ ವಿಮಾ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದರು.

ಅವರು ಉಡುಪಿ ಜಿಲ್ಲೆ ಮತ್ತು ಸುತ್ತಮುತ್ತಲಿನ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಬಸ್‌ಗಳಿಗೆ ವಿಮಾ ರಕ್ಷಣೆಯನ್ನು ನೀಡುತ್ತಿದ್ದರು ಮತ್ತು ಖಾಸಗಿ ವಿಮಾ ಸಂಸ್ಥೆಗಳನ್ನು ಪ್ರತಿನಿಧಿಸುತ್ತೇವೆ ಎಂದು ಸುಳ್ಳು ಹೇಳಿಕೊಂಡರು. ಪಾಲಿಸಿಗಳು ನಿಜವಾದವು ಎಂದು ನಂಬಿ, ಹಲವಾರು ಶಾಲೆಗಳು ಆಫರ್‌ಗಳನ್ನು ಸ್ವೀಕರಿಸಿದವು ಎಂದು ಹೇಳಿದರು.

ಕುಂದಾಪುರದಲ್ಲಿ ಶಾಲಾ ಬಸ್ ಆಟೋರಿಕ್ಷಾಗೆ ಡಿಕ್ಕಿ ಹೊಡೆದ ನಂತರ ವಂಚನೆ ಬೆಳಕಿಗೆ ಬಂದಿದ್ದು, ಶಾಲಾ ಅಧಿಕಾರಿಗಳು ವಿಮಾ ಕ್ಲೈಮ್ ಸಲ್ಲಿಸಿದರು. ತನಿಖೆಯ ನಂತರ, ಸಲ್ಲಿಸಿದ ದಾಖಲೆಗಳು ನಕಲಿ ಎಂದು ಅಧಿಕಾರಿಗಳು ಕಂಡುಕೊಂಡರು. ಪ್ರಾಥಮಿಕ ತನಿಖೆಯ ಪ್ರಕಾರ ರಾಕೇಶ್ ಸುಮಾರು 20 ನಕಲಿ ವಿಮಾ ಪಾಲಿಸಿಗಳನ್ನು ನೀಡಿದ್ದರೆ, ಚರಣ್ 17 ನಕಲಿ ವಿಮಾ ಪಾಲಿಸಿಗಳನ್ನು ನೀಡಿದ್ದಾನೆ.

ಚರಣ್ ಬಾಬು ಮೇಸ್ತಾ ತನ್ನ ನಿವಾಸದಿಂದಲೇ ಈ ವಂಚನೆಯ ಯೋಜನೆಯನ್ನು ನಿರ್ವಹಿಸುತ್ತಿದ್ದ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 46 ನಕಲಿ ಪಾಲಿಸಿಗಳನ್ನು ಪತ್ತೆಹಚ್ಚಲಾಗಿದ್ದು, ಇದರ ಮೌಲ್ಯ ಸುಮಾರು 1.5 ಕೋಟಿ ರೂ. ಆಗಿದೆ.

ಐದಕ್ಕೂ ಹೆಚ್ಚು ಶಾಲೆಗಳು ಈ ವಂಚನೆಗೆ ಬಲಿಯಾಗಿವೆ ಎಂದು ತಿಳಿದುಬಂದಿದೆ. ಪಾಲಿಸಿ ನವೀಕರಣ ಅಥವಾ ಕ್ಲೇಮ್ ಸಲ್ಲಿಕೆಗೆ ಮುನ್ನ ಎಲ್ಲಾ ಶಿಕ್ಷಣ ಸಂಸ್ಥೆಗಳು ತಮ್ಮ ಪಾಲಿಸಿ ಸಂಖ್ಯೆಗಳನ್ನು ನೇರವಾಗಿ ಆಯಾ ವಿಮಾ ಕಂಪನಿಯೊಂದಿಗೆ ಪರಿಶೀಲಿಸಬೇಕೆಂದು ಎಸ್‌ಪಿ ಹರಿರಾಮ್ ಶಂಕರ್ ಒತ್ತಾಯಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದು, ವಂಚನೆಯ ಸಂಪೂರ್ಣ ವ್ಯಾಪ್ತಿ ಬಯಲಾದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *