
ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ನಗರ ಸ್ಥಳೀಯಾಡಳಿತವಾಗಿ 50 ವರ್ಷ ಕಳೆದಿದ್ದು, ಈ ನಿಟ್ಟಿನಲ್ಲಿ ಸುವರ್ಣ ಸಂಭ್ರಮ ಕಾರ್ಯಕ್ರಮ ಅ.25 ರಂದು ಸಾಲಿಗ್ರಾಮ ಗುರುನರಸಿಂಹ ಬಯಲು ರಂಗಮoದಿರದಲ್ಲಿ ಜರಗಲಿದೆ ಎಂದು ಮುಖ್ಯಾಧಿಕಾರಿ ಅಜೇಯ ಭಂಡಾರ್ಕರ್ ಅವರು ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಾಲಿಗ್ರಾಮ ಈ ಹಿಂದೆ 10-01-1975 ರಂದು ಪುರಸಭೆಯಾಗಿದ್ದು,ಅನಂತರ ಜನಸಂಖ್ಯೆಗೆ ತಕ್ಕಂತೆ ಪುರಸಭೆ ರದ್ದುಗೊಂಡು ಪಟ್ಟಣ ಪಂಚಾಯತ್ ಆಗಿ ಮಾರ್ಪಾಡಾಗಿತ್ತು. ಸುವರ್ಣ ಸಂಭ್ರಮ ಪ್ರಯುಕ್ತ ಶಾಲಾಮಕ್ಕಳಿಂದ ಆಟೋಟ ಸ್ಪರ್ಧೆಗಳು, ಪ್ರಬಂಧ, ರಂಗವಲ್ಲಿ ಸ್ಪರ್ಧೆಗಳು, ಗ್ರಾಮೀಣ ಜನರಿಗೆ ವಿವಿಧ ಸ್ಪರ್ಧೆಗಳು, ಜಾನಪದ ಕ್ರೀಡೆಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ವಾರ್ಡುವಾರು ಹಮ್ಮಿಕೊಳ್ಳಾಲಾಗುತ್ತದೆ. ಖ್ಯಾತ ಸಾಹಿತಿ ಡಾ.ಕೆ. ಶಿವರಾಮ ಕಾರಂತ, ಭಾಗವತ ಕಾಳಿಂಗ ನಾವಡ, ಕಚೇರಿಗೆ ಸ್ಥಳ ನೀಡಿದ ದಾನಿ ಜನಾರ್ದನ ಮದ್ಯಸ್ಥರ ಪುತ್ತಳಿ ಕಚೇರಿ ಸಮೀಪ ಅನಾವರಣ ಗೊಳಿಸುವುದು ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಸ್ಮರಣ ಸಂಚಿಕೆ ಬಿಡುಗಡೆ, ನಿರಂತರ ಕಾರ್ಯಕ್ರಮವಾಗಿ ಕೊರಗ ಜನಾಂಗದ ಹತ್ತಾರು ಮಂದಿಗೆ ವಸತಿ ಸೌಲಭ್ಯ ಒದಗಿಸುವುದು, 2.02 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಘನತ್ಯಾಜ್ಯ ಘಟಕ ಮತ್ತು ಎಂ.ಆರ್ .ಎಫ್. ಘಟಕದ ಲೋಕಾರ್ಪಣೆ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತದೆ ಎಂದು ಪ.ಪಂ.ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ ತಿಳಿಸಿದರು.
ಇದೇ ವೇಳೆ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಹಾಗೂ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ, ಪ್ರಚಾರ ಸಮಿತಿಯ ಶ್ಯಾಮ ಸುಂದರ್ ನಾಯರಿ, ಸದಸ್ಯರಾದ ಕಾರ್ಕಡ ರಾಜು ಪೂಜಾರಿ, ಗಣೇಶ್, ರವೀಂದ್ರ ಕಾಮತ್, ಸಂಜೀವ ದೇವಾಡಿಗ, ಸಿಬಂದಿ ಚಂದ್ರಶೇಖರ ಸೋಮಯಾಜಿ, ಮಮತಾ ಇದ್ದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಸುವರ್ಣ ಸಂಭ್ರಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಹಾಗೂ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.ಪ.ಪಂ.ಅಧ್ಯಕ್ಷೆ ಸುಕನ್ಯಾ ಜೆ ಶೆಟ್ಟಿ,ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಅನುಸೂಯ ಹೇರ್ಳೆ, ಪ್ರಚಾರ ಸಮಿತಿಯ ಶ್ಯಾಮಸುಂದರ್ ನಾಯರಿ ಇದ್ದರು.
Leave a Reply