Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಕೆ ಪಿ ಎಸ್ ಶಾಲೆಯ ಆವರಣದ ಒಳಗೆಯೇ ಗೃಹ ಪ್ರವೇಶ ಕಾರ್ಯಕ್ರಮ

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲಾ ಆವರಣದ ಒಳಗೆಯೇ ಶಿಕ್ಷಣ ಇಲಾಖೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ   ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಅವಕಾಶವನ್ನು ಮಾಡಿ ಕೊಟ್ಟಿರುವುದು,ಶಾಲಾ ಮುಖ್ಯ ಶಿಕ್ಷಕರು,ಶಿಕ್ಷಕರಿಗೆ ಸರಕಾರದ ಅದೇಶಗಳ ಮೇಲಿನ ಭಯ ಭಕ್ತಿಯನ್ನು ಎತ್ತಿ ತೋರಿಸುತ್ತಿದೆ.

ದಿನಾಂಕ 24/10/2025 ರಂದು ಶಾಲಾ ಅವಧಿಯಲ್ಲಿಯೇ,ಗೃಹ ಪ್ರವೇಶದ ಕಾರ್ಯಕ್ರಮವನ್ನು ಮಾಡುವ ಉದ್ದೇಶದಿಂದ ಶಾಲೆಯ ಹೊಸ ಕಟ್ಟಡದಲ್ಲಿ ನಡೆಯಬೇಕಾದ ತರಗತಿಯನ್ನು ಹಳೆ ಕಟ್ಟಡಕ್ಕೆ ಸ್ಥಳಾಂತರಿಸಿ , 2 ರಿಂದ 3 ಸಾವಿರ ಜನರನ್ನು ಸೇರಿಸಿ ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿ ನಿರ್ವಿಘ್ನವಾಗಿ ಗೃಹಪ್ರವೇಶ ಕಾರ್ಯಕ್ರಮವನ್ನು ನಡೆಸಲು ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕವೃಂದ ಅವಕಾಶವನ್ನು ಮಾಡಿ ಕೊಟ್ಟಿದೆ.ಅದಲ್ಲದೆ ಆ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಸ್ಥಳೀಯ ಸಮೂಹ ಸಂಪನ್ಮೂಲ ವ್ಯಕ್ತಿ ಮತ್ತು ECO ಕೂಡ ಭಾಗಿಯಾಗಿದ್ದು ಕೂಡ ಈ ನಿಯಮ ಉಲ್ಲಂಘನೆಯ ಬಗ್ಗೆ ಚಕಾರ ಎತ್ತದೆ ಇರುವುದು ಸೋಜಿಗವೆನಿಸುತ್ತದೆ.

ಕರ್ನಾಟಕ ಸರಕಾರದ  ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ನೃಪತುಂಗ ರಸ್ತೆ ಬೆಂಗಳೂರು ಇವರು ದಿನಾಂಕ 07/02/2013 ರಂದು ಹೊರಡಿಸಿದ ಸುತ್ತೋಲೆಯ ಪ್ರಕಾರ  ಶೈಕ್ಷಣಿಕ ಚಟುವಟಿಕೆಗಳಿಗೆ ಹೊರತು ಪಡಿಸಿ ಯಾವುದೇ ಸಭೆ ಸಮಾರಂಭಗಳಿಗೆ ಶಾಲೆ ಹಾಗೂ ಶಾಲಾ ಮೈದಾನವನ್ನು ಉಪಯೋಗಿಸಬಾರದು ಹಾಗೂ ಇದಕ್ಕೆ ಸಂಬಂಧಿಸಿ ಅನುಮತಿಗಾಗಿ ಇಲಾಖೆಗೆ ಮನವಿಯನ್ನು ಕೂಡ ಸಲ್ಲಿಸಬಾರದು ಎನ್ನುವ ವ್ಯಕ್ತವಾದ ವಿಷಯವನ್ನು ಲಘುವಾಗಿ ಪರಿಗಣಿಸಲಾಗಿದೆ.

ಸರಕಾರ ಹೊರಡಿಸಿದ ಸುತ್ತೋಲೆಗಳನ್ನ ಲಘುವಾಗಿ ಪರಿಗಣಿಸಿರುವ ಮುಖ್ಯ ಶಿಕ್ಷಕರು ಹಾಗೂ ಇಲಾಖಾ ಸುತ್ತೋಲೆಯನ್ನು ಉಲ್ಲಂಘಿಸಿರುವ ಬಗ್ಗೆ ಅರಿತು ಕೂಡ ಸರಕಾರಿ ನೌಕರರಾಗಿದ್ದುಕೊಂಡು ಮುಖ್ಯ ಶಿಕ್ಷಕರ ಅನಾಸ್ತೆಯ ಬಗ್ಗೆ ಮೌನ ಸಮ್ಮತಿಯನ್ನು ತೋರಿರುವ CRP, ECO ಮತ್ತು ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆಯು ಕೂಡಲೇ ತನಿಖೆ ನಡೆಸಿ ಶಿಸ್ತು ಕ್ರಮವನ್ನು ಕೈ ಗೊಳ್ಳಬೇಕಿದೆ.

ಇಲ್ಲದೆ ಇದ್ದರೆ ಸರಕಾರದ ಹಂತದ ಸುತ್ತೋಲೆಗಳು, ಜ್ಞಾಪನಗಳು ,ಆದೇಶಗಳನ್ನು ಲಘುವಾಗಿ ಪರಿಗಣಿಸುವ ಇಂತಹ ಶಿಕ್ಷಕರ ಸಂಖ್ಯೆಯು ಜಾಸ್ತಿ ಆಗಲಿದೆ. ಸರಕಾರಿ ಶಾಲೆಯಲ್ಲಿ ಕಲಿಯುವ ಬಡಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಲು ಶಿಕ್ಷಣ ಇಲಾಖೆಯು ಬಾಧ್ಯಸ್ಥವಾಗಿರುವ ಕಾರಣ ಕಾಲ ಕಾಲಕ್ಕೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಅದೇಶಗಳು,ಸುತ್ತೋಲೆಗಳು ಜ್ಞಾಪನಗಳನ್ನು ಹೊರಡಿಸುತ್ತಾ ಇದ್ದರೂ ,ತಳಮಟ್ಟದಲ್ಲಿ ಅದನ್ನು ಕಾರ್ಯರೂಪಕ್ಕೆ ತರಬೇಕಾಗಿರುವವರು ಅದರ ಬಗ್ಗೆ ಡೋಂಟ್ ಕೇರ್ ಪ್ರವರ್ತಿಯನ್ನು ತೋರಿಸುತ್ತಿರುವುದು ಮಕ್ಕಳ ಹಿತದೃಷ್ಟಿಯಿಂದಲೇ ನೋಡಬೇಕಾಗಿದೆ.

ಮೊಯ್ದಿನ್ ಕುಟ್ಟಿ, ರಾಜ್ಯ ಸಂಚಾಲಕರು
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ.)

Leave a Reply

Your email address will not be published. Required fields are marked *