
ವರದಿ ~ಸಚೀನ ರಮೇಶ್ ಜಾಧವ ಸಾವಳಗಿ: ರಸ್ತೆಯುದ್ದಕ್ಕೂ ರಾಜಾರೋಷವಾಗಿ ಓಡಾಡುವ ಬಿಡಾಡಿ ದನಗಳು ವಾಹನಗಳಲ್ಲಿ ಸಂಚರಿಸುವವರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿವೆ. ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ದಾರಿಯೇ ಬಿಡದಂತೆ ಬಿಡಾಡಿ ಜಾನುವಾರುಗಳು ರಸ್ತೆಗಳಲ್ಲಿ, ಫುಟ್ ಪಾತ್ ಮೇಲೆ ಗುಂಪು ಗುಂಪಾಗಿ ಮಲಗುವುದು, ಅಡ್ಡಾದಿಡ್ಡಿಯಾಗಿ ಓಡಾಡುವುದು, ಇನ್ನೂ ಕೆಲವು ರಸ್ತೆಗಳ ಮಧ್ಯೆಯೇ ನಿಂತು ಕಾದಾಟ ಸಾಮಾನ್ಯ ಎನ್ನುವಂತಾಗಿದೆ.
ಜಮಖಂಡಿ ನಗರದ ಹಲವು ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಯು ಹೆಚ್ಚಾಗಿದ್ದು ರಸ್ತೆಗಳಲ್ಲಿ ಅವುಗಳ ಅಡ್ಡಾದಿಡ್ಡಿ ಓಡಾಟ ಮತ್ತು ಮಲಗುವಿಕೆಯಿಂದಾಗಿ ವಾಹನ ಸವಾರರು, ಪಾದಚಾರಿಗಳು ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಉಂಟುಮಾಡುತ್ತಿದೆ. ಇದರ ಪರಿಣಾಮವಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ಮತ್ತು ಅಪಘಾತಗಳು ಸಂಭವಿಸುತ್ತವೆ,ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ.
ನಗರಕ್ಕೆ ವ್ಯಾಪಾರ ವಹಿವಾಟಿಗಾಗಿ ನಿತ್ಯ ಸಾವಿರಾರು ಜನರು ಬರುತ್ತಾರೆ. ನಗರದಲ್ಲಿ ದಿನವಿಡಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬಿಡಾಡಿ ದನಗಳು ರಾತ್ರಿ ಹಗಲೆನ್ನದೆ ರಸ್ತೆಯ ಮೇಲೆ ನಿಲ್ಲುವುದು, ಮಲಗಿರುವುದರಿಂದ ಅಪಘಾತಗಳು ಸಂಭವಿಸಿ ಹಲವಾರು ದ್ವಿಚಕ್ರವಾಹನ ಸವಾರರು ಗಾಯಗೊಂಡ ಘಟನೆಗಳು ನಡೆದಿವೆ. ಈ ಕುರಿತು ಎಚ್ಚರವಹಿಸಬೇಕಾದ ನಗರ ಸಭೆ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಬೀದಿ ಬದಿಯ ಹೂವು-ಹಣ್ಣು,ಕಾಯಿ ಪಲ್ಯ, ತರಕಾರಿ ಮಾರುವವರು ಸೇರಿದಂತೆ ಇತರೆ ದಿನಸಿ ವ್ಯಾಪಾರಿಗಳು ಕೂಡ ಬಿಡಾಡಿ ದನಗಳ ಹಾವಳಿಗೆ ಬೇಸತ್ತು ಹೋಗಿದ್ದಾರೆ. ವ್ಯಾಪಾರ ನಡೆಸುವುದೆ ದುಸ್ತರವಾಗಿದೆ. ಸ್ವಲ್ಪ ಯಾಮಾರಿದರೂ ತರಕಾರಿಗಳಿಗೆ ಬಾಯಿ ಹಾಕಿ ಚೆಲ್ಲಾಪಿಲ್ಲಿ ಮಾಡುತ್ತವೆ. ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ ಎಂದು ತರಕಾರಿ ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ರಾತ್ರಿ ಭಯದಿಂದ ವಾಹನ ಚಾಲನೆ : ಬಿಡಾಡಿ ದನಗಳಿಂದಾಗಿ ವಾಹನ ಸವಾರರು ರಾತ್ರಿ ವೇಳೆ ಭಯದಿಂದಲೇ ವಾಹನ ಚಲಾಯಿಸುತ್ತಾರೆ. ಅದರಲ್ಲೂ ಬೀದಿ ದೀಪದ ಸಮಸ್ಯೆಯಿರುವ ರಸ್ತೆಗಳಲ್ಲಿ ಅಪಘಾತದ ಹೆಚ್ಚಾಗುತ್ತಿದೆ. ಕೆಲವೊಮ್ಮೆ ರಸ್ತೆ ಮಧ್ಯವೇ ದನಗಳು ನಿದ್ರಿಸುತ್ತಿರುತ್ತವೆ. ಇದರಿಂದ ದನಗಳು ಗುಂಪು ಅಪಘಾತಕ್ಕೆ ಆಹ್ವಾನ ನೀಡಿದಂತಿದೆ.
ಎಲ್ಲೆಂದರಲ್ಲಿ ಓಡಾಡುವ ಈ ದನ-ಕರುಗಳು ಸಿಕ್ಕಿದ್ದನ್ನು ತಿನ್ನುತ್ತವೆ. ಕಸದೊಂದಿಗೆ ಪ್ಲಾಸ್ಟಿಕ್ ಕೂಡ ಅವುಗಳ ಹೊಟ್ಟೆ ಸೇರುತ್ತಿದೆ. ಇದು ಅವುಗಳ ಪ್ರಾಣಕ್ಕೂ ಕುತ್ತು ತರುತ್ತಿದೆ. ವಾಹನಗಳು ಡಿಕ್ಕಿಯಾಗುವುದರಿಂದಲೂ ಜೀವಕ್ಕೆ ಕಂಟಕವಿದೆ. ಸವಾರರು ಕೂಡ ಗಾಯಗೊಂಡ ಉದಾಹರಣೆಗಳಿವೆ. ರಸ್ತೆಗಳ ಮಧ್ಯೆ ಕೃತಕ ಸ್ಪೀಡ್ ಬ್ರೇಕರ್ ಗಳ ರೀತಿಯಲ್ಲಿರುವ ಅವುಗಳನ್ನು ಹಿಡಿದು ಬೇರೆ ಕಡೆ ಸಾಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ನಗರದಲ್ಲಿ ಎಲ್ಲೆಂದರಲ್ಲಿ ದನಗಳು ರಸ್ತೆಗೆ ಅಡ್ಡಲಾಗಿ ನಿಂತಿರುತ್ತವೆ.ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಆದರೆ ನಗರ ಸಭೆ ಅಧಿಕಾರಿಗಳು ಮಾತ್ರ ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿಲ್ಲ
ಬಸವರಾಜ ಬಿರಾದಾರ, ಸಾಮಾಜಿಕ ಹೋರಾಟಗಾರ














Leave a Reply