
ಸರಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೋರಿಕೆ ವರ್ಗಾವಣೆಗಳು ನವೆಂಬರ್ ತಿಂಗಳ 4 ತಾರೀಕಿನಂದು ಪ್ರಾರಂಭವಾಗಲಿದೆ. ಈಗಾಗಲೇ ಅವೈಜ್ಞಾನಿಕವಾಗಿ ಕಡ್ಡಾಯ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿ ,ಮಕ್ಕಳ ಶಿಕ್ಷಣದ ಬಗ್ಗೆ ಯಾವುದೇ ಕಾಳಜಿ ವಹಿಸದೆ ಶಾಲೆಗಳಿಗೆ ರಜೆಗಳನ್ನ ಕೊಡುತ್ತಾ ಬಂದ ಸರಕಾರ ಮತ್ತು ಶಿಕ್ಷಣ ಇಲಾಖೆಯು ಈಗ ಸರಕಾರಿ ಶಾಲೆಗಳನ್ನು ಮುಚ್ಚಲು ಬೇಕಾದ ಪ್ರಕ್ರಿಯೆಯನ್ನು ವರ್ಗಾವಣೆ ಕೌನ್ಸಿಲಿಂಗ್ ಮೂಲಕ ನಡೆಸಲು ಪ್ರಯತ್ನಿಸುತ್ತಾ ಇದೆ.
ರಾಜ್ಯದಲ್ಲಿ ಸುಮಾರು 15000 ದಷ್ಟು ಶಾಲೆಗಳಲ್ಲಿ 25 ಕ್ಕಿಂತ ಕಡಿಮೆ ಮಕ್ಕಳು ಹಾಗೂ 8000 ದಷ್ಟು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದೆ ಇರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಈ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆ ಆಗಲು ಶಿಕ್ಷಕರು ಇಲ್ಲದೆ ಇರುವುದೇ ಮುಖ್ಯ ಕಾರಣವಾಗಿದೆ. ಹೀಗಿರುವಾಗ 4 ತಾರೀಕಿಗೆ ನಡೆಯಲಿರುವ ವರ್ಗಾವಣೆ ಕೌನ್ಸಿಲಿಂಗ್ ನಲ್ಲಿ 25 ಕ್ಕಿಂತ ಕಡಿಮೆ ಮಕ್ಕಳು ಇರುವ ಶಾಲೆಗಳನ್ನು ವರ್ಗಾವಣೆ ಬಯಸುವ ಶಿಕ್ಷಕರಿಗೆ ತೋರಿಸದೆ ಇರಲು ವರ್ಗಾವಣೆ ಕೋಶ ಆಯುಕ್ತರ ಕಚೇರಿ ಬೆಂಗಳೂರು ಇವರಿಂದ ಸಂದೇಶಗಳು ರವಾನೆಯಾಗಿದೆ.
ಸರಕಾರ ಮತ್ತು ಶಿಕ್ಷಣ ಇಲಾಖೆಯು ಒಂದು ಕಡೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶಾಲೆಗಳನ್ನು ನಿರ್ಮಿಸುತ್ತೇವೆ ಎನ್ನುವ ಪ್ರಖ್ಯಾಪನೆಯನ್ನು ಮಾಡುತ್ತಾ, ಗ್ರಾಮೀಣ ಭಾಗದ ಶಾಲೆಗಳನ್ನು ಮುಚ್ಚುವ ಸಂಚನ್ನು ಮಾಡುತ್ತಾ ಇರುವುದನ್ನು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಖಂಡಿಸುತ್ತಿದೆ.
ಸರಕಾರ ಮತ್ತು ಶಿಕ್ಷಣ ಇಲಾಖೆಯು ಕೂಡಲೇ ಇದರ ಬಗ್ಗೆ ಗಮನಹರಿಸಿ ದಿನಾಂಕ 4/11/2025 ರಂದು ನಡೆಯುವ ವರ್ಗಾವಣೆಯಲ್ಲಿ,ಶಿಕ್ಷಕರು ಇಲ್ಲದೇ ಇರುವ ಶಾಲೆಗಳಿಗೆ ಮೊದಲ ಪ್ರಾಶಸ್ತ್ಯವನ್ನು ನೀಡುವುದರೊಂದಿಗೆ ಕಡಿಮೆ ಮಕ್ಕಳು ಇರುವ ಗ್ರಾಮೀಣ ಭಾಗದ ಹಾಗೂ ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ಶಿಕ್ಷಕರನ್ನು ಕೊಡುವ ವ್ಯವಸ್ಥೆ ಮಾಡಬೇಕು. ಇಲ್ಲದೆ ಇದ್ದರೆ ಕಡಿಮೆ ಮಕ್ಕಳು ಇರುವ ಶಾಲೆಗಳ ಎಸ್ಡಿಎಂಸಿ,ಶಿಕ್ಷಣ ಪ್ರೇಮಿಗಳು,ಪೋಷಕರು ಹಾಗೂ ಆ ಶಾಲೆಯ ಮಕ್ಕಳನ್ನು ಸೇರಿಸಿಕೊಂಡು ರಾಜ್ಯ ಮಟ್ಟದಲ್ಲಿ ಎಸ್ಡಿಎಂಸಿಸಿಸಿಎಫ್(ರಿ.) ಪ್ರತಿಭಟನೆಗೆ ಕರೆ ಕೊಡಬೇಕಾಗುತ್ತದೆ. ಸರಕಾರ ಮತ್ತು ಶಿಕ್ಷಣ ಇಲಾಖೆಯು ಕೂಡಲೇ ತನ್ನ ನಿರ್ಧಾರವನ್ನು ಮಕ್ಕಳಿಗೆ ಪೂರಕವಾಗಿ ಬದಲಾಯಿಸ ಬೇಕಾಗಿದೆ
ಮೊಯ್ದಿನ್ ಕುಟ್ಟಿ, ರಾಜ್ಯ ಸಂಚಾಲಕರು
ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)













Leave a Reply