
ಇಂದಿನ ಆಧುನಿಕ ಜಗತ್ತಿನಲ್ಲಿ ಆಡಂಬರದ ಬದುಕಿಗೆ ಒಗ್ಗಿರುವ ಮನುಷ್ಯ ತನ್ನ ಸ್ವಾರ್ಥ ಮತ್ತು ಜೀವನಕ್ಕಾಗಿ ಮುಂದಿನ ಪೀಳಿಗೆಯನ್ನು ಮರೆತು ಕಾಡಿನ ನಾಶ ಮಾಡುತ್ತಿದ್ದಾನೆ. ಅರಣ್ಯವೇ ಈ ದೇಶದ ನಿಜವಾದ ಸಂಪತ್ತು ಎಂಬುದನ್ನು ಮರೆತಿದ್ದಾನೆ. ಮನುಷ್ಯ ಅಲೆಮಾರಿ ಜೀವನದಿಂದ ಸ್ಥಿರ ಜೀವನಕ್ಕೆ ಕಾಲಿಟ್ಟಾಗಿನಿಂದ ಕಾಡಿನ ನಾಶ ಆರಂಭವಾಗಿದ್ದು ಇಂದಿನವರೆಗೂ ಅದರ ವ್ಯಾಪ್ತಿ ವಿಸ್ತರಿಸಿದೆ.
ಈಗಿನ ಪೀಳಿಗೆ ಅರಣ್ಯವನ್ನು ಸಂರಕ್ಷಿಸದೆ ಇದ್ದರೆ ಈ ಭೂಮಿ ಮರಳುಗಾಡಿನಂತಾಗುವುದರಲ್ಲಿ ಸಂಶಯವಿಲ್ಲ. ಪ್ರಕೃತಿ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಎಂದು ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿ ಶ್ರೀಮತಿ ಜ್ಯೋತಿ ಕೆ. ಸಿ. ಅವರು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿ ನಡೆದ ಅರಣ್ಯ ಮತ್ತು ಪರಿಸರ ಸಂರಕ್ಷಣ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟರಾಮ್ ಭಟ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಅರಣ್ಯ ಮತ್ತು ವನ್ಯಜೀವಿಗಳ ಮಹತ್ವವನ್ನ ಅರಿತು ನೆಲ, ಜಲ, ವನ್ಯ ಸಂಪತ್ತನ್ನು ಉಳಿಸಿ ಬೆಳೆಸುವಂತೆ ಉತ್ತೇಜಿಸಿದರು.
ವಿದ್ಯಾರ್ಥಿಗಳಾದ ಐಶ್ವರ್ಯ, ಅನುಷಾ, ಸುಮಾ ಪ್ರಾರ್ಥಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಚಾಲಕ ಡಾ. ವಸಂತ್ ಜಿ. ಸ್ವಾಗತಿಸಿದರು. ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ರಮೇಶ್ ಪ್ರಸ್ತಾವಿಕ ನುಡಿಗಳನಾಡಿದರು. ಪರಿಸರ ಸಂಘದ ಸಂಚಾಲಕ ಮಹಾಲಿಂಗಪ್ಪ ಆರ್ ವಂದಿಸಿದರು. ತೃತೀಯ ಬಿಬಿಎ ವಿದ್ಯಾರ್ಥಿನಿ ಸುಶೈನಿ ಕಾರ್ಯಕ್ರಮ ನಿರೂಪಿಸಿದರು.












Leave a Reply