ಉಡುಪಿ : ತೆಕ್ಕಟ್ಟೆ ಕೋಮೆಯ ಯಶಸ್ವಿ ಕಲಾವೃಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿ ಯಶಸ್ವಿಯಾಗಿ 26ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಸಂಸ್ಥೆ ಯಕ್ಷಗಾನಕ್ಕೆ ನೀಡಿದ ಕೊಡುಗೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಭಾನುವಾರ ಕುಂದಾಪುರ ಸಮೀಪದ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ಇಲ್ಲಿನ ಯಶಸ್ವಿ ಕಲಾವೃಂದದ ವಾರ್ಷಿಕ ಸಮಾರಂಭ ರಂಗಾರ್ಪಣ-25 ದಲ್ಲಿ ರಾಜ್ಯ ರಾಜ್ಯೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು. ಯಶಸ್ವಿ ಕಲಾವೃಂದ ಯಕ್ಷಗಾನಕ್ಕೆ ತನ್ನ ವಿಶಿಷ್ಟ ಪರಿಕಲ್ಪನೆಯಿಂದಲೇ ಕಲಾರಸಿಕರ ಮನ ಗೆದ್ದಿದೆ.
ರಾಜ್ಯೋತ್ಸವ ಪುರಸ್ಕಾರ ಯಶಸ್ವೀ ಕಲಾವೃಂದದ ಗುರುವಿಗೂ ಬಂದಿರುವುದು ಸಂತೋಷ ತಂದಿದೆ. ಸಾಧನಾ ಕ್ಷೇತ್ರದಲ್ಲಿ ಬಹಳ ದೂರ ಸಾಗಿ ಬಂದ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರ ದೊರೆತಾಗ ಅವರನ್ನು ಅಭಿನಂದಿಸಿ ಯಶಸ್ವಿ ಕಲಾವೃಂದ ಸಂಭ್ರಮಿಸಿರುವುದನ್ನು ಕಾಣುತ್ತಿದ್ದೇವೆ ಎಂದ ಅವರು ಯಕ್ಷಗಾನ ಅಕಾಡೆಮಿ ಮಕ್ಕಳಿಗೆ ಯಕ್ಷ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.
ಈ ಮೂಲಕ ಮಕ್ಕಳಲ್ಲಿ ಸಂಸ್ಕಾರ ತುಂಬಿಸುವ ಕಾರ್ಯ ನಡೆಯಬೇಕು ಎಂಬುದೇ ಅಧ್ಯಕ್ಷನಾಗಿ ನನ್ನ ಹೆಬ್ಬಯಕೆ. ಈ ನಿಟ್ಟಿನಲ್ಲಿ ಯಶಸ್ವಿ ಕಲಾವೃಂದ ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ನೀಡುತ್ತಿರುವುದು, ಯಕ್ಷಗಾನ ಕಮ್ಮಟಗಳನ್ನು ಹಮ್ಮಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವುದು ಅಭಿನಂದನೀಯ ಎಂದು ಅವರು ತಿಳಿಸಿದರು. ಯಕ್ಷಗಾನ ಕಲೆಗೆ ಪ್ರೋತ್ಸಾಹಕರ ಅಗತ್ಯ ಹೆಚ್ಚಿದೆ. ಕೋಟದ ಪ್ರಸಿದ್ಧ ಉದ್ಯಮಿ ಆನಂದ ಸಿ. ಕುಂದರ್ ಅವರು ಈ ಕಲಾವೃಂದವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಶ್ಲಾಘನೀಯ.
ಹಿಂದೆ ರಾಜಾಶ್ರಯದಲ್ಲಿ ಮೆರದಿದ್ದ ಯಕ್ಷಗಾನ, ಇಂದು ದೇವಗಳು ಹಾಗೂ ಸಂಘಸoಸ್ಥೆಗಳ ಆಶ್ರಯದಲ್ಲಿ ನೆಳೆಯುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಮೂಲಕ ಯಕ್ಷಗಾನದ ಪಡುವಲಪಾಯ ತನ್ನ ಭವಿಷ್ಯವನ್ನು ಭದ್ರವಾಗಿಸಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು. ಗೀತಾನಂದ ಫೌಂಡೇಶನ್ ನ ಪ್ರವರ್ತಕ ಆನಂದ ಸಿ. ಕುಂದರ್ ಮಾತನಾಡಿ, ಎಲ್ಲಾ ಕಲೆಯನ್ನು ನಿರಂತರವಾಗಿ ಕರಗತ ಮಾಡಿಕೊಂಡು ಉತ್ತುಂಗಕ್ಕೇರಿದ ಸಂಸ್ಥೆಗೆ ಸಾಮಾಜಿಕವಾಗಿ ಮಾನ್ಯತೆ ದೊರೆಯಬೇಕು ಎಂದರು.















Leave a Reply