ವಿದ್ಯಾನಿಧಿ ಸಮಿತಿ (ರಿ) ಆಶ್ರಯದಲ್ಲಿ ಶ್ರೀವಿದ್ಯಾ ಲಲಿತಕಲಾ ಸಂಗೀತ ಶಾಲೆಯ ಕಲೋತ್ಸವವು ಇತ್ತೀಚೆಗೆ ವಿದ್ಯಾದೇಗುಲದಲ್ಲಿ ವಿಜ್ರಂಭಣೆಯಿಂದ ಜರುಗಿತು. ಸಂಸ್ಥೆಯ ವೇದತರಗತಿಯವರಿಂದ ಗುರುಸಮ್ಮುಖದಲ್ಲಿ ವೇದಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷೆ ಶ್ರೀಮತಿ ವೀಣಾ ಹತ್ವಾರರು ಸಭೆಯನ್ನು ಸ್ವಾಗತಿಸಿ ವಿದ್ಯಾ ಶಾಲೆ ಬೆಳೆದುಬಂದ ದಾರಿಯನ್ನು ವಿವರಿಸಿದರು.
ಮುಖ್ಯ ಅತಿಥಿ ವಿದುಷಿ ಶ್ರೀಮತಿ ಉಮಾಶಂಕರಿಯವರನ್ನು “ಸಂಗೀತ ಕಲೋಪಾಸಕಿ” ಎಂಬ ಬಿರುದಿನೊಂದಿಗೆ ಸನ್ಮಾನಿಸಲಾಯಿತು. ಅವರು ಸಭೆಯನ್ನು ಉದ್ದೇಶಿಸಿ ತಮ್ಮ ಹಾಗೂ ಶಾಲೆಯ ಸಂಬಂಧ ನೆನಪಿಸಿ, ಸಾಹಿತ್ಯ, ಸಂಗೀತದ ನಮ್ಮೆಲ್ಲರ ಜೀವನ ಸಾರ್ಥಕ, ಈ ಶಾಲೆಯು ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು. ವಿದ್ಯಾಸಂಸ್ಥೆಯ ಓರ್ವ ದಾನಿ ಶ್ರೀಮತಿ ಸರೋಜಾ ಹಾಗೂ 9 ಜನ ಗುರುವೃಂದದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಪ್ರಾಂಶುಪಾಲರಾದ ವಿದ್ವಾನ್ ಬಾಲಚಂದ್ರ ಭಾಗವತರು ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಳೀಧರ ಭಟ್ಟರು ವಂದಿಸಿದರು.
ತದನಂತರ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ, ವೀಣಾ ವಾದನ, ತಬಲಾವಾದನ, ವಾಯೋಲಿನ್, ಭರತನಾಟ್ಯ ಪ್ರಸ್ತುತಿ ಹಾಗೂ ಚಿತ್ರಕಲಾ ಪ್ರದರ್ಶನ ನೆರೆದವರನ್ನು ರಂಜಿಸಿತು. ವಂದೇಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಕುಮಾರಿ ಪ್ರಣವಿ ಸಭಾ ಕಾರ್ಯಕ್ರಮವನ್ನು ಮತ್ತು ಶ್ರೀಪಾದ ಹೆಬ್ಬಾರರು ಮನೋರಂಜನಾ ಕಾರ್ಯಕ್ರಮವನ್ನು ನಿರೂಪಿಸಿದರು ವಿದ್ಯಾನಿಧಿ ಸಮಿತಿಯ ಗೌರವಾಧ್ಯಕ್ಷ ಮಾಯಗುಂಡಿ ಮಾಧವ ಭಟ್ಟ, ಸ್ಥಾಪಕ ಅಧ್ಯಕ್ಷ ಮಾಧವ ಉಪಾಧ್ಯ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಸರ್ವಸಹಕಾರ ನೀಡಿದರು.
















Leave a Reply