ಆಳ್ವಾಸ್ ನುಡಿಸಿರಿ ಉಡುಪಿ ಘಟಕದ ವತಿಯಿಂದ 500 ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಡಿ.13ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದ ಸಮೀಪ ವಾಹನ ನಿಲುಗಡೆ ಆವರಣದಲ್ಲಿ ನಡೆಯಲಿದೆ ಎಂದು ಸಂಘಟನಾ ಕಾರ್ಯದರ್ಶಿ ಮುರಳಿ ಕಡೇಕಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಪಾದರು ಹಾಗೂ ಕಿರಿಯ ಸ್ವಾಮೀಜಿ ಸುಶೀಂದ್ರ ಶ್ರೀಪಾದರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮದ ವೇದಿಕೆಗೆ ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹೆಸರು ಇಡಲಾಗುವುದು ಹಾಗೂ ಈ ಸಾಂಸ್ಕೃತಿಕ ವೈಭವವು ಮಾಜಿ ಸಚಿವ ದಿ. ಡಾ.ವಿ.ಎಸ್. ಆಚಯ್ಯ ಅವರಿಗೆ ಅರ್ಪಣೆಯಾಗಲಿದೆ ಎಂದರು.
ಸಾಂಸ್ಕೃತಿಕ ವೈಭವದಲ್ಲಿ ನೃತ್ಯ ಪ್ರಕಾರಗಳಾದ ಯೋಗದೀಪಿಕ, ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮೀ, ಬಡಗುತಿಟ್ಟು ಯಕ್ಷಗಾನ- ಶಂತರಾರ್ಧ ಶರೀರಿಣಿ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ಪಿಕ್ ಡಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಡೊಳ್ಳು ಕುಣಿತ, ಕಥಕ್ ನೃತ್ಯ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ- ಹಿರಣಾಕ್ಷ ವಧೆ ಹಾಗೂ ಬೊಂಬೆ ವಿನೋದಾವಳಿಗಳು ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ಗೌರವಧ್ಯಕ್ಷ ವಿ. ಜಿ. ಶೆಟ್ಟಿ, ಉಡುಪಿ ಘಟಕದ ಕಾರ್ಯದರ್ಶಿ ಭುವನ ಪ್ರಸಾದ ಹೆಗ್ಡೆ, ಕಾರ್ಯಕ್ರಮ ಸಂಘಟಕರಾದ ನಿದೀಶ್ ತೋಳಾರ್, ಅಂಬರೀಷ್, ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಉದ್ಯಮಿ ಹಾಗೂ ಘಟಕದ ಕಾರ್ಯಕಾರಿಣಿ ಸದಸ್ಯ ಸುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು
ಉಡುಪಿ : ಡಿ.13, ಆಳ್ವಾಸ್ ನುಡಿಸಿರಿ














Leave a Reply