ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಬಂಧಿಸುವ ಉದ್ದೇಶದಿಂದ ಪೊಲೀಸರು ನಸುಕಿನ ಜಾವದಲ್ಲಿ ಮನೆಗೆ ನುಗ್ಗಿ ವಿಚಾರಣೆ ನೆಪದಲ್ಲಿ ಯುವತಿ ಅಕ್ಷತಾ ಪೂಜಾರಿಯವರ ಮೇಲೆ ಹಲ್ಲೆ ನಡೆಸಿ ಪುನಃ ಆಕೆ ಮತ್ತು ತಾಯಿಯ ಮೇಲೆ ಕರ್ತವ್ಯಕ್ಕೆ ಅಡ್ಡಿ ಎಂದು ಪ್ರಕರಣ ದಾಖಲಿಸಿರುವುದು ಖಂಡನೀಯ. ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಹಲ್ಲೆಗೊಳಗಾದ ಅಕ್ಷತಾ ಪೂಜಾರಿ ಅವರಿಗೆ ಸೂಕ್ತ ನ್ಯಾಯ ಒದಗಿಸಿ ಜನರಿಗೆ ಪೊಲೀಸ್ ಇಲಾಖೆ ಮೇಲೆ ಇರುವ ನಂಬಿಕೆಯನ್ನು ಉಳಿಸಿ ಎಂದು ಉಡುಪಿಯ ನಿಕಟಪೂರ್ವ ಶಾಸಕರಾದ ಕೆ. ರಘುಪತಿ ಭಟ್ ಅವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾದ ಅಕ್ಷತಾ ಪೂಜಾರಿ ಆಸ್ಪತ್ರೆಗೆ ದಾಖಲಾಗಿ ತನ್ನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಬಗ್ಗೆ ಹಾಗೂ ಈ ಬಗ್ಗೆ ತಾನು ಬ್ರಹ್ಮಾವರ ಠಾಣೆಗೆ ದೂರು ನೀಡಲು ಹೋದಾಗ ತನ್ನ ಮೇಲೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ದೂರು ದಾಖಲಿಸಿರುವುದಾಗಿ ತಿಳಿಸಿರುತ್ತಾರೆ. ಪೊಲೀಸರ ಈ ವರ್ತನೆ ನಾಗರಿಕ ಸಮಾಜ ಒಪ್ಪುವಂತದ್ದಲ್ಲ. ಪೊಲೀಸರ ಈ ತಪ್ಪು ನಿರ್ಧಾರದಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದು ಪೊಲೀಸರಿಂದ ಆದ ಲೋಪವೇ ಆಗಿರುತ್ತದೆ.
ಈಗಾಗಲೆ ಈ ಘಟನೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಪ್ರಕರಣವನ್ನು ಬ್ರಹ್ಮಾವರ ಠಾಣೆಯಿಂದ ವರ್ಗಾಯಿಸಿರುವುದಾಗಿ ಸ್ಪಷ್ಟನೆಯನ್ನು ನೀಡಿ ಮಹಿಳೆಯ ಮೇಲೆ ಇಲಾಖೆ ಸಿಬ್ಬಂದಿ ಮಾಡಿರುವ ಹಲ್ಲೆಯ ಆರೋಪದ ಬಗ್ಗೆ ಹಿರಿಯ ಅಧಿಕಾರಿಗಳಿಂದ ವಿಚಾರಣೆಗೊಳಪಡಿಸಿ ಲೋಪಗಳು ಕಂಡು ಬಂದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿರುತ್ತಾರೆ.
ಅಕ್ಷತಾ ಪೂಜಾರಿಯವರ ಮೇಲೆ ಹಲ್ಲೆ ನಡೆಸಿದ ಪೊಲೀಸರ ಬಗ್ಗೆ ಸರಿಯಾದ ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಸೂಕ್ತ ಕ್ರಮಗಳನ್ನು ಕೈಗೊಂಡಾಗ ಮಾತ್ರ ಜನತೆಗೆ ಇಲಾಖೆ ಮೇಲೆ ವಿಶ್ವಾಸ ಮೂಡುತ್ತದೆ. ಅಲ್ಲದೆ ಆಕೆ ಮತ್ತು ಆಕೆಯ ತಾಯಿಯ ಮೇಲೆ ದಾಖಲಾದ ಪ್ರಕರಣಗಳನ್ನು ರದ್ದುಪಡಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಷತಾ ಪೂಜಾರಿ ಮೇಲೆ ಪೊಲೀಸರ ಹಲ್ಲೆ ಖಂಡನೀಯ. ಆ ಪೊಲೀಸರ ವಿರುದ್ಧ ಸೂಕ್ತ ಕ್ರಮ ವಹಿಸಿ ಅಕ್ಷತಾ ಪೂಜಾರಿ ಅವರಿಗೆ ನ್ಯಾಯ ಒದಗಿಸಿ ಇಲಾಖೆ ಮೇಲಿನ ನಂಬಿಕೆ ಉಳಿಸಿ – ರಘುಪತಿ ಭಟ್ ಒತ್ತಾಯ















Leave a Reply