ಪ್ರಕೃತಿಯಿಂದ ಪ್ರಾಪ್ತವಾದ ಪ್ರತಿಯೊಂದು ವಸ್ತುವನ್ನೂ ಪೂಜಿಸಿ, ಗೌರವ ಸ್ಥಾನದಲ್ಲಿಟ್ಟು ಆರಾಧಿಸುವುದು ಭಾರತೀಯರ ಶ್ರೇಷ್ಠ ಮನೋಧರ್ಮವೆಂದರೆ ಅತಿಶಯೋಕ್ತಿಯಾಗದು. ಅಂತವುಗಳಲ್ಲಿ ಅರಳಿ ಅಥವಾ ಅಶ್ವತ್ಥ ವೃಕ್ಷವು ಒಂದು. ಮೊರೇಸಿ ಕುಟುಂಬಕ್ಕೆ ಸೇರಿದ Ficus religiosa ಎಂಬ ವೈಜ್ಞಾನಿಕ ಹೆಸರಿನ ಅರಳಿ ಮರಕ್ಕೆ ತುಳಸಿಯಷ್ಟೇ ಪ್ರಾಧಾನ್ಯತೆಯಿದೆ. ಈ ಮರಕ್ಕೆ ಆಂಗ್ಲ ಭಾಷೆಯಲ್ಲಿ ಪೀಪಲ್ ಟ್ರೀ ಎಂದು ಕರೆಯಲಾಗುತ್ತದೆ.
ಭಾರತ ಈ ವೃಕ್ಷದ ಉಗಮಸ್ಥಾನವಾಗಿದ್ದು, ಹಲವು ಶತಮಾನಗಳ ಕಾಲ ಇದು ಜೀವಂತವಾಗಿದ್ದ ದಾಖಲೆಗಳಿವೆ. ಪ್ರ ಶ.ಪೂ. 288ರಲ್ಲಿ ನೆಟ್ಟ ಒಂದು ಮರ ಶ್ರೀಲಂಕದಲ್ಲಿ ಇದ್ದಿತು. ವಿದುರಾಶ್ವತ್ಥದಲ್ಲಿರುವ ಅರಳಿ ಮರವೂ ಬಹು ಹಳೆಯದು. ಅರಳಿಯ ಎಳೆಯ ಎಲೆ ತಾಮ್ರವರ್ಣದ್ದು, ಬಲಿತ ಎಲೆ ಹಸಿರು, ಹೂಗೊಂಚಲು ಹೈಪ್ಯಾಂತೋಡಿಯಂ ಮಾದರಿಯದು. ಬೆಳೆಯುವ ಆರಂಭದಲ್ಲಿ ಪರಾವಲಂಬಿ ಸಸ್ಯವಾಗಿದ್ದರೂ ಅನಂತರ ಸ್ವತಂತ್ರ ಮರವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕೊಂಬೆಗಳಿರುವ ಈ ಮರವನ್ನು ಬೀಜಗಳಿಂದ ಅಥವಾ ಬೆಳೆದ ಸಸ್ಯಗಳಿಂದ ವೃದ್ಧಿ ಮಾಡಬಹುದು. ನಿರ್ಲಿಂಗ ರೀತಿಯಲ್ಲಿ ಇದನ್ನು ವೃದ್ಧಿಮಾಡಲಾಗುವುದಿಲ್ಲ. ಈ ಮರ ಸುಮಾರು 10-30 ಮೀ ಎತ್ತರ ಬೆಳೆಯಬಲ್ಲುದು.
ಧಾರ್ಮಿಕ ಮಹತ್ವವನ್ನು ಹೊಂದಿರುವ ಈ ಮರವನ್ನು ಭಾರತದ ಪ್ರತಿ ಗ್ರಾಮದಲ್ಲಿ ಕನಿಷ್ಠ ಒಂದಾದರೂ ಕಾಣಬಹುದು. ಯಾವುದೇ ಪೋಷಣೆಯಿಲ್ಲದೇ ಸೊಂಪಾಗಿ ಬೆಳೆಯುವ ಈ ಮರವನ್ನು ಅನಿವಾರ್ಯವಾಗದ ಹೊರತು ಯಾರೂ ಕಡಿಯುವುದಿಲ್ಲ. ಪ್ರಪಂಚದಲ್ಲಿರುವ ಎಲ್ಲಾ ಮರಗಳಿಗಿಂತ ಈ ಮರ ಭಿನ್ನ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ ‘ಚಲದಲಃ’ ಎಂದೂ ಕರೆಯುತ್ತಾರೆ. ಅಂದರೆ ಯಾವಾಗಲೂ ಚಲನಶೀಲವಾದ ಎಲೆಗಳುಳ್ಳ ಮರ ಎಂದರ್ಥ. ಗಾಳಿಯ ಸುಳಿಯೇ ಇಲ್ಲದೆ ಎಲ್ಲಾ ಮರಗಳೂ ಸ್ಥಬ್ಧವಾಗಿರುವಾಗ, ಸಣ್ಣ ಗಾಳಿಯ ಎಳೆ ಬಂದರೆ ಸಾಕು ಈ ಮರದ ಎಲೆಗಳು ಗಿಲಿ-ಗಿಲಿ ಎಂದು ಹಂದಾಡಲು ಆರಂಭಿಸುತ್ತವೆ.
ಸನಾತನ ಧರ್ಮದಲ್ಲಿ ಅಶ್ವತ್ಥ ವೃಕ್ಷವನ್ನು ತ್ರಿಮೂರ್ತಿಗಳ ಆವಾಸ ಸ್ಥಾನವೆಂದು ಕರೆದು ಪೂಜಿಸುತ್ತಾರೆ. ಸ್ಕಂದ ಪುರಾಣದಲ್ಲಿ, ವಿಷ್ಣುವು ಅರಳಿ ಮರದ ಬೇರುಗಳಲ್ಲಿ ನೆಲೆಸಿದ್ದಾನೆ, ಕೇಶವನು ಕಾಂಡದಲ್ಲಿ ನೆಲೆಸಿದ್ದಾನೆ, ಭಗವಾನ್ ಶ್ರೀ ಹರಿಯು ಎಲೆಗಳಲ್ಲಿ ಮತ್ತು ನಾರಾಯಣನು ಕೊಂಬೆಗಳಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ. ಈ ಮರವನ್ನು ಪಾಪಗಳ ನಾಶಕ ಎಂದು ಪರಿಗಣಿಸಲಾಗುತ್ತದೆ. ಇದನ್ನು ಪೂಜಿಸುವುದರಿಂದ ಮತ್ತು ನೀರನ್ನು ಅರ್ಪಿಸುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಪ್ರಾಚೀನ ಕಾಲದಲ್ಲಿ ಋಷಿಗಳು ಅರಳಿ ಮರದ ತಂಪಾದ ನೆರಳಿನಲ್ಲಿ ಕೂತು ಧ್ಯಾನ ಮಾಡುತ್ತಿದ್ದರಂತೆ.
ಅಶ್ವತ್ಥಃ ಸರ್ವ ವೃಕ್ಷಾಣಾಮ್ ದೇವರ್ಷೀಣಾಮ್ ಚ ನಾರದಃ । ಗಂಧರ್ವಾಣಾಮ್ ಚಿತ್ರರಥಃ ಸಿದ್ಧಾನಾಮ್ ಕಪಿಲಃ ಮುನಿಃ
ಎಲ್ಲ ಮರಗಳಲ್ಲಿ ಅರಳಿಮರ ನಾನು. [ಅಶ್ವ=ಕುದುರೆಯ ರೂಪದಲ್ಲಿ ಸ್ಥ=ಇದ್ದುದರಿಂದ, ‘ಅಶ್ವತ್ಥ’ ಎನಿಸಿ ಅರಳಿ ಮರದಲ್ಲಿದ್ದೇನೆ.] ದೇವಲೋಕದ ಋಶಿಗಳಲ್ಲಿ ನಾರದ ನಾನು. [ನಾರ=ನರರ ಬಯಕೆಯೆಲ್ಲವನ್ನು ದ=ಕೊಡುವವನಾಗಿ ‘ನಾರದ’ ಎನ್ನಿಸಿ ನಾರದನಲ್ಲಿದ್ದೇನೆ.] ಗಂಧರ್ವರ ದೊರೆ ಚಿತ್ರರಥ ನಾನು. [ಚಿತ್ರ=ಅಚ್ಚರಿಯ, ರಥ=ತೇರಿನಲ್ಲಿ ಚರಿಸುವುದರಿಂದ ‘ಚಿತ್ರರಥ’ ಎನ್ನಿಸಿ ಗಂದರ್ವ ರಾಜ ಚಿತ್ರರಥನಲ್ಲಿದ್ದೇನೆ.] ಯೋಗಸಿದ್ಧರಲ್ಲಿ [ಕ=ಸುಖರೂಪನಾಗಿ, ಪಿ=ಪಾಲಿಸುವುದರಿಂದ, ಮತ್ತು ಲ=ಲಯಗೊಳಿಸುವುದರಿಂದ] ಕಪಿಲ ಮುನಿ ನಾನು.
ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು “ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷ ಅಶ್ವತ್ಥ” ಎಂದು ಹೇಳಿಕೊಂಡಿದ್ದಾನೆ. ಅವನು ಈ ಪವಿತ್ರ ಮರದ ನೆರಳಿನಲ್ಲಿಯೇ ನಿಧನನಾದುದ್ದರಿಂದ ಕಲಿಯುಗದ ಆರಂಭವು ಈ ಪುಣ್ಯ ವೃಕ್ಷದ ನೆರಳಿನಲ್ಲಿದೆ ಎಂದು ನಂಬಲಾಗಿದೆ.
ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಅಶ್ವತ್ಥ ಮರಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಕಾಣಬಹುದು. ಅವುಗಳಲ್ಲಿ ಸತಿ ಸಾವಿತ್ರಿಯ ಕಥೆಯೂ ಒಂದು. ಸಾವಿತ್ರಿಯು ವಿವಾಹವಾಗಿ ಒಂದು ವರ್ಷದಲ್ಲಿಯೇ ಅಶ್ವತ್ಥ ಮರದ ಹತ್ತಿರ ಬಳಿ ಅವಳ ಪತಿ ಸತ್ಯವಾನನು ಸಾಯುತ್ತಾನೆ. ಆಗ ತನ್ನ ಬುದ್ಧಿವಂತಿಕೆ ಹಾಗೂ ದೃಢವಾದ ದೈವ ಭಕ್ತಿಯ ಮೂಲಕ ಗಂಡನಿಗೆ ಜೀವ ಬರುವಂತೆ ಮಾಡುತ್ತಾಳೆ ಸಾವಿತ್ರಿ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಮಹಿಳೆಯರು ತಮ್ಮ ಸೌಭಾಗ್ಯವನ್ನು ಗಟ್ಟಿಗೊಳಿಸಲು, ಪತಿಯ ಆಯುಷ್ಯದ ವೃದ್ಧಿಗೆ, ಕುಟುಂಬದ ಏಳಿಗೆಗೆ, ಅವಿವಾಹಿತರು ವಿವಾಹ ಆಗಲು, ಕೆಲಸವನ್ನು ಪಡೆದುಕೊಳ್ಳಲು ಹಾಗೂ ಆರೋಗ್ಯ ಸುಧಾರಣೆ ಹೀಗೆ ಅನೇಕ ವಿಷಯಗಳಿಗಾಗಿ ಅಶ್ವತ್ಥ ಮರದ ಪ್ರದಕ್ಷಿಣೆ, ದೀಪ ಬೆಳಗುವುದು, ಪವಿತ್ರ ಧಾರ ಸುತ್ತುವುದು, ವ್ರತ ಕೈಗೊಳ್ಳುವುದು ಹಾಗೂ ಪೂಜೆ ಸಲ್ಲಿಸುವುದರ ಮೂಲಕ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.
ಪದ್ಮ ಪುರಾಣದ ಪ್ರಕಾರ, ತಾಯಿ ಪಾರ್ವತಿಯ ಶಾಪದಿಂದಾಗಿ, ಅರಳಿ ಮರವನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗಿದೆ. ಸೋಮಾವತಿ ಅಮಾವಾಸ್ಯೆಯ ದಿನ, ವಿಷ್ಣು ಮತ್ತು ಲಕ್ಷ್ಮೀ ಪ್ರತ್ಯಕ್ಷವಾಗಿ ಬಂದು ಅರಳಿ ಮರದಲ್ಲಿ ನೆಲೆಸುತ್ತಾರೆ. ಅಶ್ವತ್ಥ ವೃಕ್ಷದ ದರ್ಶನ ಪಾಪನಾಶಕ, ಸ್ಪರ್ಶ ಶ್ರೀಕಾರಕ , ಪ್ರದಕ್ಷಿಣೆ ಆಯುಷ್ಯಕಾರಕ ಎಂದು ಪದ್ಮ ಪುರಾಣ ಹೇಳುತ್ತದೆ. ಅರಳಿ ವೃಕ್ಷವನ್ನು ಉಪನಿಷತ್ತುಗಳಲ್ಲಿಯೂ ವಿವರವಾಗಿ ಚರ್ಚಿಸಲಾಗಿದೆ. ಯಾರು ಅರಳಿ ಮರವನ್ನು ಕಡಿಯುತ್ತಾರೋ ಅವರು ಪಾಪದ ಪಾಲುದಾರರಾಗುತ್ತಾರೆ ಎಂದು ಉಪನಿಷತ್ತುಗಳಲ್ಲಿ ಉಲ್ಲೇಖಿಸಲಾಗಿದೆ.
ಹಿಂದಿನವರು ಆಲ, ಅರಳಿ ಮತ್ತು ಅತ್ತಿ ಈ ಮೂರು ಮರಗಳಿಗೆ ಬಹಳ ಮಹತ್ವ ಕೊಟ್ಟರು. ಹಿಂದೆ ಯಜ್ಞ ಮಾಡುವಾಗ ಶಮಿ ಮತ್ತು ಅರಣಿ (ಅರಳಿ) ಸಮಿಧೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಯಜ್ಞದಲ್ಲಿ ಅರಳಿಯ ಸಮಿಧೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಅಶ್ವತ್ಥಮರದ ಸಮಿಧೆಯನ್ನು ಕಾಷ್ಟವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಠ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ. ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣವನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ. ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥಸಮಿತೆ ಒಂದು ಪ್ರಮುಖ ಸಾಧನ.
ಇಂದು ಹಲವರು ಅಶ್ವತ್ಥ ಮರದಲ್ಲಿ ದೇವತಾ ಸನ್ನಿಧಾನವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜೋತಿಷಿಗಳು ಅಶ್ವತ್ಥ ಪ್ರದಕ್ಷಿಣೆ ಬರುವಂತೆ ಹೇಳುತ್ತಾರೆ. ಇದು ಏಕೆ ಎನ್ನುವ ಕಲ್ಪನೆ ಇಲ್ಲದ ಜನ ಇದೆಲ್ಲವೂ ಮೂಢನಂಬಿಕೆ ಎಂದು ಮಾತನಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿರುವ ಎಲ್ಲ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥ. ಇಂತಹ ಶುದ್ಧ ವಾಯುವಿನ ಉಸಿರಾಟದಿಂದ ಗರ್ಭದೋಷ ಸರಿಹೋಗುವ ಸಾಧ್ಯತೆ ಇದೆ ಎಂದು ಇಂದು ವಿಜ್ಞಾನ ಕೂಡ ಒಪ್ಪಿಕೊಂಡಿದೆ.
ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ, ಬೋಧಿ ವೃಕ್ಷ ಎಂದು ಕರೆಯಲ್ಪಡುವ ಅರಳಿ ಮರವು ಬೌದ್ಧ ಧರ್ಮದಲ್ಲಿಯೂ ಸಹ ಮಹತ್ವದ್ದಾಗಿದೆ. ಬುದ್ಧನಿಗೆ ಜ್ಞಾನೋದಯವಾದ ಬುದ್ಧಗಯದಲ್ಲಿರುವ ಬೋಧಿವೃಕ್ಷ ಒಂದು ಪ್ರಸಿದ್ಧ ಅರಳಿಮರ.
ಇಂದು ಈ ಮರದ ಮಹತ್ವ ಹೆಚ್ಚಿನವರಿಗೆ ತಿಳಿದಿಲ್ಲ. ಸರ್ವದೇವತಾತ್ಮಕವಾಗಿ ವೃಕ್ಷರಾಜನೆನಿಸಿಕೊಂಡಿರುವ ಈ ಮರವನ್ನು ದೇವಾಲಯಗಳಲ್ಲಿ ಬೆಳೆಸುತ್ತಾರೆ. ಮರ ಬಹು ಗಟ್ಟಿಯಾಗಿದ್ದು ಮಳೆ-ಗಾಳಿಗೆ ಬೀಳುವುದಿಲ್ಲ. ಸೊಂಪಾದ ನೆರಳು ಕೊಡುತ್ತದೆ. ಸಾವಿರಾರು ಹಕ್ಕಿಗಳಿಗೆ ಆಶ್ರಯ ನೀಡುತ್ತದೆ. ಹುಲ್ಲಿಗಿಂತ ಎರಡು ಮೂರು ಪಟ್ಟು ಪ್ರೋಟೀನು ಹೆಚ್ಚಾಗಿರುವ ಇದರ ಎಲೆಗಳು ದನಕರುಗಳಿಗೆ, ಆನೆಗಳಿಗೆ ಉತ್ತಮ ಮೇವು. ಮಯನ್ಮಾರ್ನಲ್ಲಿ ಹಕ್ಕಿಗಳು ತಿನ್ನುತ್ತವೆ, ಇದರ ತೊಗಟೆಯಿಂದ ಟ್ಯಾನಿನ್ ತೆಗೆಯುತ್ತಾರೆ. ಬರ್ಮದಲ್ಲಿ ಇದರ ನಾರಿನಿಂದ ಕಾಗದ ತಯಾರಿಸುತ್ತಿದ್ದರಂತೆ. ಇದರಿಂದ ಹಾಲ್ನೊರೆ(ಲೇಟೆಕ್ಸ್) ದೊರೆಯುತ್ತದೆ. ಅಸ್ಸಾಂ, ಮಧ್ಯ ಪ್ರದೇಶ, ಬಂಗಾಲಗಳಲ್ಲಿ ಅರಗಿನ ಕೀಟಕ್ಕೆ ಆಶಯವೆನಿಸಿದೆ. ಅಸ್ಸಾಮಿನಲ್ಲಿ ಇದರ ಎಲೆಗಳನ್ನು ಒಂದು ಬಗೆಯ ರೇಷ್ಮೆ ಹುಳುಗಳಿಗೆ ಆಹಾರವಾಗಿ ಬಳಸುತ್ತಾರೆ. ಇದರ ಅರಗನ್ನು ಮರದ ರಂಧ್ರ ಮುಚ್ಚಲು, ಆಭರಣ ಮಾಡಲು ಬಳಸುತ್ತಾರೆ. ಪೆಟ್ಟಿಗೆ, ಬೆಂಕಿಪೊಟ್ಟಣ ತಯಾರಿಕೆಗೆ ಮರದ ಹಲಗೆ ಉಪಯೋಗವಾಗುತ್ತದೆ.
ಶನಿವಾರದಂದು ಮಾತ್ರ ಈ ವೃಕ್ಷವನ್ನು ಸ್ಪರ್ಶಿಸಬೇಕೆಂದು ಧರ್ಮಶಾಸ್ತ್ರಗಳು ವಿಧಿಸುತ್ತವೆ. ಸಂಧ್ಯಾಕಾಲದಲ್ಲಿ ಅಥವಾ ಸೂರ್ಯಾಸ್ತವಾದ ಮೇಲೆ ಪ್ರದಕ್ಷಿಣೆ ಮಾಡಬಾರದು ಎಂದು ಪದ್ಮಪುರಾಣ ಹೇಳುತ್ತದೆ. ಈ ಮರಕ್ಕೆ ಏಳು ಪ್ರದಕ್ಷಿಣೆ ಮಾಡಿದರೆ 10,000 ಗೋದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ಅಶ್ವತ್ಥ ಮರವನ್ನು ನೆಟ್ಟರೆ ಮೂರು ಸಂಪಿಗೆ ಮತ್ತು ಎಕ್ಕೆಗಿಡ, ಏಳು ಆಲದಮರ, ಎಂಟು ಬಿಲ್ವಪತ್ರೆಗಿಡ ಮತ್ತು ನಿಂಬೆಮರ ನೆಟ್ಟಷ್ಟು ಫಲ.
ಜಲಾಶಯ, ನದಿ ಸಮೀಪದಲ್ಲಿ ಅಶ್ವತ್ಥಮರವನ್ನು ನೆಟ್ಟರೆ ಪಿತೃಗಳಿಗೆ ಬಹಳ ತೃಪ್ತಿಯಿಗುತ್ತದೆ. ಅದರ ಎಲೆಗಳು ಪರ್ವಕಾಲದಲ್ಲಿ ನೀರಿನಲ್ಲಿ ಬಿದ್ದಾಗಲೆಲ್ಲಾ ಪಿಂಡ ಸಮಾನವಾಗಿ ಪಿತೃಗಳಿಗೆ ಅಕ್ಷಯಲೋಕಗಳನ್ನು ಕೊಡುತ್ತದೆ.
ವಿಜ್ಞಾನದ ಪ್ರಕಾರ, ರಾತ್ರಿಯಲ್ಲಿ ಅರಳಿ ಮರದಿಂದ ಇಂಗಾಲದ ಡೈಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತದೆ. ಅರಳಿ ಮರದ ಎಲೆಗಳು ದಟ್ಟವಾಗಿರುತ್ತವೆ. ಈ ಕಾರಣದಿಂದಾಗಿ, ಅದರಿಂದ ಹೆಚ್ಚಿನ ಪ್ರಮಾಣದ ಇಂಗಾಲದ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಈ ಕಾರಣದಿಂದಾಗಿ ಈ ಮರದ ಕೆಳಗೆ ರಾತ್ರಿ ಸಮಯದಲ್ಲಿ ಇರಬಾರದು ಎನ್ನಲಾಗಿದೆ. ಜ್ಯೋತಿಷ್ಯದ ಪ್ರಕಾರ, ಅರಳಿ ಮರವನ್ನು ಬಹಳ ಪೂಜ್ಯವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಸಹೋದರಿ ಅಲಕ್ಷ್ಮಿ ರಾತ್ರಿಯಲ್ಲಿ ಅರಳಿ ಮರದಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆಯೂ ಇದೆ. ಈ ಕಾರಣಕ್ಕಾಗಿ ರಾತ್ರಿಯಲ್ಲಿ ಅದರ ಸುತ್ತಲೂ ಹೋಗಬಾರದು.
ತೊಗಟೆ ಬಾಯಿಹುಣ್ಣು, ಆಮಶಂಕೆ, ಮೇಹರೋಗಗಳಿಗೆ ಔಷಧ. ಎಲೆಯ ಬೂದಿಯನ್ನು ಸುಟ್ಟಗಾಯಕ್ಕೆ ಎಣ್ಣೆಯೊಂದಿಗೆ ಲೇಪನ ಮಾಡುತ್ತಾರೆ. ಒಣ ಎಲೆಯ ನಾರಿನಿಂದ ದೇಹದ ಮೇಲೆ ಸುಂದರ ಚಿತ್ರಗಳನ್ನು ಬರೆಯುತ್ತಾರೆ.
ಇಂದು ಹಲವರು ಅಶ್ವತ್ಥಮರದಲ್ಲಿ ದೇವತಾ ಸನ್ನಿಧಾನವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜೋತಿಷಿಗಳು ಅಶ್ವತ್ಥ ಪ್ರದಕ್ಷಿಣೆ ಬರುವಂತೆ ಹೇಳುತ್ತಾರೆ. ಇದು ಏಕೆ ಎನ್ನುವ ಕಲ್ಪನೆ ಇಲ್ಲದ ಜನ ಇದೆಲ್ಲವೂ ಮೂಢನಂಬಿಕೆ ಎಂದು ಮಾತನಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿರುವ ಎಲ್ಲ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥ. ಇಂತಹ ಶುದ್ಧ ವಾಯುವಿನ ಉಸಿರಾಟದಿಂದ ಗರ್ಭದೋಷ ಸರಿಹೋಗುವ ಸಾಧ್ಯತೆ ಇದೆ ಎಂದು ಇಂದು ವಿಜ್ಞಾನ ಕೂಡ ಒಪ್ಪಿಕೊಂಡಿದೆ.

ಬರಹ: ಆಶ್ಲೇಶ್ ಪಿ ಆಚಾರ್ಯ, ಮೂಡುಬೆಳ್ಳೆ.
ಮಾಹಿತಿ ಸಂಗ್ರಹ: ಶ್ರೇಯಾ ಶ್ರುತೇಶ್ ಆಚಾರ್ಯ.














Leave a Reply