
ಕೋಟ: ಸಾಲಿಗ್ರಾಮದ ಕಾರ್ಕಡ ಬಡಾಹೋಳಿಯ ಶಿಥಿಲಗೊಂಡ ಮನೆಯಲ್ಲಿ ವಾಸ್ತವ್ಯವಿದ್ದ ಹಳೆಯಮ್ಮ ಪೂಜಾರ್ತಿ ಎನ್ನುವಾಕೆಯನ್ನು ಕಾರ್ಕಳದ ಸಮಾನಮನಸ್ಕರು, ಸ್ಥಳೀಯಾಡಳಿತ ಹಾಗೂ ಠಾಣೆಯ ನೆರವಿನಿಂದ ಕಾರ್ಕಳದ ಬೈಲೂರಿನ ರಂಗನಪಲ್ಕೆ ಹೊಸಬೆಳಕು ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಕಳೆದ ಸಾಕಷ್ಟು ವರ್ಷಗಳಿಂದ ಮಾನಸಿಕ ಮತ್ತು ದೈಹಿಕವಾಗಿ ಬಳಲುತ್ತಿದ್ದ ಈಕೆಗೆ ಸರಿಯಾದ ಆಹಾರ ಇಲ್ಲದೆ ಹಲವು ತಿಂಗಳಿನಿಂದ ಮನೆಯಲ್ಲಿಯೇ ಅಶಕ್ತ ಸ್ಥಿತಿಯಲ್ಲಿದ್ದ ಸ್ಥಿತಿಗತಿಯನ್ನು ಕಂಡ ಸ್ಥಳೀಯ ನೆರೆಯ ಮನೆಯವರು ಆಹಾರ ಪದಾರ್ಥಗಳನ್ನು ನೀಡಿ ಪರಸ್ಕರಿಸುತ್ತಿದ್ದರು. ಇತ್ತೀಚಿನ ಮಳೆಯಿಂದ ಮನೆಯ ಎದುರಿನ ಮಾಡು ಶಿಥಿಲಗೊಂಡಿದ್ದು ಬೀಳುವ ಅಪಾಯದಲ್ಲಿತ್ತು. ಸ್ಥಳೀಯರು ಕೋಟ ಪಿಎಸ್‍ಐ ಶಂಭುಲಿಂಗ ಮತ್ತು ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಇಂದು ಇವರುಗಳಿಗೆ ರಕ್ಷಣೆಗಾಗಿ ಮನವಿ ನೀಡಿದ್ದರು. ಮಂಗಳವಾರ ಪಟ್ಟಣಪಂಚಾಯತ್ ಮತ್ತು ಪೋಲೀಸರ ಉಪಸ್ಥಿತಿಯಲ್ಲಿ ಮನೆಯಲ್ಲಿರುವ ವಸ್ತುಗಳು, ಹಣ ಮತ್ತು ಅಡುಗೆ ಪಾತ್ರೆಗಳನ್ನು ಮಹಜರುಗೊಳಿಸಿಲಾಯಿತು. ಸ್ಥಳೀಯ ಮಹಿಳೆಯರು ಸ್ನಾನ ಮಾಡಿಸಿ, ನಂತರ ಆಂಬುಲೆನ್ಸ್ ಮೂಲಕ ಕಾರ್ಕಳ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ಸೇರಿಸಲಾಯಿತು.

ಈ ವೇಳೆ ರಂಗನಪಲ್ಕೆ ಹೊಸಬೆಳಕು ಆಶ್ರಮದ ಮುಖ್ಯಸ್ಥರಾದ ಹ.ರಾ ವಿನಯಚಂದ್ರ ಸಾಸ್ತಾನ, ತನುಲ ತರುಣ್ ಮಹಿಳೆಯನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಇಂದುಶ್ರೀ, ಪ.ಪಂ ಸದಸ್ಯ ಗಣೇಶ್, ಆರೋಗ್ಯ ನಿರೀಕ್ಷಕಿ ಮಮತ, ಹಾಗೂ ಸಿಬ್ಬಂದಿಗಳು, ಕೋಟ ಪೋಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಮೋಹನ್ ಕೊತ್ವಾಲ್, ಸಾಮಾಜಿಕ ಕಾರ್ಯಕರ್ತರಾದ ರಮೇಶ್ ಮೆಂಡನ್, ಅಚ್ಯುತ್ ಪೂಜಾರಿ, ನಾಗರಾಜ್ ಗಾಣಿಗ, ಸುರೇಶ ಮೆಂಡನ್, ಚಂದ್ರಬಡಾಹೋಳಿ, ಶಂಕರದೇವಾಡಿಗ, ನರಸಿಂಹಮರಕಾಲ, ರಘು, ಆಶಾಕಾರ್ಯಕರ್ತೆ ಗೀತಾ, ಅಂಗನವಾಡಿ ಶಿಕ್ಷಕಿಯರಾದ ಸವಿತ ಮತ್ತು ಗಿರಿಜಾ , ಜೀವನ್ ಮಿತ್ರ ಬಳಗದ ಭರತ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದು ಸಹಕರಿಸಿದರು.
ಸಾಲಿಗ್ರಾಮದ ಕಾರ್ಕಡ ಬಡಾಹೋಳಿಯ ಶಿಥಿಲಗೊಂಡ ಮನೆಯಲ್ಲಿ ವಾಸ್ತವ್ಯವಿದ್ದ ಹಳೆಯಮ್ಮ ಪೂಜಾರ್ತಿ ಎನ್ನುವಾಕೆಯನ್ನು ಕಾರ್ಕಳದ ಸಮಾನಮನಸ್ಕರು, ಸ್ಥಳೀಯಾಡಳಿತ ಹಾಗೂ ಠಾಣೆಯ ನೆರವಿನಿಂದ ಕಾರ್ಕಳದ ಬೈಲೂರಿನ ರಂಗನಪಲ್ಕೆ ಹೊಸಬೆಳಕು ಆಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದರು.
Leave a Reply