Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಂಚಾಯತ್ ಸದಸ್ಯರ ಆಸ್ತಿ ಘೋಷಣೆ ಅನಿವಾರ್ಯ: ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಸಚಿವ ಖರ್ಗೆ ಉತ್ತರ.

ಕೋಟ: ಪಂಚಾಯತ್ ಸದಸ್ಯರು ಆಸ್ತಿ ವಿವರವನ್ನು ಸಕಾಲದಲ್ಲಿ ಸಲ್ಲಿಸಿಲ್ಲ ಎನ್ನುವ ಕಾರಣಕ್ಕೆ ಸದಸ್ಯತ್ವ ಅನರ್ಹಗೊಳಿಸಿದ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿ, ಸದಸ್ಯರ ಆಸ್ತಿ ಹೊಣೆಗಾರಿಕೆ ಘೋಷಣೆ ವಿಚಾರದಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿ ಹೊಂದಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಮುಂದೆ ಘೋಷಣೆ ಮಾಡುವುದು ಅನಿವಾರ್ಯ ಎಂದು ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದರು.

ಪ್ರತಿ ಸದಸ್ಯನು ತನ್ನ ಪದಾವಧಿಯಲ್ಲಿ ಪ್ರಾರಂಭವಾದ ದಿನದಿಂದ 3 ತಿಂಗಳ ಒಳಗೆ ಮತ್ತು ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ ಸದಸ್ಯರ ಅಧಿಕಾರವಧಿ ಮುಗಿಯುವ ತನಕ, ಆರ್ಥಿಕ ವರ್ಷ ಮುಕ್ತಾಯವಾದ ಒಂದು ತಿಂಗಳ ಒಳಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿಯ ಮೂಲಕ ಆಸ್ತಿ ವಿವರ ದಾಖಲಿಸತಕ್ಕದ್ದು, ಎಂಬ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಪ್ರಕರಣ 43 ಬಿ ಯನ್ನು ಉಲ್ಲೇಖಿಸಿ ಸಚಿವ ಪ್ರಿಯಾಂಕ್ ಖರ್ಗೆ ಉತ್ತರ ನೀಡಿದರು.

ಕೋಟ ಶ್ರೀನಿವಾಸ ಪೂಜಾರಿಯವರು ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ 93,000 ಕ್ಕೂ ಮಿಕ್ಕಿರುವ ಗ್ರಾಮ ಪಂಚಾಯತ್ ಸದಸ್ಯರು ಅದರಲ್ಲಿ ಶೇ. 50 ರಷ್ಟು ಮಹಿಳೆಯರು ಶೇ. 25 ರಷ್ಟು ಪರಿಶಿಷ್ಟ ಜಾತಿ & ಪಂಗಡದವರು ಸೇರಿದಂತೆ, ಬಹುತೇಕ ಬಡವರೇ ಮೀಸಲಾತಿ ಆಧಾರದಲ್ಲಿ ಗೆದ್ದು ಬಂದಿದ್ದು, ಅನೇಕರಿಗೆ ಅನುಭವದ ಕೊರತೆಯಿದ್ದು, ಸಕಾಲದಲ್ಲಿ ಆಸ್ತಿ ವಿವರ ಸಲ್ಲಿಸದಿರುವ ಸದಸ್ಯರ ಸದಸ್ಯತ್ವ ರದ್ದು ಮಾಡಲು ನಿರ್ಧರಿಸಿದರೆ ಸಂವಿಧಾನದ 73 ನೇ ತಿದ್ದುಪಡಿಯ ಒಟ್ಟು ಆಶಯಕ್ಕೆ ಧಕ್ಕೆ ಬರುತ್ತದೆ. ಗ್ರಾಮ ಪಂಚಾಯತ್ ಸದಸ್ಯರಾಗಿ ಬಡವರ ಮಧ್ಯೆ ಕೆಲಸ ಮಾಡಿಕೊಂಡು ಸದಸ್ಯತ್ವದ ಜವಾಬ್ದಾರಿ ನಿರ್ವಹಿಸುವ ಅನೇಕರು ಬಿ.ಪಿ.ಎಲ್ ಕುಟುಂಬಕ್ಕೆ ಸೇರಿದವರಾಗಿದ್ದು, ಇಂತಹ ಸಂದರ್ಭದಲ್ಲಿ ಆಸ್ತಿ ವಿವರ ಘೋಷಣೆ ರದ್ದು ಪಡಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದರು.

Leave a Reply

Your email address will not be published. Required fields are marked *