ಶಿಕ್ಷಕ ಉದಯ್ ಕೋಟ ಇವರಿಗೆ ಡಾ. ಎಸ್ ರಾಧಾಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿ
ಕೋಟ: ಸತತ 19 ವರ್ಷಗಳ ಸೇವೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಆತ್ಮಶಕ್ತಿ ತುಂಬುವಂತಹ ಹಲವಾರು ವಿನೂತನ ಚಟುವಟಿಕೆಗಳ ಮೂಲಕ ವಿದ್ಯಾಭಿಮಾನಿಗಳ ಗಮನ ಸೆಳೆದಿರುವಂತಹ ಪ್ರಾಥಮಿಕ ಶಾಲಾ ಶಿಕ್ಷಕ ಉದಯ್ ಕೋಟ ಇವರಿಗೆ ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಚೇತನ ಫೌಂಡೇಶನ್ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ಡಾ. ಎಸ್. ರಾಧಾಕೃಷ್ಣನ್ ರಾಷ್ಟೀಯ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಧಾರವಾಡದ ಪ್ರತಿಷ್ಠಿತ ಕನಕ ಅಧ್ಯಯನ ಪೀಠದಲ್ಲಿ ಸೆ.9.09 ರಂದು ನೀಡಿ ಗೌರವಿಸಲಾಯಿತು.
ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇಲಂತ ಬೆಟ್ಟು , ಬಂಟ್ವಾಳ ತಾಲೂಕು ಇಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ್ದು , ತದನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳ್ಳೂರು – ಕಂದಾವರ , ಕುಂದಾಪುರ ತಾಲೂಕು ಇಲ್ಲಿ ಸೇವೆಯನ್ನು ಮುಂದುವರಿಸಿ, ಮುಖ್ಯ ಶಿಕ್ಷಕರಾಗಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಸೇವಾವಧಿಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ದ ಜೊತೆ ಜೊತೆಗೆ ಚಿತ್ರಕಲೆ, ಸಂಗೀತ, ಯಕ್ಷಗಾನ, ಯೋಗ, ನೃತ್ಯ ಇತ್ಯಾದಿ ಕೌಶಲಗಳನ್ನು ವರ್ಷಪೂರ್ತಿ ನೀಡುವಂತಹ ವಿಶೇಷ ಪ್ರಯತ್ನ ಮಾಡಿದ್ದು , ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪಠ್ಯದ ಹಾಡುಗಳಿಗೆ ಸರಕಾರಿ ಶಾಲೆಯ ವಿದ್ಯಾರ್ಥಿಗಳೇ ಧ್ವನಿ ನೀಡಿ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಿದಂತಹ ವಿಶಿಷ್ಟ ಸಾಧನೆ ಕೂಡ ಇವರದ್ದಾಗಿದೆ.
ಅಲ್ಲದೆ ತಮ್ಮ ಮುಖ್ಯ ಶಿಕ್ಷಕರ ಸೇವಾ ಅವಧಿಯಲ್ಲಿ ವಿನೂತನ , ವಿಶಿಷ್ಟ ಶೈಕ್ಷಣಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿದ ಕೀರ್ತಿ ಕೂಡ ಇವರದ್ದಾಗಿದೆ.
ಪ್ರಸ್ತುತ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿ ಆಗಿರುವ ಇವರು ಕರ್ನಾಟಕ ರಾಜ್ಯ ದಲ್ಲೇ ವಿಶಿಷ್ಟ ಪ್ರಯತ್ನವಾದ ಇಡೀ ತಾಲೂಕಿನಾದ್ಯಂತ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಲು ರೂವಾರಿಗಳಾಗಿದ್ದು , ಇಡೀ ರಾಜ್ಯಕ್ಕೆ ಮಾದರಿಯಾದ ಕೆಲಸವನ್ನು ನಿರ್ವಹಿಸಿರುವುದು ಎಲ್ಲರ ಗಮನ ಸೆಳೆದಿದೆ.
ಅಲ್ಲದೆ ಇವರು ಹವ್ಯಾಸಿ ಗಾಯಕ ರಾಗಿದ್ದು, ವಿಶೇಷ ಶೈಕ್ಷಣಿಕ ಚಟುವಟಿಕೆಗಳ ಸಂದರ್ಭಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ಹಾಡುಗಳನ್ನ ರಚಿಸಿ , ಹಾಡಿ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ಸಂದೇಶವನ್ನ ನೀಡುವ ಕಾರ್ಯವನ್ನು ಕೂಡ ಮಾಡುತ್ತಿದ್ದಾರೆ.
ಅಲ್ಲದೆ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಜಾಗೃತಿ ಮೂಡಿಸುವಂತಹ ಬಹಳ ಅರ್ಥಗರ್ಭಿತವಾದ ಹಾಡುಗಳನ್ನು ರಚಿಸಿ , ಹಾಡಿ ನಾಡಿನ ಜನರಿಗೆ ಅರಿವು ಮೂಡಿಸುವಂತಹ ಕಾರ್ಯವನ್ನು ಕೂಡ ಮಾಡಿರುವುದನ್ನು ಇಲ್ಲಿ ನೆನೆಸಿಕೊಳ್ಳಬಹುದು.
ಶಿಕ್ಷಕ ಉದಯ್ ಕೋಟ ಇವರಿಗೆ ಡಾ. ಎಸ್ ರಾಧಾಕೃಷ್ಣನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿ














Leave a Reply