
ಕೋಟ :ಕೋಟದ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳ ಆಯೋಜಿಸಿದ ಎರಡು ದಿವಸಗಳ ‘ಕಲೋತ್ಸವ 2024-ಉಡುಪ ಸಂಸ್ಮರಣ ಮತ್ತು ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಫೆಬ್ರುವರಿ 11ರ ಭಾನುವಾರ ಹಾಗು 12ರ ಸೋಮವಾರ ಸಂಜೆ ಪಟೇಲರ ಮನೆ ಆವರಣದಲ್ಲಿ ನಡೆಯಲಿದೆ.
ಮೊದಲ ದಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಡಾ| ಕೆ ವಿದ್ಯಾ ಕುಮಾರಿ, ಮಯ್ಯಾಸ್ ಬೆಂಗಳೂರಿನ ಪಿ. ಸದಾನಂದ ಮಯ್ಯ, ಗೀತಾನಂದ ಪೌಂಢೇಶನ್ ಪ್ರವರ್ತಕ ಆನಂದ ಸಿ ಕುಂದರ್, ಯಕ್ಷಗಾನ ಪೋಷಕರೂ ಉದ್ಯಮಿ ಕೃಷ್ಣಮೂರ್ತಿ ಮಂಜರು, ಕರ್ಣಾಟಕ ಬ್ಯಾಂಕ್ ಮುಖ್ಯ ಮಹಾ ಪ್ರಬಂಧಕರಾದ ಗೋಕುಲ ದಾಸ ಪೈ ಮೊದಲಾದವರ ಸಮಕ್ಷಮದಲ್ಲಿ ಅಮೃತೇಶ್ವರಿ ಮೇಳದ ಯಕ್ಷಗಾನ ಕಲಾವಿದ ಕೋಟ ಸುರೇಶ್ ಅವರಿಗೆ ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮುಂಬಯಿಯ ಓ.ಎನ್.ಜಿ.ಸಿ.ಯ ನಿವೃತ್ತ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಬನ್ನಾಡಿ ನಾರಾಯಣ ಆಚಾರ್ ಉಡುಪ ಸಂಸ್ಮರಣೆ ಮಾಡಲಿದ್ದಾರೆ. ವಿದ್ವಾನ್ ಅಶೋಕ್ ಅಚಾರ್ಯ ಅವರಿಂದ ಲಘು ಸಂಗೀತ-ನಿನಾದ ಮತ್ತು ಮಂಗಳೂರಿನ ನಂದ ಗೋಕುಲ ಅರೆಹೊಳೆ ಪ್ರತಿಷ್ಠಾನದವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.
ಎರಡನೆಯ ದಿನ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಮಹಾ ಪ್ರಬಂಧಕರಾದ ಮಹೇಶ್ ಜೆ., ಪೆರ್ಡೂರು ಮೇಳದ ಯಜಮಾನ ವೈ. ಕರುಣಾಕರ ಶೆಟ್ಟಿ, ಗೆಳೆಯರ ಬಳಗ ಸಾಲಿಗ್ರಾಮದ ತಾರಾನಾಥ ಹೊಳ್ಳ ಮೊದಲಾದ ಗಣ್ಯರ ಸಮಕ್ಷಮದಲ್ಲಿ ಪೆರ್ಡೂರು ಮೇಳದ ಎಲ್ಲಾ ಹಿಮ್ಮೇಳ, ಮುಮ್ಮೇಳ ಮತ್ತು ನೇಪಥ್ಯ ಕಲಾವಿದರನ್ನು ಗೌರವಿಸಲಾಗುವುದು. ಬಳಿಕ ಪೆರ್ಡೂರು ಮೇಳದ ಕಲಾವಿದರಿಂದ ಬ್ರಹ್ಮಕಪಾಲ ಮತ್ತು ಸುಭದ್ರಾ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಮಕ್ಕಳ ಮೇಳ ಟ್ರಸ್ಟ್ ನ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














Leave a Reply