
ಕೋಟ : ಕೋಟದಲ್ಲಿ ಫೆಬ್ರವರಿ 10 ರಂದು ನಡೆಯಲಿರುವ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಪಂಚಾಯತ್ ರಾಜ್ & ನಗರ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಉತ್ಸವ ಹೊಳಪು-2024 (ಗ್ರಾಮ ಸರ್ಕಾರದ ದಿಬ್ಬಣ) ಕಾರ್ಯಕ್ರಮದ ಪೂರ್ವಭಾವಿಯಾಗಿ ಡಾ|| ಶಿವರಾಮ ಕಾರಂತ ಮಹಾದ್ವಾರವನ್ನು ಫೆ.3 ರಂದು ಮಧ್ಯಾಹ್ನ 03.00 ಘಂಟೆಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ನ ಅಧ್ಯಕ್ಷ ಡಾ|| ಎಮ್.ಎನ್ ರಾಜೇಂದ್ರ ಕುಮಾರ್ ರವರು ಉದ್ಘಾಟಿಸಲಿದ್ದಾರೆ.
ಅವಳಿ ಜಿಲ್ಲೆಗಳ ಒಟ್ಟು 377 ಗ್ರಾಮ ಪಂಚಾಯತ್ಗಳು ಹಾಗೂ 17 ನಗರ ಸ್ಥಳೀಯಾಡಳಿತ ಸಂಸ್ಥೆಗಳ 6,000ಕ್ಕೂ ಮಿಕ್ಕಿ ಜನಪ್ರತಿನಿಧಿಗಳು ಹಾಗೂ ಸಾವಿರಾರು ಅಧಿಕಾರಿ ಸಿಬ್ಬಂದಿಗಳು ಹೊಳಪು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕಾರ್ಯಕ್ರಮದ ಪೂರ್ವಭಾವಿಯಾಗಿ ಡಾ|| ಶಿವರಾಮ ಕಾರಂತ ಮಹಾದ್ವಾರ ಉದ್ಘಾಟನೆಗೊಳ್ಳಲಿದೆ.
ಶನಿವಾರ ಮಧ್ಯಾಹ್ನ 03.00 ಘಂಟೆಗೆ ಕೋಟದ ರಾಷ್ಟ್ರೀಯ ಹೆದ್ದಾರಿ 66ರ ಕೋಟ ವಿವೇಕ ವಿದ್ಯಾಸಂಸ್ಥೆಯಲ್ಲಿ ನಡೆಯುವ ಡಾ|| ಶಿವರಾಮ ಕಾರಂತ ಮಹಾದ್ವಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಪ್ರತಿಷ್ಠಾನದ ಸದಸ್ಯರು, ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.
ಮಹಾದ್ವಾರ ಉದ್ಘಾಟನೆಯ ನಂತರ ಟಿ-ಶರ್ಟ್ ಬಿಡುಗಡೆ, ಹೊಳಪು ಕಾರ್ಯಕ್ರಮ ರೂಪುರೇಷೆಗಳ ಕುರಿತು ಚರ್ಚೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ.














Leave a Reply