Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಧಿಕಾರಿಗಳ ಸೋಗಿನಲ್ಲಿ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬಂದಿರುವ ಅಪರಿಚಿತರ ತಂಡ : ಸಮಯ ಪ್ರಜ್ಞೆ ಮೆರೆದ ಕುಂದಾಪುರದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆ ಸಿಬ್ಬಂಧಿ…!!

ಕುಂದಾಪುರ :  ಅಧಿಕಾರಿಗಳ ಸೋಗಿನಲ್ಲಿ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಬಂದಿರುವ ಅಪರಿಚಿತರ ತಂಡದಿಂದ ಅ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಂಡದ ವರ್ತನೆ ಬಗ್ಗೆ ಸಾಕಷ್ಟು ಸಂಶಯ, ಅನುಮಾನಗಳು ಮೂಡಿದ್ದು, ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣೂರು ಗ್ರಾಮದ ಕವಿತಾರವರ ಮನೆಗೆ ಜು.25ರಂದು ಬೆಳಗ್ಗಿನ ಸಮಯದಲ್ಲಿ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದು ಇದನ್ನು ನಿರ್ಲಕ್ಷಿಸಿ ಸ್ವಲ್ಪ ಸಮಯದ ನಂತರ ಕವಿತಾ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಅವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್‌ ಮತ್ತು ಇನೋವಾ ಕಾರಿನಲ್ಲಿ 6-7 ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್‌ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿದ ಅಪರಿಚಿತರು ಮನೆಗೆ ಅಕ್ರಮ ಪ್ರವೇಶ ಮಾಡಿ, ಮನೆಯ ಬಾಗಿಲು ತೆರೆಯಲು ಯತ್ನಿಸಿ, ಗೇಟಿಗೆ ಹಾನಿ ಮಾಡಿ ವಾಪಸ್‌ ಹೋಗಿರುವುದಾಗಿ ತಿಳಿಸಿದ್ದಾರೆ.

ಒಂದು ಕಾರಿನಲ್ಲಿ ಅಧಿಕಾರಿಗಳ ಸೋಗಿನಲ್ಲಿ ಸಫಾರಿ ಧರಿಸಿದ್ದ ಒಬ್ಬ ಹಾಗೂ ಇತರ ನಾಲ್ವರು, ಮತ್ತೊಂದು ಕಾರಿನಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿದ್ದ ಒಬ್ಬ ಹಾಗೂ ಇತರರು ಸೇರಿ ಒಟ್ಟು 7-8 ಮಂದಿ ಇದ್ದರೆಂದು ಶಂಕಿಸಲಾಗಿದೆ. ಇವರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನಿಂದ ಇಳಿದು ಗೇಟು ತೆರೆಯಲು ಯತ್ನಿಸಿ, ಸಾಧ್ಯವಾಗದಿದ್ದಾಗ ಗೇಟಿಗೆ ಗುದ್ದಿ, ಇನ್ನೊಂದು ಮಗ್ಗುಲಿನಿಂದ ಹೋಗಿ ಕಾಂಪೌಂಡ್‌ನಿಂದ ಬಾವಿಕಟ್ಟೆಗೆ ಇಳಿದು ಅಂಗಳಕ್ಕೆ ಹೋಗಿ ಮುಖ್ಯ ಬಾಗಿಲ ಬಳಿ ಹೋಗಿದ್ದಾರೆ. ಆಗಲೂ ಬಾಗಿಲು ತೆರೆಯದಿದ್ದಾಗ ತಂಡ ಮರಳಿದೆ.

ಸೆಕ್ಯುರಿಟಿ ಸಂಸ್ಥೆಯ ಸಿಬಂದಿ ಉದ್ಯಮಿ ಮನೆಯ ಸಿಸಿಟಿವಿಯ ಲೈವ್‌ ವೀಕ್ಷಣೆ ಮಾಡುತ್ತಿದ್ದಾಗ ಎರಡು ವಾಹನಗಳಲ್ಲಿ ಆಗಂತುಕರು ಆಗಮಿಸಿದ್ದು ಗೊತ್ತಾಗಿದೆ. ಕೂಡಲೇ ಸೆಕ್ಯೊರಿಟಿ ಮನೆಯವರಿಗೆ ಕರೆ ಮಾಡಿ, ಮನೆಯ ಹೊರಗಡೆ ನಡೆಯುತ್ತಿರುವ ಸಂಗತಿಯನ್ನು ತಿಳಿಸಿದ್ದಾರೆ.

ಮನೆಯವರು ಬಾಗಿಲು ತೆರೆಯದ ಕಾರಣ ಮರಳಿದ ಆಗಂತುಕರು ಸಾಸ್ತಾನ ಟೋಲ್‌ ಮಾರ್ಗದಲ್ಲಿ ಸಾಗದೆ, ಬಾರ್ಕೂರು ರಸ್ತೆ ಮೂಲಕ ಟೋಲ್‌ ತಪ್ಪಿಸಿ ಹೋಗಿದ್ದಾರೆ ಎನ್ನಲಾಗಿದೆ. ಬಂದವರು ಯಾರು ಎನ್ನುವ ನಿಟ್ಟಿನಲ್ಲಿ ಪೊಲೀಸ್‌ ತನಿಖೆ ನಡೆಯುತ್ತಿದೆ. ಎರಡು ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಿ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಬಂದ ಅಪರಿಚಿತರಿಗೆ ದರೋಡೆ ಮಾಡುವ ಉದ್ದೇಶ ಇತ್ತೇ ಎನ್ನುವುದು ಸದ್ಯದ ಅನುಮಾನ.

Leave a Reply

Your email address will not be published. Required fields are marked *