Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಮಕ್ಕಳ ಮೇಳ ಸುವರ್ಣ ಸಂಭ್ರಮ-2
ಯಕ್ಷ ಲೋಕಕ್ಕೆ ಮಕ್ಕಳ ಮೇಳದ ಕೊಡುಗೆ ಅವಿಸ್ಮರಣೀಯ-ಪ್ರದೀಪ ಕುಮಾರ ಕಲ್ಕೂರ

ಕೋಟ:  “ಯಕ್ಷಗಾನದ ಮೂಲಕ ಮಕ್ಕಳಿಗೆ ಕರಾವಳಿಯ ಸಾಂಸ್ಕೃತಿಕ ಲೋಕದ ಪರಿಚಯದ ಜತೆಗೆ ಪೌರಾಣಿಕ ಸಂಗತಿಗಳನ್ನು ಮನಮುಟ್ಟುವ ಹಾಗೆ ತಲುಪಿಸುವ ಪ್ರಯತ್ನ ಸಾಲಿಗ್ರಾಮ ಮಕ್ಕಳ ಮೇಳದಿಂದ ಅವಿರತವಾಗಿ ನಡೆದುಕೊಂಡು ಬಂದಿದೆ. ಯಕ್ಷಲೋಕಕ್ಕೆ ಸಾಲಿಗ್ರಾಮ ಮಕ್ಕಳ ಮೇಳದ ಕೊಡುಗೆ ಅವಿಸ್ಮರಣೀಯವಾದುದು. ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಉಡುಪ ಮತ್ತು ಹಂದೆಯವರದು ಸಾರ್ಥಕ ಪ್ರಯತ್ನ” ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಐವತ್ತರ ವಸಂತದಲ್ಲಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಮತ್ತು ಕರ್ಣಾಟಕ ಯಕ್ಷಧಾಮದ ಆಶ್ರಯದಲ್ಲಿ ಅ. 20 ರವಿವಾರದಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ಆಯೋಜಿಸಿದ ಸುವರ್ಣ ಸಂಭ್ರಮ-2 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅಭ್ಯಾಗತರಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಸಾಲಿಗ್ರಾಮ ಮಕ್ಕಳ ಮೇಳವು ಕರಾವಳಿಯ ಹೆಮ್ಮೆಯ ಅಭಿಮಾನದ ಸಂಸ್ಥೆ. ನೂರು ವರ್ಷಗಳ ಕಾಲ ಬಾಳಿ ಬದುಕಿ ಬೆಳಗಲಿ ಎಂದು ಹಾರೈಸಿದರು. ಯಕ್ಷಾರಾಧನ ಕಲಾ ಕೇಂದ್ರದ ಗುರು ವಿದುಷಿ ಸುಮಂಗಲಾ ರತ್ನಾಕರ್ ಅವರು ಸಾಲಿಗ್ರಾಮ ಮಕ್ಕಳಮೇಳವು ದೂರದೃಷ್ಟಿತ್ವ, ಶಿಸ್ತು, ಚೌಕಟ್ಟು, ಪ್ರಸ್ತುತಿ, ಗುಣಮಟ್ಟದಿಂದ ಅನನ್ಯವಾಗಿ ಗುರುತಿಸಿಕೊಂಡಿದೆ ಎಂದು ಆಶಯನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಕೃಷಿಮಾಡಿದ ಮಂಗಳೂರಿನ ಕೋಡಿಕಲ್ ಸರಯೂ ಬಾಲ ಯಕ್ಷ ವೃಂದ ಮಕ್ಕಳ ಮೇಳದ ನಿರ್ದೇಶಕ ರವಿ ಅಲೆವೂರಾಯ ವರ್ಕಾಡಿ ಅವರಿಗೆ ಸುವರ್ಣ ಯಕ್ಷ ಕಲಾ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಪತ್ತುಮುಡಿಯ ಜನತಾ ಡಿಲಕ್ಸ್ ಮಾಲಕರಾದ ಸೂರ್ಯನಾರಾಯಣ ರಾವ್, ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಪಿ.ಎಲ್. ಉಪಾಧ್ಯಾಯ, ಲೆಕ್ಕ ಪರಿಶೋಧಕರಾದ ಶಿವಾನಂದ ಪೈ ಮಂಗಳೂರು, ಮನಸ್ವಿನಿ ಆಸ್ಪತ್ರೆಯ ವೈದ್ಯರಾದ ರವೀಶ್ ತುಂಗ, ಡಾ ದಿನೇಶ್ಚಂದ್ರ ಹಂದೆ, ಮಕ್ಕಳ ಮೇಳದ ಕಾರ್ಯಾಧ್ಯಕ್ಷ ಕೆ. ಮಹೇಶ್ ಉಡುಪ, ಉಪಾಧ್ಯಕ್ಷ ಜನಾರ್ದನ ಹಂದೆ, ಪ್ರಾಕ್ತನ ಕಲಾವಿದ ಪ್ರಸಾದ ಹಂದೆ ಉಪಸ್ಥಿತರಿದ್ದರು.
ಮಕ್ಕಳ ಮೇಳದ ನಿರ್ದೇಶಕ ಸುಜಯೀಂದ್ರ ಹಂದೆ ಪ್ರಸ್ಥಾವಿಸಿ ಸ್ವಾಗತಿಸಿದರು. ಅಭಿಲಾಷ ಸೋಮಯಾಜಿ ಅಭಿನಂದಿಸಿದರು. ಶ್ರೀರಾಮ್ ಮದ್ಯಸ್ಥ ವಂದಿಸಿದರು. ಶಿಕ್ಷಕಿ ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳ ಮೇಳದ ಕಲಾವಿದರಿಂದ ವೀರವೃಷಸೇನ ಯಕ್ಷಗಾನ ಪ್ರದರ್ಶನ ನಡೆಯಿತು.

ಐವತ್ತರ ವಸಂತದಲ್ಲಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಮತ್ತು ಕರ್ಣಾಟಕ ಯಕ್ಷಧಾಮದ ಆಶ್ರಯದಲ್ಲಿ ಅ. 20 ರವಿವಾರದಂದು ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ಆಯೋಜಿಸಿದ ಸುವರ್ಣ ಸಂಭ್ರಮ-2 ಕಾರ್ಯಕ್ರಮವನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಉದ್ಘಾಟಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಪತ್ತುಮುಡಿಯ ಜನತಾ ಡಿಲಕ್ಸ್ ಮಾಲಕರಾದ ಸೂರ್ಯನಾರಾಯಣ ರಾವ್, ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಪಿ.ಎಲ್. ಉಪಾಧ್ಯಾಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *