Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಗಜೀವನರಾಂ ರವರ ಜ್ಞಾನ ಮತ್ತು ಕಾರ್ಯ ಆದರ್ಶವಾಗಿಟ್ಟುಕೊಳ್ಳಿ : ಪಿ ಎಚ್ ಪೂಜಾರ

ವರದಿ : ಅಶ್ವಿನಿ ಅಂಗಡಿ

ಬಾಗಲಕೋಟೆ : ಲಿಂಗ, ಜಾತಿ, ಧರ್ಮ ಎನ್ನದೇ ಮುನ್ನಡೆದು, ಸ್ವಾತಂತ್ರ‍್ಯ ಚಳುವಳಿಯಲ್ಲಿಯೂ ಸಕ್ರೀಯವಾಗಿ ಭಾಗವಹಿಸಿದ್ದ ಡಾ.ಬಾಬು ಜಗಜೀವನರಾಂ ರವರ ಜ್ಞಾನ ಮತ್ತು ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿ ಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ ಎಚ್ ಪೂಜಾರ ಹೇಳಿದರು.

ನವನಗರದ  ಡಾ.ಬಾಬು ಜಗಜೀವನರಾಂ ಭವನದಲ್ಲಿ,  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ವತಂತ್ರ ಭಾರತದ ದೀನ ದಲಿತ ದಮನೀತರ ಧ್ವನಿಯಾಗಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದ ಆಧುನಿಕ ಭಾರತದ ನಿರ್ಮಾತೃ  ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂದೇ ಖ್ಯಾತರಾದವರು ಡಾ.ಬಾಬು ಜಗಜೀವನರಾಂ ಅವರು. ಕೃಷಿ, ಕಾನೂನು,  ಸಂಪರ್ಕ ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳ ಪ್ರಗತಿಗೆ ಅವರ ಕೊಡುಗೆ ಅಪಾರವಾಗಿದೆ  ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಜಿಲ್ಲಾಧಿಕಾರಿ ಜಾನಕಿ ಕೆ ಎಂ, ಮಾತನಾಡಿ ಡಾ.ಬಾಬು ಜಗಜೀವನರಾಂ ಅವರು ದೇಶ ಕಂಡ ಶ್ರೇಷ್ಠ ಮುತ್ಸದಿ, ತಮ್ಮ ಅಧಿಕಾರಾವಧಿಯಲ್ಲಿ ಪೋಸ್ಟ್ ಆಫೀಸಗಳ ಸ್ಥಾಪನೆ ಮೂಲಕ ಸಂಪರ್ಕ ಕ್ರಾಂತಿ ಸೃಷ್ಟಿಸಿದವರು. ದೇಶದ ಹಸಿರು ಕ್ರಾಂತಿಯಲ್ಲಿ ಇವರ ಪಾತ್ರ ಮಹತ್ವದ್ದು , ಅಂತಹ ಮಹನೀಯರ ಬದುಕಿನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಾವು ಅವರಿಗೆ ನೀಡುವ ಅತಿದೊಡ್ಡ ಕೊಡುಗೆ ಎಂದರು.

ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ಪ್ರಾಧ್ಯಾಪಕ ಡಾ.ಶಿವಾನಂದ ಕೆಳಗಿನಮನಿ, ಮಾತನಾಡಿ ಕೆಳ ಸಮುದಾಯದ ಪರವಾಗಿ ಧ್ವನಿ ಎತ್ತಿದ ಎರಡು ಗಟ್ಟಿಧ್ವನಿಗಳೆಂದರೆ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಡಾ.ಬಾಬು  ಜಗಜೀವನರಾಂ ರವರಾಗಿದ್ದಾರೆ. ಅವರನ್ನು ರಾಜಕೀಯ ಪಕ್ಷಗಳು ಪ್ರತ್ಯೇಕ ಸಮುದಾಯಗಳಿಗೆ ಸೀಮಿತಗೊಳಿಸುತ್ತಿವೆ. ಆದರೆ, ಅವರ ಚಿಂತನೆ, ಉದ್ದೇಶಗಳು ಒಂದೇ ಆಗಿದ್ದವು. ಸ್ವತಃ ಜಗಜೀವನರಾಂ ತಾನು ಅಂಬೇಡ್ಕರ್ ಅನುಯಾಯಿ, ಅವರು ಅರ್ಧಕ್ಕೆ ಬಿಟ್ಟು ಹೋದ ಕೆಲಸಗಳನ್ನು ನಾನು ಮುಂದುವರೆಸುತ್ತಿದ್ದೇನೆ ಎಂದಿದ್ದರು ಎಂದು ಹೇಳಿದರು.

ಆಲ್ ಇಂಡಿಯಾ ಬಿ ಎಸ್ ಪಿ ಉಪಾಧ್ಯಕ್ಷ ವಾಯ್ ಸಿ ಕಾಂಬಳೆ , ಇಂದಿನ ಯುವ ಪೀಳಿಗೆಗೆ ಸಮುದಾಯದ ನಾಯಕರ ಬಗ್ಗೆ ಕೇಳುವಷ್ಟು ತಾಳ್ಮೆ ಇಲ್ಲದ್ದನ್ನು ಕಂಡು ಬೇಸರವೆನಿಸುತ್ತದೆ. ಕಾರ್ಮಿಕರು, ಕೃಷಿಕರು ಸೇರಿದಂತೆ ಶ್ರಮಿಕ ವರ್ಗಕ್ಕೆ ಮೊದಲು ಆದ್ಯತೆ ನೀಡಿದ ಕೀರ್ತಿ ಜಗಜೀವನರಾಂ ಅವರಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ್ ಮಾತನಾಡಿ,  ಜಗಜೀವನರಾಂ, ಅಂಬೇಡ್ಕರ್, ಬಸವಣ್ಣ, ಗಾಂಧಿಯoತಹ ಮಹನೀಯರನ್ನು ಓದಿ ಅರ್ಥೈಸಿಕೊಂಡು, ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವ ಬಡಿಗೇರ, ಸಮುದಾಯದ ಹಿರಿಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *