Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿ : ಮಧು ಬಂಗಾರಪ್ಪ

ವರದಿ : ಅಶ್ವಿನಿ ಅಂಗಡಿ

ಬಾಗಲಕೋಟೆ (ಹೊಸಕಿರಣ ) : ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರ ಸಹಯೋಗದೊಂದಿಗೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಕಾರ್ಯ ಮಾಡಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಜರುಗಿದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಿಕ್ಷಕರು ತಮ್ಮ ಸರಕಾರಿ ಶಾಲಾ ವ್ಯಾಪ್ತಿಯಲ್ಲಿರುವ ಮನೆ ಮನೆಗೆ ಭೇಟಿ ನೀಡಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸರಕಾರÀ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಪಾಲಕರು ಮತ್ತು ಮಕ್ಕಳಲ್ಲಿ ಮನವರಿಕೆ ಮಾಡಿದಲ್ಲಿ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಲು ಸಾಧ್ಯವಾಗುತ್ತದೆ. ಜುಲೈ ಕೊನೆಯವರೆಗೂ ಶಾಲಾ ಪ್ರವೇಶಕ್ಕೆ ಅವಕಾಶ ಇರುವದರಿಂದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವದರೊಂದಿಗೆ ಮುಂದಿನ ದಿನಗಳಲ್ಲಿ ಅವರ ಹಾಜರಾತಿ ಕೂಡ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು. ಯಾವುದೇ ಮಗು ಶಾಲೆಯಿಂದ ಹೊರಗೆ ಉಳಿಯುವಂತಾಗಬಾರದು ಎಂದರು.

ವಿದ್ಯಾರ್ಥಿಗಳ ಕಲಿಕೆಗೆ ಮಹತ್ವ ನೀಡಿ, ಈ ವರ್ಷದ ಶೈಕ್ಷಣಿಕ ಸಾಲಿನಿಂದ ನೈತಿಕ ವಿಜ್ಞಾನ ವಿಷಯವನ್ನು ಅಳವಡಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ನೈತಿಕತೆ ಮೂಡಿಸುವದೇ ಅದರ ಉದ್ದೇಶವಾಗಿರುವದರಿಂದ ನಕಲು ಮಾಡಲು ಅವಕಾಶ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೂರು ಬಾರಿ ಫೇಲ್ ಆದರೆ ಆ ವಿದ್ಯಾರ್ಥಿಗೆ ಪುನಃ ತರಗತಿಗೆ ತೆಗೆದುಕೊಂಡು ಸಮವಸ್ತ್ರ, ಪಠ್ಯ ಪುಸ್ತಕ ನೀಡಿ ಮತ್ತೆ ಪರೀಕ್ಷೆಗೆ ತಯಾರಿಗೊಳ್ಳುವಂತೆ ಪ್ರೇರೆಪಿಸಬೇಕು. ಶಿಕ್ಷಕರು ಮತ್ತು ಅಧಿಕಾರಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕು.

ಮಕ್ಕಳ ಪಾಲಕರಲ್ಲಿ ಭರವಸೆ ತುಂಬುವ ಕಾರ್ಯ ಮಾಡಿ, ವಿಶೇಷ ತರಗತಿಗಳ ಮೂಲಕ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳತ್ತ ಹೆಚ್ಚಿನ ಗಮನ ಹರಿಸಬೇಕು. ಕಳೆದ ಬಾರಿ ಜಿಲ್ಲೆಯ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಳು, ಅಲ್ಲದೇ ಈ ಬಾರಿಯ ಫಲಿತಾಂಶವು ಉತ್ತಮವಾಗಿದ್ದು, ಜಿಲ್ಲೆಯ ಶೈಕ್ಷಣಿಕ ಪ್ರಗತಿ ಚೆನ್ನಾಗಿದೆ. ಸರ್ಕಾರ ಅಥವಾ ಇಲಾಖೆಯಿಂದ ಯಾವುದೇ ರೀತಿಯ ಸಹಕಾರ ಬೇಕಾಗಿದ್ದಲ್ಲಿ ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು.

ಒಟ್ಟಾರೆಯಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ’ ಎಂದರು ಸಭೆಯಲ್ಲಿ ಜಿಲ್ಲೆಗೆ ಅಗತ್ಯವಿರುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು, ಎಸ್ ಎಸ್ ಎಲ್ ಸಿ ಎರಡು ಮತ್ತು ಮೂರನೇ ಪರೀಕ್ಷೆಗಳ ಫಲಿತಾಂಶ, ಜಿಲ್ಲೆಯಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅನುಪಾತ, ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳು, ಮಕ್ಕಳ ಸಂಖ್ಯೆ ಕಡಿಮೆ ಇರುವ ಸಣ್ಣ ಶಾಲೆಗಳ ವಿಲೀನಿಕರಣ, ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳ ಆರಂಭ, ಕಳಪೆ ಫಲಿತಾಂಶ ದಾಖಲಿಸಿದ ಶಾಲೆಗಳು, ಸಿಎಸ್‍ಆರ್ ಅನುದಾನ, ಆರ್‍ಟಿಇ ಅಂಕಿಅಂಶ ಮತ್ತು ಶಾಲಾ ಕಟ್ಟಡ ನಿರ್ವಹಣೆ ಸೇರಿ ಇತರೇ ಪ್ರಮುಖ ವಿಷಯಗಳ ಕುರಿತು ಜಿಲ್ಲಾಧಿಕಾರಿ, ಜಿಲ್ಲಾಪಂಚಾಯತ್ ಸಿ ಇ ಓ ಹಾಗೂ ಡಿಡಿಪಿಐ ಮತ್ತು ಬಿ ಇ ಓ ಅವರೊಂದಿಗೆ ಚರ್ಚಿಸಿದರು. ಸಭೆಯಲ್ಲಿ ಬಾಗಲಕೋಟೆ ರಾಜ್ಯಸಭಾ ಸದಸ್ಯ, ನಾರಾಯಣಸಾ ಭಾಂಡಗೆ, ಎಮ್ ಎಲ್ ಸಿ ಹಣಮಂತ ನಿರಾಣಿ, ಬಾದಾಮಿ ಮತಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾಧಿಕಾರಿ ಜಾನಕಿ ಕೆ ಎಂ , ಜಿಲ್ಲಾ ಪಂಚಾಯತ ಸಿಇಒ ಶಶಿಧರ ಕುರೇರ, ಡಿ ಡಿ ಪಿ ಐ ಹೆಚ್ ಜಿ ಮಿರ್ಜಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *