
ಜಿಲ್ಲೆಯ ಬಾಲ ತಾಯಂದಿರ ಮಾಹಿತಿ ಸಲ್ಲಿಕೆಗೆ ಗಡುವು : ನಾಗಣ್ಣ ವರದಿ : ಅಶ್ವಿನಿ ಅಂಗಡಿ
ಬಾಗಲಕೋಟೆ: ಜುಲೈ 24 (ಹೊಸಕಿರಣ. Com) : ಜಿಲ್ಲೆಯ ಕಳೆದ ಮೂರು ವರ್ಷಗಳಲ್ಲಿ ಬಾಲ ತಾಯಂದಿರ ಸಂಬಂಧಿಸಿದ ಪ್ರಕರಣಗಳ ಕುರಿತ ವಿವರವಾದ ಮಾಹಿತಿಯನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ ಅಧಿಕಾರಿಗಳಿಗೆ ಗಡುವು ನೀಡಿದರು.
ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿಂದು ಆರ್.ಟಿ.ಇ, ಪೋಕ್ಸೋ-2012, ಬಾಲ ನ್ಯಾಯ ಕಾಯ್ದೆ-2015ರ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದ ಅವರು ಜಿಲ್ಲಾಸ್ಪತ್ರೆಗಳಲ್ಲಿ ಮಕ್ಕಳಿಗಾಗಿ ಸ್ಥಾಪಿಸಿರುವ ವಿಶೇಷ ಘಟಕಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಿದರು. ಜೊತೆಗೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯೊಳಗಿನ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ತಿಳಿಸಿದರು.
ಕೆಲವೊಂದು ಸಿಬ್ಬಂದಿಗಳಿಗೆ ಪೋಕ್ಸೋ ಕಾಯ್ದೆ ಸೇರಿದಂತೆ ಮಕ್ಕಳ ರಕ್ಷಣಾ ಕಾಯ್ದೆಯ (2016) ಕುರಿತು ತಿಳುವಳಿಕೆ ಕೊರತೆಯಿರುವ ಹಿನ್ನೆಲೆಯಲ್ಲಿ, ಎಲ್ಲ ಪೆÇಲೀಸ್ ಸಿಬ್ಬಂದಿಗಳಿಗೆ ಪೂರ್ಣ ಮಾಹಿತಿ ಮತ್ತು ತರಬೇತಿ ನೀಡುವಂತೆ ಆದೇಶ ನೀಡಲಾಗಿದೆ. ಕಾಣೆಯಾದ ಮಕ್ಕಳ ಪತ್ತೆ ಹಾಗೂ ಬಾಕಿ ಉಳಿದ ಪ್ರಕರಣಗಳ ಸಮರ್ಪಕ ತನಿಖೆ ನಡೆಸಿ ಪತ್ತೆ ಹಚ್ಚುವಂತೆ ಸೂಚಿಸಲಾಗಿದೆ. ಶಾಲಾ ರಜೆ ದಿನಗಳಲ್ಲಿ ಶಾಲಾ ಆವರಣದಲ್ಲಿ ಅನಧಿಕೃತ ಪ್ರವೇಶವನ್ನು ನಿಷೇಧಿಸಿ, ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಮಟ್ಟದಲ್ಲಿ ಬಾಲ್ಯ ವಿವಾಹ ನಿಷೇಧ ಸಮಿತಿಯನ್ನು ರಚಿಸುವುದು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯ ವಿವಾಹ ಕುರಿತು ಮಾಹಿತಿ ಹಂಚಿಕೊಳ್ಳಬೇಕು. ಆಶಾ ಕಾರ್ಯಕರ್ತರು ಹಾಗೂ ಪಂಚಾಯಿತಿ ಸಿಬ್ಬಂದಿಗಳ ಮೂಲಕ ಬಾಲ್ಯ ವಿವಾಹದ ಮಾಹಿತಿ ಸಂಗ್ರಹಿಸಿ ತಡೆಗಟ್ಟುವಂತೆ ಕ್ರಮವಹಿಸಲು ಸೂಚಿಸಲಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಮಕ್ಕಳ ಗ್ರಾಮಸಭೆ ನಡೆಸಿ, ಮಕ್ಕಳ ಕಾವಲು ಸಮಿತಿಯನ್ನು ರಚಿಸಬೇಕು. ಇದರಲ್ಲಿ ಗ್ರಾಮದ ಪೊಲೀಸ್ ಬೀಟ್ ಅಧಿಕಾರಿ ಪಾಲ್ಗೊಳ್ಳಬೇಕು ಎಂದರು.
9ನೇ ತರಗತಿಯ ಹೊರಗಿನ ಹಾಗೂ ದೀರ್ಘಕಾಲದ ಗೈರುಹಾಜರಾತಿ ವಿದ್ಯಾರ್ಥಿನಿಯರ ಮಾಹಿತಿ ಸಂಗ್ರಹಿಸಿ, ಬಾಲ್ಯ ವಿವಾಹಕ್ಕೆ ಒಳಗಾಗುತ್ತಿರುವುದಾಗಿ ತೋರಿದರೆ ತಕ್ಷಣಲೇ ರಕ್ಷಣೆ ನೀಡಬೇಕೆಂದು ಸೂಚನೆ ನೀಡಲಾಗಿದೆ. ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನೋಟಿಸ್ ನೀಡಲಾಗುವುದು. ಅಲ್ಲದೇ, ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಮಕ್ಕಳ ಸಹಾಯವಾಣಿ ಮಾಹಿತಿ ಪ್ರದರ್ಶಿಸಲು ಸೂಚನೆ ನೀಡಿದರು.
ಇತ್ತೀಚೆಗೆ ಲೋಕಾಪುರ ಖಾಸಗಿ ಶಾಲೆಯಲ್ಲಿ ನಡೆದ ಬಸ್ಪಲ್ಟಿ ಪ್ರಕರಣ ಸಂಬಂಧವಾಗಿ ಶಾಲೆಗೆ ನೋಟಿಸ್ ನೀಡಿ ಅದರ ವರದಿಯನ್ನು ಆಯೋಗಕ್ಕೆ ಕಳುಹಿಸಬೇಕೆಂದು ಸೂಚನೆ ನೀಡಲಾಗಿದೆ. ಕೆಲವು ಶಾಲೆ ಹಾಗೂ ಹಾಸ್ಟೆಲ್‍ಗಳಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿರುವ ಬಗ್ಗೆ ತಕ್ಷಣ ಕ್ರಮಕೈಗೊಳ್ಳಿ. ಶೂನ್ಯ ಅಥವಾ ಐದಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇರುವ ಹಾಗೂ ಮುಚ್ಚಿದ ಶಾಲೆಗಳ ಪಟ್ಟಿ ಆಯೋಗಕ್ಕೆ ಸಲ್ಲಿಸಲು ತಿಳಿಸಿದರು.
ಅತಿಥಿ ಶಿಕ್ಷಕರ ನೇಮಕಾತಿಗೆ ಮೊದಲು ಅವರ ಪರಿಶೀಲನೆ ನಡೆಸಬೇಕು. ಬದಾಮಿ ತಾಲೂಕಿನ ಕೆಲವು ಶಾಲೆಗಳಲ್ಲಿ ಪಠ್ಯಪುಸ್ತಕ ಕೊರತೆಯಿದ್ದು, ತಕ್ಷಣ ಪೂರೈಕೆ ಮಾಡಬೇಕೆಂದು ಸೂಚಿಸಲಾಗಿದೆ. ದೀರ್ಘಕಾಲದ ಗೈರು ಹಾಜರಾತಿ ಇರುವ ವಿದ್ಯಾರ್ಥಿಗಳ ಹಾಜರಾತಿ ವಿವರಗಳನ್ನು ಹಾಜರಾತಿ ಪ್ರಾಧಿಕಾರಕ್ಕೆ ಕಳುಹಿಸಬೇಕು. ಎಲ್ಲಾ ವಿದ್ಯಾರ್ಥಿಗಳ ಆಧಾರ್ ಸೀಡಿಂಗ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಪಿಯುಸಿ ಕಾಲೇಜುಗಳಲ್ಲಿ ಮಕ್ಕಳ ರಕ್ಷಣಾ ಕಾಯ್ದೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಶಾಲಾ ಆವರಣದ ವಿದ್ಯುತ್ ವೈರ್ ಮತ್ತು ಟ್ರಾನ್ಸ್ಫಾರ್ಮರ್‍ಗಳನ್ನು ತೆರವುಗೊಳಿಸಿ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಪರಿಸರ ಸುಧಾರಣಾ ಕಾರ್ಯ ಕೈಗೊಳ್ಳಬೇಕು. ಶಾಲಾ ಆವರಣವನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು.
ಶಕ್ತಿ ಯೋಜನೆಯು ಆರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕೊರತೆಯಾಗಿ, ವಿದ್ಯಾರ್ಥಿಗಳು ಬಸ್ಸು ಬಾಗಿಲುಗಳಲ್ಲಿ ನಿಂತು ಪ್ರಯಾಣಿಸುವ ದೃಶ್ಯಗಳು ಹೆಚ್ಚಾಗಿವೆ. ಇದನ್ನು ಗಮನಿಸಿ ಬಸ್ ನಿರ್ವಾಹಕರಿಗೆ ಮಕ್ಕಳ ರಕ್ಷಣಾ ಕಾಯ್ದೆಯ ಕುರಿತು ತರಬೇತಿ ನೀಡಿ, ಬಸ್ಸಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಸೂಕ್ತ ಮಾಹಿತಿ ನೀಡುವ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಬಸ್ ನಿಲ್ದಾಣಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವಂತೆಯೂ ಸೂಚನೆ ನೀಡಿದರು.
ಜಾಲಿಹಾಳ್ ಬಿಸಿಎಂ ಹಾಸ್ಟೆಲ್‍ನಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದು, ತಕ್ಷಣ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸೂಚನೆ ಇದೆ. ಚಿಕ್ಕ ಮುಚ್ಚಳ ಗುಡ್ಡ ವಸತಿ ನಿಲಯದ ಸಿಬ್ಬಂದಿ ಸಮಯ ಪಾಲನೆ ಮಾಡದಿರುವುದು, ಶೌಚಾಲಯದ ಸ್ವಚ್ಛತೆ ಕೊರತೆಯಿರುವುದು ಹಾಗೂ ಆಹಾರದ ಗುಣಮಟ್ಟ ದುರ್ಬಲವಾಗಿದೆ. ಒಂದು ಕೋಣೆಯಲ್ಲಿ 10-12 ವಿದ್ಯಾರ್ಥಿಗಳನ್ನು ಇರಿಸಲಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಲು ತಿಳಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಅವರು ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಬೇಜವಾಬ್ದಾರಿ ಸಲ್ಲದು. ಮಕ್ಕಳ ರಕ್ಷಣೆ ಇರುವ ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕಿದೆ. ಇಂದಿನ ಸೈಬರ್ ಕ್ರೈಮ್ ಮತ್ತು ಮಾದಕ ವ್ಯಸನದಿಂದ ಹಾಳಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಗಮನ ಹರಿಸಲು ಸೂಚಿಸಿದರು.
ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ರಾಮತ್ನಾಳ, ಶಶಿಧರ ಕೋಸುಂಬೆ, ತಿಪ್ಪೆಸ್ವಾಮಿ, ಮಂಜುಳಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿದ್ದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಡಾ.ವೀಣಾ ಎಂ ಸೇರಿದಂತೆ ಇತರರು ಉಪಸ್ಥಿತರಿದ್ದರು.
Leave a Reply