Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗಣೇಶ ಚತುರ್ಥಿ (ವಿಶೇಷ ಲೇಖನ)

ಬರಹ: ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ

ಹಿಂದೂ ದೇವರುಗಳಲ್ಲಿ ಆನೆಯ ತಲೆಯನ್ನು ಹೊಂದಿರುವ ಮತ್ತು ಶಿವ-ಪಾರ್ವತಿಯ ಪುತ್ರನಾದ ಗಣೇಶನ ಜನ್ಮದಿನ ಅಥವಾ ಪುನರ್ಜನ್ಮದ ಸ್ಮರಣಾರ್ಥವಾಗಿ ಭಾರತದಲ್ಲಿ ಆಚರಿಸಲಾಗುವ ಹಬ್ಬವೇ ‘ಗಣೇಶ ಚತುರ್ಥಿ’. ಭಾದ್ರಪದ ಮಾಸದ ಶುಕ್ಲ ಪಕ್ಷದ ನಾಲ್ಕನೇ ದಿನದಂದು ಗಣೇಶನ ಜನನವಾಗುತ್ತದೆ. ಈ ದಿನವನ್ನೇ ‘ಗಣೇಶ / ವಿನಾಯಕ ಚತುರ್ಥಿ’ ಎಂಬುದಾಗಿ ಆಚರಿಸಲಾಗುತ್ತದೆ. ಈ ಆಚರಣೆಯು ಭಾದ್ರಪದ ಮಾಸದ ಮೊದಲ ದಿನದಂದು (ಗಣೇಶನ ಜನ್ಮದಿನ) ಪ್ರಾರಂಭವಾಗಿ ಹತ್ತು ದಿನಗಳವರೆಗೆ ನಡೆಯುತ್ತಿತ್ತು. ವರ್ಷಗಳ ನಂತರ ‘ಅನಂತ ಚತುರ್ದಶಿ’ಯಂದು ಗಣಪತಿ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವುದರೊಂದಿಗೆ ಹಬ್ಬಗಳನ್ನು ಕೊನೆಗೊಳಿಸುವುದು ಪದ್ಧತಿಯಾಯಿತು. ಗಣೇಶನನ್ನು ಬುದ್ಧಿವಂತಿಕೆಯ ಮತ್ತು ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅವನ ಸಣ್ಣ ಚತುರ ಕಣ್ಣುಗಳು, ಉದ್ದವಾದ ಕಿವಿಗಳು, ಯಾವುದನ್ನಾದರೂ ಸುವಾಸನೆ ಮಾಡುವ ಉದ್ದವಾದ ಮೂಗು (ಸೊಂಡಿಲು), ಆನೆಯ ತಲೆ ಬುದ್ಧಿವಂತಿಕೆಗೆ ಸಂಬಂಧಿಸಿದ ಎಲ್ಲವನ್ನೂ ಪ್ರತಿನಿಧಿಸುತ್ತದೆ ಎಂದು ಹೇಳಬಹುದು. ಗಣಪತಿ ಪದದ ಉಲ್ಲೇಖವನ್ನು ಋಗ್ವೇದದಲ್ಲಿಯೂ (೨.೨೩.೧) ಕಾಣಬಹದು. ಗಣೇಶನ ಆರಾಧನೆಯನ್ನು ಪ್ರಾಚೀನ ಕಾಲದಿಂದಲೂ ಇಂದಿಗೂ ನಡೆಸುಕೊಂಡು ಬಂದಿರುವುದನ್ನು ನೋಡಬಹುದು. ಇಂದಿಗೂ ಸಹ ಯಾವುದೇ ಧಾರ್ಮಿಕ ಸಮಾರಂಭವು ಗಣೇಶನ ಪಠಣದೊಂದಿಗೆ (ಓಂ ಗಣೇಶಾಯ ನಮಃ) ಅವನ ಆಶೀರ್ವಾದದೊಂದಿಗೆ ಪ್ರಾರಂಭವಾಗುವುದನ್ನು (ರಾಜರುಗಳ ಆಳ್ವಿಕೆಯ ಕಾಲದಲ್ಲಿ ಹೊರಡಿಸಿರುವಂತಹ ಶಾಸನಗಳಲ್ಲೂ) ಗಮನಿಸಬಹುದು. ಆದ್ದರಿಂದ ಗಣೇಶನನ್ನು ‘ಆದಿಪ್ರಭು’ ಎಂದು ಪರಿಗಣಿಸಲಾಗುತ್ತದೆ.

ಗಣೇಶ ಹಬ್ಬದ ಇತಿಹಾಸ
ಗಣೇಶ ಹಬ್ಬವನ್ನು ಪ್ರಾಚೀನ ರಾಜಮನೆತಗಳ ಆಳ್ವಿಕೆಯ ಕಾಲದಲ್ಲೂ ಆಚರಿಸಲಾಗುತ್ತಿತ್ತು ಎಂಬುದನ್ನು ದಾಖಲೆಗಳನ್ನು ಬಹಿರಂಗಪಡಿಸುತ್ತವೆ. ಈ ಹಬ್ಬವು ಮರಾಠ ಸಾಮ್ರಾಜ್ಯದ ಛತ್ರಪತಿ ಶಿವಾಜಿ ಮಹಾರಾಜನ ಕಾಲದಲ್ಲಿ (ಸಾ.ಶ.ವ 1630-1680) ಪ್ರಾರಂಭವಾಯಿತೆಂದು ಪೂರಕವಾದ ದಾಖಲೆಗಳೊಂದಿಗೆ ಇತಿಹಾಸತಜ್ಞರು ಹೇಳುತ್ತಾರೆ. ಪೇಶ್ವೆಗಳ ಕುಟುಂಬ ದೇವರು ಗಣೇಶ ಆಗಿದ್ದರಿಂದ ಇವರು ತಮ್ಮ ರಾಜಧಾನಿ ಪುಣೆಯಲ್ಲಿ ಗಣೇಶ ಚತುರ್ಥಿಯ ಪೂಜೆ ಮತ್ತು ಆಚರಣೆಯನ್ನು ಪ್ರೋತ್ಸಾಹಿಸಿದರು. ಪೇಶ್ವೆ ಆಳ್ವಿಕೆಯ ಅವಧಿಯಲ್ಲಿ ಕೊನೆಯ ಗಣೇಶ ಉತ್ಸವವನ್ನು 1815ರಲ್ಲಿ ಎರಡನೇ ಬಾಜಿರಾವ್ ಅಧಿಕಾರ ವಹಿಸಿಕೊಂಡಾಗ ಆಚರಿಸಲಾಯಿತು. ಇದರ ಬಗ್ಗೆ ಪೇಶ್ವೆಗಳ ಐತಿಹಾಸಿಕ ದಾಖಲೆಗಳಲ್ಲಿ ಉಲ್ಲೇಖಗಳಿವೆ. ಪೇಶ್ವೆಗಳ ಪತನದೊಂದಿಗೆ (1818), ಈ ಹಬ್ಬವು ರಾಜ್ಯದ ಪ್ರೋತ್ಸಾಹವನ್ನು ಕಳೆದುಕೊಂಡು 1818 ರಿಂದ 1892ರವರೆಗೆ ಮನೆಯ ಆಚರಣೆಯಾಗಿ ಉಳಿಯಿತು. 1893ರಲ್ಲಿ ಈ ಆಚರಣೆಯನ್ನು ಸ್ವಾತಂತ್ರ‍್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರವರು ಪುನರುಜ್ಜೀವನಗೊಳಿಸಿದರು. ಅವರು ಇದನ್ನು ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಸ್ವಾತಂತ್ರ‍್ಯಕ್ಕಾಗಿ ರಾಷ್ಟ್ರೀಯ ಚಳವಳಿಯ ಸಮಯದಲ್ಲಿ ಸ್ವಾತಂತ್ರ‍್ಯದ ಜಾಗೃತಿಗೆ ಸಂದೇಶವನ್ನು ಹರಡಲು ಮತ್ತು ಸಾರ್ವಜನಿಕ ಬೆಂಬಲವನ್ನು ಪಡೆಯಲು ಒಂದು ಸಾಧನವಾಗಿ ಬಳಸಿದರು. ಹಿಂದೂಗಳು ಈ ಹಬ್ಬಕ್ಕಾಗಿ ಒಟ್ಟುಗೂಡಿದರು. ಅಲ್ಲಿಯವರೆಗೆ ಜನರ ಮನೆಗಳು ಮತ್ತು ಮಹಾರಾಜರ ಅರಮನೆಗಳಿಗೆ ಮಾತ್ರ ಸೀಮಿತವಾಗಿದ್ದ ಈ ಹಬ್ಬವನ್ನು ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ವೈಭವ ಮತ್ತು ಭವ್ಯತೆಯಿಂದ ಆಚರಿಸಲಾಯಿತು. 1947ರಲ್ಲಿ ಭಾರತ ಸ್ವಾತಂತ್ರ‍್ಯ ಪಡೆದ ನಂತರ ಗಣೇಶ ಚತುರ್ಥಿಯನ್ನು ರಾಷ್ಟ್ರವ್ಯಾಪಿ ಹಬ್ಬವೆಂದು ಘೋಷಿಸಲಾಯಿತು.

ಗಣೇಶ ಚತುರ್ಥಿಯನ್ನು ಭಾರತ ಮಾತ್ರವಲ್ಲದೇ ಚೀನಾ, ಥೈಲ್ಯಾಂಡ್, ಜಪಾನ್, ಕಾಂಬೋಡಿಯಾ ಮತ್ತು ಅಫ್ಘಾನಿಸ್ತಾನಗಳಲ್ಲಿಯೂ ಆಚರಿಸಲಾಗುತ್ತದೆ. ಚೀನಾದಲ್ಲಿ, ಅವರು ‘ಕಂಗಿ ಟೆನ್’ ಎಂದು ಕರೆಯಲ್ಪಡುವ ದೇವತೆಯನ್ನು ಪೂಜಿಸುತ್ತಾರೆ. ಥೈಲ್ಯಾಂಡ್‌ನಲ್ಲಿ ಪ್ರಪಂಚದ ಅತೀ ಎತ್ತರದ ಗಣೇಶನ ವಿಗ್ರಹವನ್ನು ನೋಡಬಹುದು. ಇಂಡೋನೇಷ್ಯಾದಲ್ಲಿ ಗಣೇಶನನ್ನು ನೋಟಿನಲ್ಲಿ (ಕರೆನ್ಸಿ) ತೋರಿಸಲಾಗಿದೆ.

ಮುಂದುವರೆಯುವುದು

Leave a Reply

Your email address will not be published. Required fields are marked *