
ಬರಹ: ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ
‘ಬ್ರಹ್ಮವೈವರ್ತ ಪುರಾಣ’ದ ಗಣೇಶ ಖಂಡವು ದೇವರಾದ ಗಣೇಶನ ಜನನವನ್ನು ನಿರೂಪಿಸುವ ಕಥೆಗಳ ಹಲವು ರೂಪಾಂತರಗಳನ್ನು ತಿಳಿಸುತ್ತದೆ.
ಒಂದು ಕಥೆಯ ಪ್ರಕಾರ, ಪಾರ್ವತಿ ದೇವಿಯು ಸ್ನಾನ ಮಾಡುವಾಗ ತನ್ನ ಗೌಪ್ಯತೆಗಾಗಿ ದ್ವಾರವನ್ನು ಕಾಯಲು ಶ್ರೀಗಂಧದ ಮರದಿಂದ ಮಾನವ ಆಕೃತಿಯನ್ನು ಸೃಷ್ಟಿಸಿದಳು ಎಂದು ಹೇಳಿದರೆ, ಇನ್ನೊಂದು ಕಥೆಯು ಪಾರ್ವತಿ ಸ್ನಾನ ಮಾಡುವಾಗ ತನ್ನ ದೇಹದ ಮಣ್ಣಿನಿಂದ ಮಾನವ ಆಕೃತಿಯ ಕಾವಲುಗಾರನನ್ನು ಸೃಷ್ಟಿಸಿದಳು ಎಂದು ಹೇಳುತ್ತದೆ. (ಸೃಷ್ಟಿಗೆ ಬಳಸಿದ ವಸ್ತು ಏನೇ ಇರಲಿ, ದೇವಿಯು ಮಾನವ ಆಕೃತಿಯನ್ನು ಸೃಷ್ಟಿಸಿದಳು ಮತ್ತು ಅದರಲ್ಲಿ ಜೀವ ತುಂಬಿದಳು ಎಂಬುದು ಸ್ಪಷ್ಟವಾಗುತ್ತದೆ). ಶಿವನು ಆ ಕ್ಷಣದಲ್ಲಿ ಕೈಲಾಸಕ್ಕೆ ಹಿಂತಿರುಗಿ ಬರುವಾಗ ಕಾವಲುಗಾರನು ಪ್ರವೇಶ ನಿರಾಕರಿಸಿದ್ದರಿಂದ ಕೋಪದ ಮುಷ್ಟಿಯಲ್ಲಿ ಶಿವನು ಕಾವಲುಗಾರನ ತಲೆಯನ್ನು ಕತ್ತರಿಸಿದ. ಆದರೆ ಪಾರ್ವತಿಯ ಮಾನವ ಸೃಷ್ಟಿಯ ಶಿರಚ್ಛೇದನ ಮಾಡುವ ಮೂಲಕ ತಾನು ಎಂತಹ ಪ್ರಮಾದವನ್ನು ಮಾಡಿದ್ದೇನೆಂದು ಅರಿತುಕೊಂಡ ನಂತರ ಶಿವನು, ತನ್ನ ಗಣಗಳಿಗೆ ಅಥವಾ ಸೇವಕರಿಗೆ ಅವರು ಕಂಡುಕೊಳ್ಳಬಹುದಾದ ಮೊದಲ ಜೀವಿಯ ತಲೆಯನ್ನು ತರಲು ಸೂಚಿಸಿದನು. ಅವರು ಮೊದಲು ಕಂಡುಕೊಂಡ ಜೀವಿ ಆನೆಯದು. ಅದರ ತಲೆಯನ್ನು ಕತ್ತರಿಸಿ ಶಿವನ ಬಳಿಗೆ ತಂದರು. ನಂತರ ದೇವರು ಕತ್ತರಿಸಿದ ತಲೆಯನ್ನು ಬದಲಾಯಿಸಿ ಅದರಲ್ಲಿ ಜೀವ ತುಂಬಿದರು. ಈ ಆನೆಯ ತಲೆಯ ದೇವರನ್ನು ಗಣಗಳ ಮುಖ್ಯಸ್ಥ ‘ಗಣಪತಿ’ ಅಥವಾ ‘ಗಣೇಶ’ ಎಂದು ಹೆಸರಿಸಲಾಯಿತು. ಹಾಗಾಗಿ ಗಣೇಶ ಚತುರ್ಥಿ ಎಂದರೆ ಗಣೇಶನ ಪುನರ್ಜನ್ಮದ ಆಚರಣೆ ಎಂದು ಹೇಳಲಾಗುತ್ತದೆ.
ಮತ್ತೊಂದು ಕಥೆಯ ಪ್ರಕಾರ, ಹಿಂದೊಮ್ಮೆ ಶಿವನು ಈ ದೇವರುಗಳು ಮತ್ತು ರಾಕ್ಷಸರ ನಡುವಿನ ಸಮರದ ವಿಚಾರಕ್ಕಾಗಿ ಹೋಗಿದ್ದಾಗ ಅವನ ಪತ್ನಿ ಪಾರ್ವತಿ ದೇವಿಯು ದೀರ್ಘಕಾಲ ಒಂಟಿಯಾಗಿರಲು ಹೆದರಿ ತನ್ನ ದೈವಿಕ ಶಕ್ತಿಯನ್ನು ಬಳಸಿ ಗಣೇಶ ಎಂಬ ಮಗನನ್ನು ಸೃಷ್ಟಿಸಿ, ಮನೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಅವನಿಗೆ ವಹಿಸಿದಳು. ಶಿವ ಮತ್ತು ಅವನ ಸೈನ್ಯವು ವಿಜಯಶಾಲಿಯಾಗಿ ಅವನ ಮನೆಗೆ ಹಿಂತಿರುಗಿದಾಗ, ಪಾರ್ವತಿ ಸ್ನಾನಗೃಹದಲ್ಲಿದ್ದಳು ಮತ್ತು ಗಣೇಶನಿಗೆ ಯಾರನ್ನೂ ಒಳಗೆ ಬಿಡಬಾರದೆಂದು ಕಟ್ಟುನಿಟ್ಟಾಗಿ ಅಪ್ಪಣೆ ನೀಡಿದ್ದಳು. ಹಾಗಾಗಿ ಗಣೇಶನು ಮನೆಗೆ ಒಳಗೆ ಬಿಡಲು ಶಿವನನ್ನು ನಿರಾಕರಿಸಿದ್ದರಿಂದ ಕೋಪಗೊಂಡ ಶಿವ ಮತ್ತು ಅವನ ಸೈನ್ಯವು ಹುಡುಗನ ತಲೆಯನ್ನು ಕತ್ತರಿಸಿತು. ಪಾರ್ವತಿ ಸ್ನಾನಗೃಹದಿಂದ ಹೊರಬಂದಾಗ, ತನ್ನ ಮಗ ಸತ್ತಿರುವುದನ್ನು ನೋಡಿ ಅವಳು ಆಘಾತಕ್ಕೊಳಗಾದಳು ಮತ್ತು ದುಃಖಿತಳಾದಳು. ಆದರೂ ಸಹ ಕೋಪಗೊಂಡ ಶಿವನನ್ನು ಸಮಾಧಾನಪಡಿಸಲು, ಗಣೇಶನ ತಲೆಯನ್ನು ಬೆಟ್ಟವನ್ನು ಹತ್ತಿದ ಮೊದಲ ಜೀವಿಯ ತಲೆಯಿಂದ ಬದಲಾಯಿಸಲಾಗುವುದು ಎಂದು ಅವಳು ಘೋಷಿಸಿದಳು. ಆದರೆ ಬೆಟ್ಟಕ್ಕೆ ಮೊದಲು ಬಂದ ಜೀವಿ ಆನೆಯಾಗಿತ್ತು ಹಾಗಾಗಿ ಪಾರ್ವತಿ ದೇವಿಯ ಘೋಷಣೆಯಂತೆಯೇ ಅದರ ತಲೆಯನ್ನು ತಕ್ಷಣವೇ ಕತ್ತರಿಸಿ ಗಣೇಶನ ತಲೆಯ ಮೇಲೆ ಇರಿಸಿ ಆತನಿಗೆ ಮರುಜನ್ಮ ನೀಡಲಾಯಿತು. ಆದರೆ ಆನೆಯ ತಲೆ ಗಣೇಶನನ್ನು ವಿಶೇಷವಾಗಿ ಕಾಣುವಂತೆ ಮಾಡಿತು. ಇದನ್ನರಿತ ಶಿವನು ತನ್ನ ಹೆಂಡತಿಯನ್ನು ಮತ್ತಷ್ಟು ಸಮಾಧಾನಪಡಿಸಲು ಮತ್ತು ತನ್ನ ಸ್ವಂತ ಮಗನನ್ನು ಕೊಂದ ಕೃತ್ಯಕ್ಕೆ ಪರಿಹಾರವಾಗಿ, ಶಿವನು ಗಣೇಶನಿಗೆ ದೇವರ ಶಕ್ತಿಯನ್ನು ದಯಪಾಲಿಸಿ, ಇನ್ನು ಮುಂದೆ ನಿನ್ನ ಹೆಸರು ಮತ್ತು ಆಶೀರ್ವಾದಗಳನ್ನು ಪ್ರಾರ್ಥಿಸದೆ ಯಾವುದೇ ಚಟುವಟಿಕೆ ಪ್ರಾರಂಭವಾಗುವುದಿಲ್ಲ ಎಂದು ಆಶೀರ್ವದಿಸಿದನು. ಅಂದಿನಿಂದ ಹಿಂದೂಗಳ ಯಾವುದೇ ಹೊಸ ಕಾರ್ಯಗಳು ಗಣಪತಿಯ ಪೂಜೆ ಇಲ್ಲದೆ ಪೂರ್ಣಗೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ.
ಗಣೇಶನ ಜನನದ ಬಗ್ಗೆ ಇನ್ನೊಂದು ಕಥೆಯು, ದೇವತೆಗಳ ಕೋರಿಕೆಯ ಮೇರೆಗೆ ಶಿವ ಮತ್ತು ಪಾರ್ವತಿ ಅವನನ್ನು ರಾಕ್ಷಸ ಜೀವಿಗಳ ಮಾರ್ಗದಲ್ಲಿ ವಿಘ್ನಕರ್ತ (ಅಡೆತಡೆ-ಸೃಷ್ಟಿಕರ್ತ) ಮತ್ತು ದೇವತೆಗಳಿಗೆ ಸಹಾಯ ಮಾಡಲು ವಿಘ್ನಹರ್ತ (ಅಡೆತಡೆಯನ್ನು ನಿವಾರಿಸುವವ)ನಾಗಿ ಸೃಷ್ಟಿಸಿದರು ಎಂದು ಹೇಳುತ್ತದೆ.
‘ಶಿವ ಪುರಾಣ’ದ ಪ್ರಕಾರ, ತನ್ನ ಸಹಚರರಾದ ಜಯ ಮತ್ತು ವಿಜಯರ ಸಲಹೆಯ ಮೇರೆಗೆ ಪಾರ್ವತಿ ತನ್ನ ದೇಹದ ಮಣ್ಣಿನಿಂದ ಮಾನವ ಆಕೃತಿಯನ್ನು (ಗಣೇಶ) ಮಾಡಿದ ನಂತರ ಅವಳು ಅವನನ್ನು ತನ್ನ ‘ದ್ವಾರಪಾಲಕನಾಗಿ’ ಇರಿಸಿಕೊಂಡಳು. ಈ ಸಂದರ್ಭದಲ್ಲಿ ಶಿವನು ಕೈಲಾಸಕ್ಕೆ ಹಿಂತಿರುಗಿ ಬಂದಾಗ, ಅವನನ್ನೂ ಸಹ ಒಳಗೆ ಹೋಗಲು ಗಣೇಶ ಬಿಡಲಿಲ್ಲ. ಇದರಿಂದ ಕೋಪಗೊಂಡ ಶಿವನ ಸೈನ್ಯವು ಗಣೇಶನ ವಿರುದ್ಧ ಸಮರವನ್ನು ಮಾಡಿತು. ಆದರೆ ಗಣೇಶನು ಶಿವನ ಸೈನ್ಯವನ್ನು ಸೋಲಿಸಿದನು. ಈ ಸೋಲು ಶಿವನ ಕೋಪವನ್ನು ಮತ್ತಷ್ಟು ಕೆರಳಿಸಿ ಗಣೇಶನ ತಲೆಯನ್ನೇ ಕತ್ತರಿಸುವಂತೆ ಮಾಡಿತು. ಈ ಘಟನೆಯ ಬಗ್ಗೆ ಕೇಳಿದ ಪಾರ್ವತಿ ದುಃಖಿತಳಾಗಿ, ಕೋಪಗೊಂಡು ನೂರಾರು ಮತ್ತು ಸಾವಿರಾರು ದೇವತೆಗಳನ್ನು ಸೃಷ್ಟಿಸಿದಳು. ಈ ದೇವತೆಗಳು ವಿನಾಶವನ್ನೇ ಪ್ರಾರಂಭಿಸಿದರು. ಈ ಹೋರಾಟ ಎಷ್ಟು ಭೀಕರವಾಗಿತ್ತೆಂದರೆ, ಕೊನೆಗೆ ದೇವತೆಗಳೇ ಪಾರ್ವತಿಯ ಬಳಿಗೆ ಹೋಗಿ ಯುದ್ಧ ನಿಲ್ಲಿಸುವಂತೆ ಕ್ಷಮೆ ಯಾಚಿಸಿದರು. ಆದರೆ ಪಾರ್ವತಿ ತಾನು ಸೃಷ್ಟಿಸಿದ ಮಗ ಜೀವಂತವಾಗಿ ಬಂದು ದೇವತೆಗಳಲ್ಲಿ ಮುಖ್ಯ ಪೀಠಾಧಿಪತಿಯಾಗಿ ಗೌರವಾನ್ವಿತ ಸ್ಥಾನಮಾನವನ್ನು ಪಡೆದರೆ ಮಾತ್ರ ಅದನ್ನು ನಿಲ್ಲಿಸಲು ಒಪ್ಪಿಕೊಂಡಳು. ಶಿವನು ಗಣೇಶನನ್ನು ತನ್ನ ಮಗನೆಂದು ಅರಿತು ನಂತರ ಗಣೇಶನ ತಲೆಯಿಲ್ಲದ ದೇಹಕ್ಕೆ ಒಂದೇ ದಂತದ ಆನೆಯ ತಲೆಯನ್ನು ನೀಡಿ ಜೀವಂತ ಮಾಡಲಾಯಿತು. ಜೀವಕ್ಕೆ ಬಂದ ನಂತರ ಗಣೇಶನ ಮೈಬಣ್ಣ ಕೆಂಪು ಬಣ್ಣದ್ದಾಗಿತ್ತು. ನಂತರ ಗಣೇಶನು ಕ್ಷಮೆಯಾಚಿಸಿ ದೇವರುಗಳಿಗೆ ಮತ್ತು ಅವನ ತಂದೆ ಶಿವನಿಗೆ ನಮಸ್ಕರಿಸಿದನು. ಶಿವನು ಅವನು ಸದಾ ಸಂತೋಷವಾಗಿರಲು ಅವನಿಗೆ ‘ವಿಘ್ನಹರ್ತ’ ಎಂದು ಹೇಳುತ್ತದೆ.
‘ಮತ್ಸ್ಯ ಪುರಾಣ’ ಮತ್ತು ‘ಪದ್ಮ ಪುರಾಣ’ದಲ್ಲಿ ಗಣೇಶನ ವಿವಿಧ ಜನ್ಮ ಕಥೆಗಳನ್ನು ನೀಡಲಾಗಿದೆ.
ಪಾರ್ವತಿಗೆ ಗಂಡು ಮಗು ಬೇಕೆಂದು ಅಪಾರ ಆಸೆ ಇತ್ತು. ಒಂದು ದಿನ ಅವಳು ತನ್ನ ದೇಹದ ಮಣ್ಣಿನಿಂದ ಆನೆಯ ತಲೆಯಂತ ಆಟಿಕೆಯನ್ನು ಮಾಡಿ ಅದನ್ನು ಗಂಗಾ ನದಿಯಲ್ಲಿ ಮುಳುಗಿಸಿದಳು. ಅಲ್ಲಿ ಆ ಸಣ್ಣ ಆಟಿಕೆ ಅಗಾಧ ಗಾತ್ರ ಮತ್ತು ಜೀವವನ್ನು ಪಡೆದುಕೊಂಡಿತು. ಪಾರ್ವತಿ (ಉಮಾ) ಮತ್ತು ಜಾಹ್ನವಿ (ಗಂಗಾ) ಇಬ್ಬರೂ ಅವನನ್ನು ‘ಮಗ’ ಎಂದು ಸಂಬೋಧಿಸಿದ್ದರಿಂದ ಅವನು ‘ಗಂಗೇಯ’ ಮತ್ತು ‘ಗಜಾನನ’ ಎಂದು ಪ್ರಸಿದ್ಧನಾದನು. ‘ಗಜ’ ಎಂದರೆ ಆನೆ ಮತ್ತು ‘ಆನನ’ ಎಂದರೆ ಮುಖ, ಆದ್ದರಿಂದ ಪಾರ್ವತಿಯ ಮಗ ‘ಗಜಾನನ’ ಎಂದು ಪ್ರಸಿದ್ಧನಾದನು. ಶಂಕರನು ಅವನನ್ನು ತನ್ನ ಸೈನ್ಯಗಳ ದೇವತೆಯನ್ನಾಗಿ ಮಾಡಿದನು. ಹೀಗಾಗಿ ಅವನ ಹೆಸರು ಗಣೇಶ (ಗಣ-ಸೈನ್ಯ, ಈಶ-ಒಡೆಯ/ದೇವರು) ಅಥವಾ ಗಣಪತಿ. ಅಂದರೆ ‘ಸೇನೆಗಳ ಪ್ರಭು’ ಎಂದರ್ಥ.
‘ವರಾಹ ಪುರಾಣ’ದಲ್ಲಿ ಗಣೇಶನ ಬಹಳ ಆಸಕ್ತಿದಾಯಕ ಜನನ ಕಥೆಯನ್ನು ವಿವರಿಸಲಾಗಿದೆ. ಶಿವನ ನಗುವಿನಿಂದಲೇ ಗಣೇಶನು ಅಸ್ತಿತ್ವಕ್ಕೆ ಬಂದನೆಂದು ಅದು ವಿವರಿಸುತ್ತದೆ. ಅವನು ಹುಟ್ಟಿದಾಗ ತುಂಬಾ ಸುಂದರನಾಗಿದ್ದರಿAದಾಗಿ ಪಾರ್ವತಿ ಅವನನ್ನು ಸ್ವಲ್ಪವೂ ಬಿಡದೇ ನೋಡುತ್ತಿದ್ದಳು. ಅದನ್ನು ನೋಡಿ ಶಿವನಿಗೆ ಅಸೂಯೆಯಾಗಿ ಅವನು ಗಣೇಶನನ್ನು ಆನೆಯ ತಲೆ, ಮಡಕೆ ಹೊಟ್ಟೆ ಮತ್ತು ನಾಗ-ಯಜ್ಞೋಪವೀತ ಧರಿಸಿ ವಿಕಾರವಾಗಿರಲು ಶಪಿಸಿದನು. ಆದರೆ ನಂತರ ಪಶ್ಚಾತ್ತಾಪದಿಂದ ಶಿವನು ಅವನನ್ನು ತನ್ನ ಗಣಗಳ ಮುಖ್ಯಸ್ಥನನ್ನಾಗಿ ನೇಮಿಸಿ ‘ಶಂಕರಪುತ್ರ’ ಎಂದು ಕರೆದು ಪ್ರತಿಯೊಂದು ಕೆಲಸದ ಮೊದಲು ಅಡೆತಡೆಗಳನ್ನು ತಪ್ಪಿಸಲು ನಿನ್ನನ್ನು ಪೂಜಿಸಲೇ ಬೇಕೆಂದು ಶಿವನು ವರ ನೀಡಿದನು. ಹೀಗಾಗಿ ಈತನಿಗೆ ‘ವಿಘ್ನರಾಜ’ ಎಂಬ ಹೆಸರು ಬಂತೆಂದು ಹೇಳುತ್ತದೆ.
‘ವಾಮನ ಪುರಾಣ’ವು ಗಣೇಶನ ಜನನದ ಬಗ್ಗೆ ಸ್ವಲ್ಪ ವಿಭಿನ್ನವಾದ ಆವೃತ್ತಿಯನ್ನು ನೀಡುತ್ತದೆ. ಪಾರ್ವತಿ ತನ್ನ ದೇಹದ ಮಣ್ಣಿನಿಂದ ನಾಲ್ಕು ತೋಳುಗಳ, ಪೂರ್ಣ ಎದೆಯ ಆನೆಯ ಮುಖವನ್ನು ಹೊಂದಿರುವ ಗಂಡು ಜೀವಿಯ ಒಂದು ಆಟಿಕೆಯನ್ನು ಮಾಡಿ ಅದನ್ನು ತನ್ನ ಸಿಂಹಾಸನದ ಕೆಳಗೆ ಇಟ್ಟು ಸ್ನಾನಕ್ಕೆ ಹೋದಳು. ಈ ಸಂದರ್ಭದಲ್ಲಿ ಸ್ನಾನ ಮಾಡಿ ಶಿವನು, ಪಾರ್ವತಿಯು ತನ್ನ ದೇಹದ ಮಣ್ಣಿನಿಂದ ಮಾಡಲ್ಪಟ್ಟ ಪುರುಷ ಜೀವಿಯನ್ನು ಇಟ್ಟಿದ ಅದೇ ಸಿಂಹಾಸನದ ಮೇಲೆ ಕುಳಿತಾಗ ಉಮಾ (ಪಾರ್ವತಿ) ಮತ್ತು ಶಿವನ ತೇವಾಂಶವು ಭೂಮಿಯ ಲ್ಲಿ ಬೆರೆತು ಹೋಗಿ ಸಿಂಹಾಸನದ ಕೆಳಗೆ ಇಟ್ಟಿದ ಆನೆ ಮುಖದ ಜೀವಿಯ ಸೊಂಡಿಲಿನಿಂದ ಒಬ್ಬ ವ್ಯಕ್ತಿ ಹೊರಹೊಮ್ಮಿದನು. ಇದನ್ನು ಕಂಡ ಶಿವನು ಅವನನ್ನು ಪಾರ್ವತಿಯು ಸೃಷ್ಟಿಸಿದ್ದರಿಂದ ಆತ ತನ್ನ ಮಗನೆಂದು ಗುರುತಿಸಿ ಸಂತೋಷಪಟ್ಟನೆಂದು ಹೇಳುತ್ತದೆ.
‘ಲಿಂಗ ಪುರಾಣ’ವು ಶಿವನು ಸ್ವತಃ ಅಂಬಿಕಾ (ಪಾರ್ವತಿ)ಯ ಗರ್ಭವನ್ನು ಪ್ರವೇಶಿಸಿದಾಗ ಗಣೇಶೇಶ್ವರ ಎಂಬ ಸುಂದರ ಹುಡುಗ ಜನಿಸಿದನೆಂದು ವಿವರಿಸುತ್ತದೆ. ಅಂಬಿಕಾ ಆನೆ ಮುಖದ ಭಗವಾನ್ ಗಜಾನನನನ್ನು ಸ್ವಾಗತಿಸಿದಳು. ದುಷ್ಟ ಜೀವಿಗಳಾದ ಅಸುರರು – ರಾಕ್ಷಸರ ಮಾರ್ಗಗಳಿಗೆ ಅಡ್ಡಿಯಾಗಲು ಅವನು ಜನಿಸಿದ ಕಾರಣ ಅವನಿಗೆ ‘ವಿಘ್ನೇಶ್ವರ’ ಎಂಬ ಹೆಸರು ಬಂತೆAದು ಹೇಳುತ್ತದೆ.
‘ಬ್ರಹ್ಮ ಪುರಾಣ’ವು ಅಂಬಿಕಾಳು ಗರ್ಭಧರಿಸಿದ ಕ್ಷಣದಲ್ಲೇ ಗಣೇಶನು ಮಗನಾಗಿ ಜನಿಸಿದನೆಂದು ಉಲ್ಲೇಖಿಸುತ್ತದೆ. ಆದ್ದರಿಂದ ದೇವತೆಗಳು ಅವನನ್ನು ‘ಸದ್ಯೋಜಾತ’ (ತ್ರಿಶೂಲದಲ್ಲಿ ಜನಿಸಿದ) ಎಂದು ಕರೆದರೆಂದು ತಿಳಿಸುತ್ತದೆ.
‘ಸ್ಕಂದ ಪುರಾಣ’ವು ಗಣೇಶನ ಜನನದ ಮೂರು ಕಥೆಗಳನ್ನು ನೀಡುತ್ತದೆ.
ಸ್ವರ್ಗವು ಮನುಷ್ಯರ ವಲಸೆಯಿಂದ ತುಂಬಿ ತುಳುಕಿ ಸ್ಥಳಾವಕಾಶ ಕಲ್ಪಿಸಿಕೊಡಲು ಸಾಧ್ಯವಾಗದೇ ಇದ್ದಾಗ ದೇವತೆಗಳು ಚಿಂತಿತರಾಗಿ ಇದನ್ನು ತಡೆಯಲು ಒಂದು ಮಾರ್ಗವನ್ನು ಕಂಡುಕೊಳ್ಳುವಂತೆ ಶಿವನನ್ನು ಕೇಳಿಕೊಂಡರು. ದೇವರುಗಳ ಕೋರಿಕೆಯನ್ನು ಕೇಳಿದ ನಂತರ, ಶಿವನು ಪಾರ್ವತಿಯತ್ತ ದೃಷ್ಟಿ ಹಾಯಿಸಿದಾಗ ಅವಳು ತನ್ನ ದೇಹವನ್ನು ಉಜ್ಜಿಲು ಪ್ರಾರಂಭಿಸಿದಾಗ ಅದರಿಂದ ಬಂದಂತಹ ಮಣ್ಣಿನಿಂದ ಅವಳು ನಾಲ್ಕು ತೋಳುಗಳು ಮತ್ತು ಆನೆಯ ತಲೆಯಿರುವ ಮಾನವ ಆಕೃತಿಯನ್ನು ಮಾಡಿದಳು. ಈ ನವಜಾತ ಶಿಶುವಿಗೆ ದುಷ್ಟ ಜೀವಿಗಳ ಮಾರ್ಗಗಳಲ್ಲಿ ಅಡೆತಡೆಗಳನ್ನು ಹಾಕಲು ಸೂಚಿಸಲಾಯಿತು. ಇದರಿಂದ ದೇವರುಗಳು ತಮ್ಮ ದುಃಖದಿಂದ ಮುಕ್ತರಾದರು.
ಒಂದೊಮ್ಮೆ ವಾಯುದೇವನು ತಮ್ಮನ್ನು ರಕ್ಷಿಸಲು ಶಿವನಿಗೆ ಸಂತಾನವಿಲ್ಲದೇ ಚಿಂತಿತರಾಗಿದ್ದಾರೆಂದು ಹೇಳಿದಾಗ, ಇದನ್ನು ಕೇಳಿ ಕೋಪಗೊಂಡ ಪಾರ್ವತಿ (ಗೌರಿ) ಶಿವನನ್ನು ಬಿಟ್ಟು ‘ಅರ್ಬುದ’ ಪರ್ವತಕ್ಕೆ ತಪಸ್ಸು ಮಾಡಲು ಹೋದಳು. ಇದನ್ನರಿತ ಶಿವನು ಅಲ್ಲಿಗೆ ಬಂದು ಗೌರಿಯಲ್ಲಿ ‘ನಾಲ್ಕನೇ ದಿನ ಗಂಡು ಮಗು ಜನಿಸುತ್ತದೆ’ ಎಂದು ಹೇಳಿದನು. ಹೀಗೆ ಅವಳು ಸ್ನಾನ ಮಾಡುವ ಸಂದರ್ಭದಲ್ಲಿ ತನ್ನ ದೇಹ ಮಣ್ಣಿನಿಂದ ಒಂದು ಮಾನವ ಆಕೃತಿಯನ್ನು ಸೃಷ್ಟಿಸಿ ಜೀವಕಳೆಯನ್ನು ಕೊಟ್ಟಳು. ಆತನೇ ‘ವಿನಾಯಕ’.
ಪಾರ್ವತಿಯು ಬಿಡುವಿನ ಸಂದರ್ಭದಲ್ಲಿ ಮೋಜಿಗಾಗಿ ತನ್ನ ದೇಹದ ಮಣ್ಣಿನಿಂದ ಒಂದು ಆಕೃತಿಯನ್ನು ಮಾಡಿದಳು. ಆದರೆ ಆ ಆಕೃತಿಯು ತಲೆಯಿಲ್ಲದಂತೆ ಉಳಿಯಿತು. ಆದ್ದರಿಂದ ಪಾರ್ವತಿ ಸ್ಕಂದನಿಗೆ ಆ ತಲೆಯಿಲ್ಲದ ಆಕೃತಿಗಾಗಿ ಆನೆಯ ತಲೆಯನ್ನು ತರಲು ಹೇಳಿದಾಗ, ಸ್ಕಂದನು ಆಕೃತಿಗೆ ಸರಿ ಹೊಂದದ ತುಂಬಾ ದೊಡ್ಡದಾದ ಆನೆಯ ತಲೆಯನ್ನು ತಂದನು. ಪಾರ್ವತಿ ಈ ತಲೆಯನ್ನು ನಿರಾಕರಿಸಿದರೂ ಅದು ವಿಧಿಯ ಕ್ರಿಯೆಯಿಂದ ತಲೆಯಿಲ್ಲದ ದೇಹದ ಆಕೃತಿಗೆ ಸೇರಿಕೊಂಡಿತು. ಇದನ್ನು ಅರಿತುಕೊಂಡ ಶಿವನು ಅವನಿಗೆ ‘ಮಹಾವಿನಾಯಕ’ ಎಂಬ ಹೆಸರನ್ನು ನೀಡಿದನು.
‘ಸುಪ್ರಭೇದಾಗಮ’ವು ಸ್ವಲ್ಪ ವಿಭಿನ್ನವಾದ ಜನ್ಮ ಗಣೇಶನ ಕಥೆಯನ್ನು ನೀಡುತ್ತದೆ. ಅದರ ಪ್ರಕಾರ ಶಿವ ಮತ್ತು ಪಾರ್ವತಿ ಕಾಡಿನಲ್ಲಿ ಗಂಡು ಮತ್ತು ಹೆಣ್ಣಾನೆಗಳ ರೂಪವನ್ನು ಧರಿಸಿ, ತಮ್ಮನ್ನು ತಾವು ಆನಂದಿಸಿದ ನಂತರ ಆನೆಯ ತಲೆಯೊಡನೆ ಗಣೇಶನು ಜನಿಸಿದನೆಂದು ಶಿವನು ಸ್ವತಃ ಗಣೇಶನಿಗೆ ಹೇಳಿದ ಎಂದು ಹೇಳುತ್ತದೆ.
ಹಿಂದೂಗಳ ಮಹಾಕಾವ್ಯ ‘ಮಹಾಭಾರತ’ದ ಶ್ಲೋಕಗಳನ್ನು ಮಹರ್ಷಿ ವೇದವ್ಯಾಸರು ಹೇಳಿದಂತೆ ಗಣೇಶನು ಬರೆದಿದ್ದಾನೆಂದು ನಂಬಲಾಗಿದೆ. ಪ್ರಾಚೀನ ಹಿಂದೂ ಗ್ರಂಥಗಳು ಸಹ ಗಣೇಶನ ಬುದ್ಧಿವಂತಿಕೆಯ ಬಗ್ಗೆ ತಿಳಿಸುತ್ತದೆ. ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಅವನ ಮತ್ತು ಅವನ ಸಹೋದರ ಕಾರ್ತಿಕೇಯನ ನಡುವಿನ ಸ್ಪರ್ಧೆಯ ಬಗ್ಗೆ. ಕಾರ್ತಿಕೇಯನು ತನ್ನ ವಾಹನವಾದ ನವಿಲಿನ ಬಗ್ಗೆ ಮತ್ತು ತನ್ನದೇ ಆದ ವೇಗ ಮತ್ತು ದಕ್ಷತೆಯ ಬಗ್ಗೆ ತುಂಬಾ ಹೆಮ್ಮೆಪಟ್ಟಿಕೊಂಡಿರುತ್ತಾನೆ. ದೇವರು ಗಣೇಶನನ್ನು ಏಳು ಬಾರಿ ಪ್ರಪಂಚದಾದ್ಯಂತ ಓಟಕ್ಕೆ ಸವಾಲು ಹಾಕಿದನು. ಕಾರ್ತಿಕೇಯನು ಮೂರು ಬಾರಿ ಪ್ರಪಂಚ ಪ್ರವಾಸ ಮಾಡಿದರೆ, ಗಣೇಶನು ತನ್ನ ಹೆತ್ತವರಾದ ಶಿವ ಮತ್ತು ಪಾರ್ವತಿಯನ್ನು ಏಳು ಬಾರಿ ಸುತ್ತುವರೆದು ವಿಜಯ ಸಾಧಿಸಿದನು. ಈ ಕಥೆಯು ಮಕ್ಕಳಲ್ಲಿ ದೇವರು ಮತ್ತು ಅವರ ಹೆತ್ತವರ ಮಹತ್ವವನ್ನು ಬೆಳೆಸುವುದಕ್ಕೆ ಸಂಬಂಧಿಸಿದೆ.
ಮುಂದುವರೆಯುವುದು….
Leave a Reply