
ಉಡುಪಿ: ಬಸವಣ್ಣನವರ ನೇತೃತ್ವದ ಶರಣರ ಬಳಗದ ಚಿಂತನೆಗಳನ್ನು ಜನಸಾಮಾನ್ಯರಲ್ಲಿ ಬಿತ್ತಲೋಸುಗ ಲಿಂಗಾಯತ ಒಕ್ಕೂಟ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಸವ ಸಂಸತಿ ಅಭಿಯಾನ ಆಯೋಜಿಸುತ್ತಿದ್ದು, 18ರಂದು ಪುರಭವನದಲ್ಲಿ ವಚನ ಸಂವಾದ, ಸಾಮರಸ್ಯ ನಡಿಗೆ, ಸಾರ್ವಜನಿಕ ಸಮಾವೇಶ ಮತ್ತು ನಾಟಕ ಕಾರ್ಯಕ್ರಮ ನಡೆಯಲಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿರಂಜನ ಸಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 11 ಗಂಟೆಗೆ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಯಲಿದೆ. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದದೇವರು, ತೋಂಟದಾರ್ಯ ಸಂಸ್ಥಾನದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಕೂಡಲ ಸಂಗಮ ಬಸವಧರ್ಮ ಪೀಠದ ಡಾ. ಗಂಗಾಮಾತಾಜಿ, ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು.
ಮಧ್ಯಾಹ್ನ 3.30 ರಿಂದ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಸ್ಮಾರಕದಿಂದ ಪುರಭವನದವರೆಗೆ ಸಾಮರಸ್ಯ ನಡಿಗೆ ಮೆರವಣಿಗೆ ನಡೆಯಲಿದೆ. ಸಾಯಂಕಾಲ 5 ಗಂಟೆಗೆ ಸಾರ್ವಜನಿಕ ಸಮಾವೇಶದಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು ‘ಲಿಂಗಾಯತ ಧರ್ಮದ ನೀತಿಶಾಸ್ತ್ರ’ ವಿಷಯದ ಮೇಲೆ ಮತ್ತು ಡಾ. ರಂಜಾನ್ ದರ್ಗಾ ‘ಕಲ್ಯಾಣದ ಬೆಳಕು’ ವಿಷಯದ ಮೇಲೆ ಉಪನ್ಯಾಸ ನೀಡಲಿದ್ದಾರೆ.
ಜಾಗತಿಕ ಮಹಾಸಭೆಯ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಜಾಮದಾರ್ ಭಾಗವಹಿಸಲಿದ್ದಾರೆ ಎಂದರು.
ನಂತರ ಸಾಣೇಹಳ್ಳಿ ಶಿವಸಂಚಾರ ತಂಡದಿಂದ ‘ಜಂಗಮದೆಡೆಗೆ’ ನಾಟಕ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮದ ಅಂಗವಾಗಿ ಶಿವಸಂಚಾರ ತಂಡದಿಂದ ವಚನ ಸಂಗೀತ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಬಸವ ಸಮಿತಿ ಅಧ್ಯಕ್ಷ ಗಂಗಾಧರ, ಪ್ರಮುಖರಾದ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ರಾಮನಗೌಡ ಚೌಧರಿ, ಮಹಾದೇವಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
Leave a Reply