
ಕೋಟ: 42 ಸಂವತ್ಸರಗಳಿoದ ವಿವಿಧ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ವಾಸ್ತುತಜ್ಞ ಡಾ| ಕೆ. ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಇವರಿಗೆ 2025-26ರ ಸಾಲಿನ “ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲು ಆಯ್ಕೆ ಸಮಿತಿ ಆಯ್ಕೆ ಮಾಡಿದ್ದಾರೆಂದು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನೀಯರಿAಗ್ ಪ್ರತಿಷ್ಠಾನ ಟ್ರಸ್ಟ್ ಮತ್ತು ಅಂತರಾಷ್ಟ್ರೀಯ ಪ್ರತಿಷ್ಠಾನದ ವೇದಿಕೆ ಅಧ್ಯಕ್ಷರಾದ ಪತ್ರಕರ್ತ ರಮೇಶ್ ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವರಾಜ್ ಶೆಟ್ಟಿಗಾರರು ಪ್ರಸಂಗಕರ್ತರಾಗಿ, ಪತ್ರಕರ್ತರಾಗಿ, ನಾಟಕಕರ್ತರಾಗಿ, ಕಾದಂಬರಿಗಾರರಾಗಿ, ನಟ ನಿರ್ದೇಶಕರಾಗಿ, ಚಲನಚಿತ್ರ ನಟನಾಗಿ, ಧಾರ್ಮಿಕ ಕ್ಷೇತ್ರ ರೂವಾರಿಯಾಗಿ, ಯುವ ಸಂಘಟಕರಾಗಿ 45 ವರ್ಷಗಳಿಂದ ವಿವಿಧ 16 ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಾಸ್ತು ಹಾಗೂ ಜ್ಯೋತಿಷ್ಯ ಕ್ಷೇತ್ರದಲ್ಲಿ 21 ವರ್ಷ ಸೇವೆ ನೀಡುವುದರೊಂದಿಗೆ ಶೆಟ್ಟಿಗಾರರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಾಧನೆಗೆ ಸಂದ ಗೌರವವಾಗಿದೆ.
ಶೆಟ್ಟಿಗಾರರು 71 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು 19 ನಾಟಕಗಳಲ್ಲಿ 2 ನಾಟಕ ಜಿಲ್ಲಾ ಪ್ರಶಸ್ತಿ ಲಭಿಸಿದೆ. 4 ಕಾದಂಬರಿಗಳನ್ನು ರಚಿಸಿದ ಶ್ರೀಯುತರು ನೂರಾರು ಭಕ್ತಿಗೀತೆ, ಭಾವಗೀತೆ, ಜಾನಪದಗೀತೆ, ಕಥೆಗಳನ್ನು ರಚಿಸಿದ್ದು ಚಿತ್ರ ನಟನಾಗಿ, ನಾಟಕ ಕಲಾವಿದರಾಗಿ, ನಿರ್ದೇಶಕನಾಗಿ, ತಾಳಮದ್ದಲೆ ಅರ್ಥಧಾರಿಯಾಗಿ, ಯಾವುದೇ ವಿಚಾರದಲ್ಲಿ ಅಧಿಕಾರವಾಣಿಯಿಂದ ಮಾತನಾಡುವ ಸಂಪನ್ಮೂಲ ವ್ಯಕ್ತಿಯಾಗಿ, 22ಕ್ಕೂ ಮಿಕ್ಕಿ ಸಂಘ – ಸಂಸ್ಥೆಗಳನ್ನು ಸ್ಥಾಪಿಸಿದ್ದು 8 ಸಂಘಟನೆಗಳು ತಮ್ಮ ಬೆಳ್ಳಿ ಹಬ್ಬವನ್ನು ಆಚರಿಸಿ ಸುವರ್ಣ ಮಹೋತ್ಸವದ ಎಡೆಗೆ ಸಾಗುತ್ತಿದೆ.
ಈಗಾಗಲೇ ಅಭಿಮಾನಿಗಳಿಂದ 651 ಸನ್ಮಾನವನ್ನು ಸ್ವೀಕರಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸ್ಕಂದಪ್ರಶಸ್ತಿ, ಡಾ| ಶಿವರಾಮ ಕಾರಂತ ರಾಜ್ಯ ಪ್ರಶಸ್ತಿ, ಕಲಾಸಾಧಕ ರಾಜ್ಯ ಪ್ರಶಸ್ತಿ, ಬಸವರತ್ನ ರಾಷ್ಟ್ರ ಪ್ರಶಸ್ತಿ, ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಭೂಷಣ, ಭಾರತಭೂಷಣ, ವಾಸ್ತುಕಲಾರತ್ನ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಈಗಾಲೇ ಪಡೆದುಕೊಂಡ ಶೆಟ್ಟಿಗಾರರು 51 ಕ್ಷೇತ್ರಗಳ ಅಧ್ಯಯನ ಮಾಡಿ 51 ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರಸಂಗವನ್ನು ಬರೆದು ರಂಗಕ್ಕೆ ನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇದೇ ಬರುವ ಅಕ್ಟೋಬರ್ 16ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ವರ್ಣರಂಜಿತ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಐಎಎಸ್ ಅಧಿಕಾರಿ ಡಾ. ಸಿ.ಸೋಮಶೇಖರ ಅಧ್ಯಕ್ಷತೆಯಲ್ಲಿ ಬೆಳಗಾವಿ ಅಥಣಿ ಮಠದ ಶ್ರೀ ಪ್ರಭು ಚೆನ್ನಬಸವ ಮಹಾಸ್ವಾಮಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
Leave a Reply